*ಕೈ ಹಿಡಿದ ವಿಶ್ವನಾಥ್ ಪಾಟೀಲ್; ಆಣೆಕಟ್ಟು ಒಡೆದು ನೀರು ಹರಿದು ಬರುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ; ಡಿ.ಕೆ ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ‘ಬಿಜೆಪಿ ಪಕ್ಷದ ಆಣೆಕಟ್ಟು ಒಡೆದಿದ್ದು, ಅದರ ನಾಯಕರೆಲ್ಲರೂ ನೀರಿನಂತೆ ಹರಿದು ಬರುತ್ತಿರುವುದಕ್ಕೆ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದೇ ಸಾಕ್ಷಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಕುಟುಕಿದ್ದಾರೆ
ಸದಾಶಿವನಗರ ನಿವಾಸದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ನಾಯಕ ಶಿವಾನಂದ ಪಾಟೀಲ್, ಅರವಿಂದ ಚೌಹಾಣ್ ಸೇರಿದಂತೆ ಅನೇಕ ನಾಯಕರನ್ನು ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಬಿಜಾಪುರ, ಕಲ್ಯಾಣ ಕರ್ನಾಟಕದ ಅನೇಕ ನಾಯಕರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರಲು ಬಯಸಿದ್ದಾರೆ. ಹೀಗಾಗಿ ನಾನು ವಿವಿಧ ಮೂಲೆಯ ಜಿಲ್ಲಾ ಹಾಗೂ ಬ್ಲಾಕ್ ಘಟಕಗಳು ಸ್ಥಳೀಯ ಮಟ್ಟದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಅನುಮತಿ ನೀಡಿದ್ದೇನೆ. ರಾಜ್ಯದಲ್ಲಿ ಈಗ ಬದಲಾವಣೆಯ ಕಾಲ ಬರುತ್ತಿದ್ದು, ಇದು ನಿಮ್ಮ ಕಾಲ. ಭ್ರಷ್ಟಾಚಾರ ಬಡಿದೋಡಿಸುವ ಕಾಲ ಬಂದಿದ್ದು ಈ ಬದಲಾವಣೆ ಸಮಯದಲ್ಲಿ ಎಲ್ಲರೂ ನಮ್ಮ ಜತೆ ಕೈ ಜೋಡಿಸಬೇಕು.
ಚಿತ್ತಾಪುರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ ಪಾಟೀಲ್ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಜಿಲ್ಲಾ ಪಂಚಾಯ್ತಿಯಲ್ಲಿ ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಿದ್ದ ಅರವಿಂದ್ ಚೌಹಾಣ್ ಅವರು ಸೇರಿದಂತೆ ಅನೇಕ ನಾಯಕರು, ಮುಖಂಡರು ಇಂದು ಪಕ್ಷ ಸೇರುತ್ತಿದ್ದಾರೆ. ಈ ಎಲ್ಲಾ ನಾಯಕರನ್ನು ನಾವು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಇವರ ಸೇರ್ಪಡೆಯಿಂದ ಈ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಕ್ಕಿದೆ ಎಂದರು.
ಬಿಜೆಪಿ, ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ ನಡೆಯುತ್ತಿದೆ. ಚುನಾವಣಾ ಆಯೋಗ ಮುಖ್ಯಮಂತ್ರಿ ಕಚೇರಿಯ ದೂರವಾಣಿ ಕರೆ ಪಟ್ಟಿ ತರೆಸಿಕೊಳ್ಳಬೇಕು. ಸದತ್ತಿ ಯೆಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರದಲ್ಲಿ ದೋಷವಿದ್ದರೂ ಅದನ್ನು ತಿದ್ದಲು ಮುಖ್ಯಮಂತ್ರಿ ಕಚೇರಿಯಿಂದ ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹೇರಲಾಗುತ್ತಿದೆ.
ನನ್ನ ನಾಮಪತ್ರವನ್ನೇ ತಿರಸ್ಕರಿಸಲು ಬಿಜೆಪಿ ತಂಡ ಪ್ರಯತ್ನಿಸಿದ್ದರು. ಚುನಾವಣಾ ಆಯೋಗ ಈ ಅಧಿಕಾರ ದುರುಪಯೋಗ ಗಮನಿಸಬೇಕು. ಒತ್ತಡಕ್ಕೆ ಮಣಿಯದೇ ಅರ್ಹರಿಗೆ ಸ್ಪರ್ಧೆಗೆ ಅವಕಾಶ ನೀಡಬೇಕು. ಬಿಜೆಪಿ ಅಭ್ಯರ್ಥಿಗಳ ದೋಷಪೂರಿತ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಪ್ರಶ್ನೋತ್ತರ:
ನಿಮ್ಮ ಅರ್ಜಿ ತಿರಸ್ಕಾರಕ್ಕೆ ಯಾರು ಒತ್ತಡ ಹಾಕಿದ್ದರು ಎಂದು ಕೇಳಿದ ಪ್ರಶ್ನೆಗೆ, ‘ನನ್ನ ಅರ್ಜಿಯನ್ನು ಎಷ್ಟು ಮಂದಿ ಡೌನ್ಲೋಡ್ ಮಾಡಿಕೊಂಡು, ಅರ್ಜಿ ತಿರಸ್ಕಿರಿಸಬೇಕು ಎಂದು ದೊಡ್ಡ ಕಾನೂನು ತಜ್ಞರ ತಂಡವನ್ನೇ ಬಿಜೆಪಿ ನಿಯೋಜಿಸಿತ್ತು’ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು 2 ಲಕ್ಷ ಪಡೆದಿದ್ದು, ಹೀಗಾಗಿ 224 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, ‘ಶೋಭಕ್ಕಾ ನಾನು 40% ಕಮಿಷನ್ ಪಡೆದಿಲ್ಲ. ನಿಮ್ಮ ಕಮಿಷನ್ ಗೆ ನಿಮ್ಮ ಪಕ್ಷದ ನಾಯಕರಾದ, ಓಲೇಕಾರ್, ಯತ್ನಾಳ್, ವಿಶ್ವನಾಥ್, ಗೂಳಿಹಟ್ಟಿ ಶೇಖರ್, ಈಶ್ವರಪ್ಪ, ಮಾಡಾಳ್ ವಿರೂಪಾಕ್ಷಪ್ಪ ಅವರು ಸಾಕ್ಷಿ ನೀಡಿದ್ದಾರೆ. ನಾವು ಅರ್ಜಿ ಶುಲ್ಕ 5 ಸಾವಿರ, ಇನ್ನು ಪಕ್ಷದ ಕಟ್ಟಡಕ್ಕೆ 2 ಲಕ್ಷ ದೇಣಿಗೆ ಅಧಿಕೃತವಾಗಿ ಸಂಗ್ರಹಿಸಿದ್ದೇವೆ. ನಿಮ್ಮ ಪಕ್ಷದಲ್ಲಿ ಯಾರಿಗೆ ಏನು ಒತ್ತಡ ಹಾಕಲಾಗಿದೆ’ ಎಂದು ತಿಳಿಸಿದರು.
ಚುನಾವಣೆ ಸಮಯದಲ್ಲಿ ಮತ್ತೆ ಪೇಸಿಎಂ ಅಭಿಯಾನ ಆರಂಭಿಸುತ್ತೀರಾ ಎಂಬ ಪ್ರಶ್ನೆಗೆ, ‘ಈ ಬಾರಿಯ ಚುನಾವಣೆಯಲ್ಲಿ 40% ಭ್ರಷ್ಟಾಚಾರ. ನೇಮಕಾತಿ ಹಗರಣ, ಬೆಲೆ ಏರಿಕೆ, ರಾಜ್ಯಕ್ಕೆ ಉತ್ತಮ ಆಡಳಿತ ನೀಡಿ, ರಾಜ್ಯದಲ್ಲಿ ಅಭಿವೃದ್ಧಿ ಬದಲಾವಣೆ ತರುವ ವಿಷಯಗಳು ಪ್ರಮುಖ ಅಂಶಗಳು. ಈ ಸರ್ಕಾರದ ಅವಧಿ ಇನ್ನು 20 ದಿನಗಳು ಮಾತ್ರ. ಮುಖ್ಯಮಂತ್ರಿಗಳು ಅದಕ್ಕಿಂತ ಮುಂಚಿತವಾಗಿ ರಾಜೀನಾಮೆ ನೀಡುವುದು ಉತ್ತಮ’ ಎಂದು ತಿಳಿಸಿದರು.
ಶೆಟ್ಟರ್ ಅವರನ್ನು ಮಣಿಸಲು ಆರ್ ಎಸ್ ಎಸ್ ಅವರು ಗಮನವಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಜಗದೀಶ್ ಶೆಟ್ಟರ್ ಅವರ ವಿರುದ್ಧ ಅವರು ಏನಾದರೂ ಷಡ್ಯಂತ್ರ ಮಾಡಲಿ. ಶೆಟ್ಟರ್ ಅವರು ಹಿರಿಯ ನಾಯಕರು, ನಮ್ಮ ಪಕ್ಷದ ಸ್ಟಾರ್ ಪ್ರಚಾರಕರು’ ಎಂದು ತಿಳಿಸಿದರು.
ಯಡಿಯೂರಪ್ಪ ವಿರುದ್ಧ ಶೋಭಾ ಪಿತೂರಿ
ಕಾಂಗ್ರೆಸ್ ಪಕ್ಷದಲ್ಲಿ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಗಿಸಲು ಎಂ.ಬಿ ಪಾಟೀಲ್ ಅವರು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, ‘ಯಡಿಯೂರಪ್ಪ ಮುಗಿಸಲು ಪಿತೂರಿ ನಡೆಸುತ್ತಿರುವವರ ಜೊತೆ ಶೋಭಕ್ಕ ಸೇರಿ ಏನು ಸಂಚು ರೂಪಿಸುತ್ತಿದ್ದಾರೆ ಎಂಬುದು ಜಗಜ್ಜಾಹೀರವಾಗಿದೆ. ಯಾರು ಯಾರನ್ನು ಮುಗಿಸಲು ಯತ್ನಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್, ಸವದಿ ಅವರು ಹೇಳಿದ್ದಾರೆ’ ಎಂದು ತಿಳಿಸಿದರು.
ರಂಜಾನ್ ಹಬ್ಬದ ಶುಭಾಷಯಗಳು
ಕರ್ನಾಟಕ ರಾಜ್ಯದ ಜನರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಷಯಗಳು. ಅಲ್ಪಸಂಖ್ಯಾತ ಸಮುದಾಯದ ಬಾಂದವರು ಕಳೆದ ಒಂದು ತಿಂಗಳಿಂದ ನೆಮ್ಮದಿ ಶಾಂತಿಗಾಗಿ ಉಪವಾಸ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಅವರೆಲ್ಲರಿಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಶುಭಾಷಯ ಕೋರುತ್ತೇನೆ ಎಂದರು.
ನಾನು ಈಗ ಮಂಜುನಾಥನ ದರ್ಶನ ಮಾಡಿ ಬೆಳ್ತಂಗಡಿ, ಶೃಂಗೇರಿ, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ