ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ಯಾರ ನಂಬರ್ ಬಗ್ಗೆ ಮಾತನಾಡಲು ಹೋಗುವುದಿಲ್ಲ, ನನ್ನ ಅಧ್ಯಕ್ಷತೆಯಲ್ಲಿ 135 ಕ್ಷೇತ್ರಗಳನ್ನು ಗೆದ್ದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ಇಂದು ನನ್ನ ಹುಟ್ಟುಹಬ್ಬ. ಗುರುಗಳನ್ನು ಭೇಟಿಯಾಗಬೇಕು. ನನ್ನ ಖಾಸಗಿ ಕಾರ್ಯಕ್ರಮ ಮುಗಿಸಿ ದೆಹಲಿಗೆ ತೆರಳುತ್ತೇನೆ ಎಂದರು.
ಯಾವ ನಂಬರ್ ಬಗ್ಗೆಯೂ ನಾನು ಮಾತನಾಡಲ್ಲ, ನನ್ನ ಅಧ್ಯಕ್ಷತೆಯಲ್ಲಿ 135 ಸೀಟು ಗೆದ್ದಿದ್ದೇವೆ. ನನ್ನ ಬತ್ತಳಿಕೆಯಲ್ಲಿ ಇನ್ನೂ ಅಸ್ತ್ರಗಳಿದ್ದವು. ಕಾಂಗ್ರೆಸ್ ಗೆ ಈಬಾರಿ ಹೆಚ್ಚಿನ ಕ್ಷೇತ್ರ ಗೆಲ್ಲುವ ಅವಕಾಶವಿತ್ತು. ಆದರೆ ಎಲ್ಲಾ ಕ್ಷೇತ್ರಗಳಿಗೆ ಹೋಗಲು ನನಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ಯಾವ ಶಾಸಕರು ನನ್ನ ಬಳಿ ಇಲ್ಲ, ಇರುವ 135 ಶಾಸಕರು ಕಾಂಗ್ರೆಸ್ ನವರು. ಎಲ್ಲಾ 135 ಶಾಸಕರು ಕಾಂಗ್ರೆಸ್ ಪಕ್ಷದವರು. ಪಕ್ಷದ ಅಧ್ಯಕ್ಷನಾಗಿ ನಾನು ನನ್ನ ವರದಿಯನ್ನು ಹೈಕಮಾಂಡ್ ಗೆ ಒಪ್ಪಿಸಿದ್ದೆನೆ. ಸಿಎಂ ಆಯ್ಕೆ ಹೈಕಮಾಂಡ್ ಗೆ ಬಿಟ್ಟದ್ದು ಎಂದು ನಿನ್ನೆ ನಡೆದ ಸಿಎಲ್ ಪಿ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಡಬಲ್ ಇಂಜಿನ್ ಸರ್ಕಾರ ಹಾಗೂ ಭ್ರಷ್ಟಾಚಾರ ವಿರುದ್ಧ ನನ್ನ ಅಧ್ಯಕ್ಷತೆಯಲ್ಲಿ ಪಕ್ಷದ 135 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಚುನಾವಣೆ ನಡೆಸಿದ ರೀತಿ, ಒಗ್ಗಟ್ಟಿನ ಪ್ರದರ್ಶನ ಎಲ್ಲವೂ ದೇಶಕ್ಕೆ ಮಾದರಿಯಾಗಿದ್ದು, ಅನೇಕ ನಾಯಕರುಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ..
ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ಉತ್ತಮವಾಗಿ ಸಂಘಟನೆ ಮಾಡಿದ್ದರೆ ನಮ್ಮ ಸಂಖ್ಯೆ ಇನ್ನು ಸ್ವಲ್ಪ ಹೆಚ್ಚಾಗುತ್ತಿತ್ತು. ಆದರೂ ನಮ್ಮ ಫಲಿತಾಂಶ ತೃಪ್ತಿ ತಂದಿದೆ. ಇಂದು ನಮ್ಮ ವರಿಷ್ಠರು ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದಿದ್ದಾರೆ. ನಾನು ಹೋಗುತ್ತಿದ್ದೇನೆ. ನಾನು ಹೋಗುವುದು ಸ್ವಲ್ಪ ತಡವಾಗಲಿದೆ.
ನನ್ನ ವೈಯಕ್ತಿಕ ಬೆಂಬಲಕ್ಕೆ ಹೆಚ್ಚಿನ ಶಾಸಕರ ಸಂಖ್ಯಾಬಲವಿಲ್ಲದಿರಬಹುದು, ಆದರೆ ಪಕ್ಷದ 135 ಶಾಸಕರ ಸಂಖ್ಯೆ ನನ್ನ ಸಂಖ್ಯೆ. ನನ್ನನ್ನು ಪಕ್ಷದ ಅಧ್ಯಕ್ಷನಾಗಿ ಆಯ್ಕೆ ಮಾಡಿದಾಗ ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಭರವಸೆ ನೀಡಿದ್ದೆ. ನಾನು ಕೊಟ್ಟ ಮಾತನ್ನು ಈಡೇರಿಸಿದ್ದೇನೆ.
ಬೇರೆಯವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಬೇರೆಯವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಓರ್ವ ವ್ಯಕ್ತಿ. ನಾನು ಧೈರ್ಯವಾಗಿ ಪಕ್ಷವನ್ನು ಮುನ್ನಡೆಸಿದ್ದು, ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಏನೆಲ್ಲಾ ಆಗಿದೆ ಎಂದು ನಾನು ಬಹಿರಂಗಪಡಿಸುವುದಿಲ್ಲ. ಭವಿಷ್ಯದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ. ನಾವು ಮೈತ್ರಿ ಸರ್ಕಾರ ಕಳೆದುಕೊಂಡಾಗ ಶಾಸಕರು ಪಕ್ಷ ಬಿಟ್ಟು ಹೋದಾಗ ನಾವು ಧೃತಿಗೆಡಲಿಲ್ಲ. ಧೈರ್ಯವಾಗಿ ಜವಾಬ್ದಾರಿ ಹೊತ್ತು, ಕೆಲಸ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನನಗೆ ಧೈರ್ಯ ತುಂಬಿದ್ದು, ಈ ವಿಚಾರವನ್ನು ಅವರಿಗೆ ಬಿಡುತ್ತೇನೆ’ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ