GIT add 2024-1
Laxmi Tai add
Beereshwara 33

*ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ; ನುಡಿದಂತೆ 5 ಗ್ಯಾರಂಟಿ ಯೋಜನೆ ಜಾರಿ; ಡಿಸಿಎಂ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ನಮ್ಮ ಗ್ಯಾರಂಟಿ ಯೋಜನೆಗಳು ಜನರ ಬದುಕಿಗಾಗಿ, ಚುನಾವಣೆಗೆ ಅಲ್ಲ: ಐದೂ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಅನುಷ್ಠಾನಗೊಳಿಸಿ ಬಹಳ ಆತ್ಮವಿಶ್ವಾಸದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಕಲಬುರ್ಗಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೇ ಪಕ್ಷ ಅಥವಾ ಸರ್ಕಾರಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ. ಮಾರ್ಚ್ 10ಕ್ಕೆ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾಲ್ಕು ವರ್ಷ ಪೂರ್ಣಗೊಂಡಿದೆ. ಬೆಳಗಾವಿಯಲ್ಲಿ ಪ್ರಜಾಧ್ವನಿ ಪ್ರಾರಂಭಿಸಿದ ನಂತರ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಜೆಟ್ ನಲ್ಲಿ ಇದಕ್ಕಾಗಿ 52 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳನ್ನು ದೇಶದಲ್ಲಿ ಜನ ಮೆಚ್ಚಿದ್ದಾರೆ. ಬಿಜೆಪಿಯವರು ಒಪ್ಪಿ ಮೋದಿ ಗ್ಯಾರಂಟಿ ಯೋಜನೆ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಮತದಾರರು ಹಾಗೂ ಕಾಂಗ್ರೆಸ್ ನಾಯಕರು ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು, ನಾವು ನಾಯಕರು ನೆಪ ಮಾತ್ರ. ನಾವು ಪ್ರತಿ ತಾಲೂಕು, ಜಿಲ್ಲೆಗಳಲ್ಲಿ 15 ಕಾರ್ಯಕರ್ತರನ್ನು ಒಳಗೊಂಡಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ.

ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರಿಗೆ ತಾಲೂಕು ಮಟ್ಟದಲ್ಲಿ ಕಚೇರಿ ಹಾಗೂ 25 ಸಾವಿರ ಗೌರವಧನ, ಜಿಲ್ಲಾ ಸಮಿತಿ ಅಧ್ಯಕ್ಷರಿಗೆ ಜಿಲ್ಲಾ ಮಟ್ಟದಲ್ಲಿ ಕಚೇರಿ ಹಾಗೂ 50 ಸಾವಿರ ಗೌರವಧನ ನೀಡಲಾಗುವುದು. ರಾಜ್ಯ ಮಟ್ಟದ ಸಮಿತಿಯಲ್ಲಿ ಓರ್ವ ಅಧ್ಯಕ್ಷರು ಹಾಗೂ ಐವರು ಉಪಾಧ್ಯಕ್ಷರನ್ನು ಒಳಗೊಂಡಿದೆ. ಅಧ್ಯಕ್ಷರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಲಾಗುವುದು. ಆಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಇದರ ಜತೆಗೆ ಕಾರ್ಯಕರ್ತರುಗಳಿಗೆ ಸ್ಥಳೀಯ ಮಟ್ಟದ ಆಸ್ಪತ್ರೆ, ಶಾಲಾ ಹಾಗೂ ಇತರೆ ಸಮಿತಿ ಸಮಿತಿಯಲ್ಲಿ ಸ್ಥಾನಮಾನ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಇವರು ಸಾರ್ವಜನಿಕರ ಸೇವೆ ಮಾಡಬೇಕು, ಅವರಿಗೆ ಗೌರವ ನೀಡಲು ತೀರ್ಮಾನಿಸಿದ್ದೇವೆ.

ನಾವು ಚುನಾವಣೆಗಾಗಿ ಗ್ಯಾರಂಟಿ ಯೋಜನೆ ನೀಡುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿನಲ್ಲಿ ನೆರವು ನೀಡಲು ಜಾರಿ ಮಾಡಿದ್ದೇವೆ.

ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕರಿಂದ ಬಸ್ ಪ್ರಯಾಣಕ್ಕೆ ಮೂರು ಪಟ್ಟು ಹಣ ಕೀಳಲು ಮುಂದಾದರು. ಆಗ ನಾನು ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ಸರ್ಕಾರಕ್ಕೆ 1 ಕೋಟಿ ರೂಪಾಯಿ ಚೆಕ್ ನೀಡಿ ಆ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ತಲುಪಿಸಲು ಆಗ್ರಹಿಸಿದೆವು. ನಂತರ ಸರ್ಕಾರ ವಿಧಿ ಇಲ್ಲದೆ ಒಂದು ವಾರ ಉಚಿತ ಬಸ್ ಪ್ರಯಾಣ ಕಲ್ಪಿಸಿತು. ಕೇಂದ್ರ ಸರ್ಕಾರ ಉಚಿತ ರೈಲು ಸೇವೆ ಆರಂಭಿಸಿತು.

ಈ ರೀತಿ ಜನರ ಕಷ್ಟಗಳಿಗೆ ಸ್ಪಂದಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ನಮಗೆ ಮತ ಮುಖ್ಯ ಅಲ್ಲ. ನಾವು ಬ್ಯಾಂಕುಗಳ ರಾಷ್ಟ್ರೀಕರಣ, ಅನ್ನಭಾಗ್ಯ, ಉಳುವವನಿಗೆ ಭೂಮಿ, ಬಡವರಿಗೆ ಮನೆ, ನಿವೇಶನ ನೀಡಿದ್ದೇವೆ. ನಮ್ಮ ಯೋಜನೆಗಳು ಯಾವುದೇ ಒಂದು ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗದ ಜನರಿಗೆ ನೀಡಲಾಗುವುದು.

ಅಭಿವೃದ್ಧಿಗೆ 1.26 ಲಕ್ಷ ಕೋಟಿ ಅನುದಾನ:

ಇನ್ನು ನಮ್ಮ ಸರ್ಕಾರ ಮಂಡಿಸಿರುವ 3.74 ಲಕ್ಷ ಕೋಟಿ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊರತಾಗಿ ಅಭಿವೃದ್ಧಿ ಯೋಜನೆಗಳಿಗೆ 1.26 ಲಕ್ಷ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

Emergency Service

ಕನ್ನಡದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಎಲ್ಲಾ ವ್ಯಾಪಾರ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡ ಭಾಷೆ ಬಳಕೆ ಮಾಡುವ ಬಗ್ಗೆ ಪ್ರತ್ಯೇಕ ಕಾನೂನು ಜಾರಿಗೆ ತರಲಾಗಿದೆ.

ನೀರಿನ ಅಭಾವ ನೀಗಿಸುತ್ತೇವೆ

ಬರ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ 7 ಸಾವಿರ ಕೊಳವೆ ಬಾವಿಗಳು ಬತ್ತಿದ್ದು ಇದರಿಂದ ಕೆಲವು ಕಡೆ ನೀರಿನ ಅಭಾವ ಎದುರಾಗಿದೆ. ಉಳಿದ ಕಡೆ ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ.

ರಾಜ್ಯದ ಇತರೆ ಭಾಗಗಳಲ್ಲಿ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಅವರಿಗೆ ಹಣ ನೀಡಲಾಗಿದೆ. ನೀರಿನ ಅಭಾವದ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವರು ಸಭೆ ಮಾಡಿ ಚರ್ಚಿಸುತ್ತಿದ್ದಾರೆ.

ಮುಂದಿನ ಎರಡು ಮೂರು ತಿಂಗಳು ನೀರಿನ ಅಭಾವ ಸೃಷ್ಟಿಯಾಗಿದ್ದು, ಎಲ್ಲೆಲ್ಲಿಂದ ನೀರನ್ನು ಪೂರೈಸಬಹುದು ಎಂದು ಗುರುತಿಸಿ ಟ್ಯಾಂಕರ್ ಗಳ ಮೂಲಕ ಪೂರೈಸಲಾಗುವುದು.

ಮೌನದಿಂದಲೇ ಅನಂತ ಕುಮಾರ್ ಹೆಗಡೆ ಮಾತು ಒಪ್ಪಿದ ಬಿಜೆಪಿ ಹಾಗೂ ಪ್ರಧಾನಿ:

ಬಿಜೆಪಿ ಸಂಸದರೊಬ್ಬರು ನಾವು ಸಂವಿಧಾನ ಬದಲಾವಣೆ ಮಾಡಬೇಕಾದರೆ ನಮಗೆ 400 ಕ್ಷೇತ್ರಗಳನ್ನು ಗೆಲ್ಲಿಸಿ ಎಂಬ ಹೇಳಿಕೆ ಖಂಡನೀಯ. ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತಿನಂತೆ ಸಂಸದರ ಹೇಳಿಕೆ ಬಗ್ಗೆ ಪ್ರಧಾನ ಮಂತ್ರಿಗಳು, ಬಿಜೆಪಿ ಹೈಕಮಾಂಡ್ ನಾಯಕರ ಮೌನದಿಂದ ಇದನ್ನು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಂಸದರ ಹೇಳಿಕೆಯನ್ನು ಖಂಡಿಸುವುದಾಗಿದ್ದರೆ ಬಿಜೆಪಿ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಿತ್ತು. ನಮ್ಮ ಪಕ್ಷ ಆಗಿದ್ದರೆ ಇಷ್ಟು ಹೊತ್ತಿಗೆ ಇಂತಹ ಹೇಳಿಕೆ ಕೊಟ್ಟವರನ್ನು ಉಚ್ಚಾಟಿಸಲಾಗುತ್ತಿತ್ತು.

ಬಿಜೆಪಿಯ ಭಾವನೆ ಹಾಗೂ ಆಂತರಿಕ ಧ್ವನಿಯನ್ನು ಸಂಸದರು ಬಹಿರಂಗವಾಗಿ ಹೇಳಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕು, ನಮ್ಮ ಸಂವಿಧಾನ ರಕ್ಷಣೆ ಮಾಡಬೇಕು ಎಂದರು.

Bottom Add3
Bottom Ad 2