
ಪ್ರಗತಿವಾಹಿನಿ ಸುದ್ದಿ; ಮೈಸೂರು: ಬಿಜೆಪಿ ವಿಶ್ವಾಸ ದ್ರೋಹಿ ಪಕ್ಷ ಎಂಬುದು ಈಗ ಸಾಬೀತಾಗಿದೆ. ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ವಿವಿಧ ಸಮುದಾಯಗಳಿಗೆ ಚಾಕಲೇಟ್ ಕೊಟ್ಟಿದ್ದ ಬಿಜೆಪಿ ಸುಪ್ರೀಂ ಕೋರ್ಟ್ ನಲ್ಲಿ ಉಲ್ಟಾ ಹೊಡದು ಜನರಿಗೆ ಮೋಸ ಮಾಡಿದೆ. ಚುನಾವಣೆ ಸಮಯದಲ್ಲಿ ಸಹಜವಾಗಿ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕುವುದಿಲ್ಲ. ಆದರೆ ಬಿಜೆಪಿ ಎಲ್ಲಾ ಸಮುದಾಯಗಳಿಗೂ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿ ಪ್ರಚಾರ ಪಡೆದು ಈಗ ದ್ರೋಹ ಬಗೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ.ಶಿವಕುಮಾರ್, ಸರ್ಕಾರದ ಈ ಕ್ರಮವನ್ನು ಶ್ರೀ ಮೃತ್ಯುಂಜಯ ಸ್ವಾಮೀಜಿಗಳು ಈ ಹಿಂದೆ ಬಹಳ ಚೆನ್ನಾಗಿ ವ್ಯಾಖ್ಯಾನಿಸಿದ್ದರು. ಈ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸರ್ಕಾರ ನಮ್ಮ ತಲೆಗೆ ತುಪ್ಪ ಸವರಿದ್ದು, ಈ ತುಪ್ಪವನ್ನು ತಿನ್ನಲೂ ಆಗುವುದಿಲ್ಲ, ಅದರ ಸುವಾಸನೆಯನ್ನು ಸವಿಯಲಾಗುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ ಎಲ್ಲಾ ಸಮಾಜಕ್ಕೂ ಸಹಾಯ ಮಾಡದೇ ದ್ರೋಹ ಬಗೆದಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ತನ್ನ ಮೀಸಲಾತಿ ಹೆಚ್ಚಳ ಆದೇಶವನ್ನು ಸಮರ್ಥಿಸಿಕೊಂಡು ಬಿಜೆಪಿ ಸರ್ಕಾರ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ ಎಂದರು.
ಈ ಮಧ್ಯೆ ಕೇಂದ್ರ ಸಚಿವ ಅಮಿತ್ ಶಾ ಅವರು ಮೀಸಲಾತಿ ವಿಚಾರವಾಗಿ ನಮಗೆ ಸವಾಲು ಹಾಕಿದ್ದಾರೆ. ಹೀಗಾಗಿ ನಾನು ಈಮೂಲಕ ಅಮಿತ್ ಶಾ ಅವರಿಗೆ ಕೆಲವು ಪ್ರಶ್ನೆ ಕೇಳುತ್ತಿದ್ದೇನೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಆದರೂ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡು ಅದನ್ನು ಕಾನೂನಾತ್ಮಕವಾಗಿ ಜಾರಿ ಮಾಡಲು ಸಾಧ್ಯವಾಗಿಲ್ಲ. ಇದೇನಾ ನಿಮ್ಮ ಬದ್ಧತೆ? ಕರ್ನಾಟಕದ ಜನರನ್ನು ನೀವು ದಡ್ಡರೆಂದು ಭಾವಿಸಿದ್ದೀರಾ?
ನಿಮ್ಮ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ 2002ರ ಅಕ್ಟೋಬರ್ 30ರಂದು ಜಾರಿಗೆ ತಂದಿದ್ದ ಮೀಸಲಾತಿಯನ್ನೇ ಮರು ಜಾರಿ ಮಾಡುವುದಾಗಿ ಹೇಳಿದೆ. ಆಮೂಲಕ ನೀವು ಲಿಂಗಾಯತ ಸಮುದಾಯವನ್ನು 2Dಯಿಂದ ಮತ್ತೆ 3Bಗೆ ವಾಪಸ್ ಬರುವಂತಾಗಿದೆ. ಒಕ್ಕಲಿಗ ಸಮುದಾಯವನ್ನು 2Cಯಿಂದ 3Aಗೆ ವಾಪಸ್ ಬರುವಂತಾಗಿದೆ. ಈ ಸಮುದಾಯಗಳು ನಮಗೆ ಹೊಸ ವರ್ಗೀಕರಣ ಕೊಡಿ ಎಂದು ಕೇಳಿರಲಿಲ್ಲ. ಅವರು ಕ್ರಮವಾಗಿ ಶೇ.15 ಹಾಗೂ ಶೇ.12ರಷ್ಟು ಮೀಸಲಾತಿ ಹೆಚ್ಚಳಕ್ಕೆ ಆಗ್ರಹ ಮಾಡಿದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರ ತಲಾ 2% ಹೆಚ್ಚಳ ಮಾಡಿ ಈಗ ಸುಪ್ರೀಂ ಕೋರ್ಟ್ ನಲ್ಲಿ ಅದಕ್ಕೆ ತಡೆಹಿಡಿದಿದೆ.
ಇನ್ನು ಅಲ್ಪಸಂಖ್ಯಾತರಿಂದ ಮೀಸಲಾತಿ ಕಸಿದು ಅದರಲ್ಲಿ ತಲಾ 2% ಮೀಸಲಾತಿ ಪಡೆಯಲು ಈ ಸಮುದಾಯಗಳೇನು ಭಿಕ್ಷುಕರೇ? ಈ ಸಮುದಾಯಗಳು ತಮ್ಮದೇ ಆದ ಜನಸಂಖ್ಯೆ ಹೊಂದಿದ್ದು, ಅವುಗಳ ಆಧಾರದ ಮೇಲೆ ಮೀಸಲಾತಿ ಕೇಳುತ್ತಿದ್ದಾರೆ. ಒಕ್ಕಲಿಗರ ಮೀಸಲಾತಿ ಬೇಡಿಕೆಯನ್ನು ಸ್ವಾಮೀಜಿಗಳು ಹಾಗೂ ಇಡೀ ಸಮುದಾಯ ಸಚಿವ ಆರ್. ಅಶೋಕ್ ಅವರಿಗೆ ಕೊಟ್ಟಾಗ ನಾನು ಕೂಡ ಅಲ್ಲಿ ಉಪಸ್ಥಿತನಿದ್ದೆ. ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದು ಅವರನ್ನು ದೇಶ ಬಿಟ್ಟಿ ಓಡಿಸುತ್ತೀರಾ? ಅವರನ್ನು ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿಸಲಾಗಿದೆ. ಇಷ್ಟು ದಿನ ಅಲ್ಪಸಂಖ್ಯಾತರಿಗೆ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಮೀಸಲಾತಿ ಸಿಗುತ್ತಿತ್ತು. ಈ ನಿರ್ಧಾರದಿಂದ ಅವರು ಆರ್ಥಿಕ ದುರ್ಬಲ ವರ್ಗದ ವರ್ಗೀಕರಣದಲ್ಲಿ ಮೀಸಲಾತಿ ಪಡೆಯಬೇಕಾಗುತ್ತದೆ ಎಂದರು.
ಇದು ಸಂವಿಧಾನ ವಿರೋಧವಾಗಿದ್ದು, ಆರ್ಥಿಕ ದುರ್ಗಲ ವರ್ಗೀಕರಣದಲ್ಲಿ ಆರ್ಥಿಕ ಸ್ಥಿತಿಗತಿಗಳ ಮೇಲೆ ಮೀಸಲಾತಿ ನೀಡಲಾಗುತ್ತದೆಯೇ ಹೊರತು ಜಾತಿ, ಧರ್ಮ, ಸಾಮಾಜಿಕ ಸ್ಥಾನಮಾನದ ಮೇಲೆ ನೀಡಲಾಗುವುದಿಲ್ಲ. ಇದರ ಜತೆಗೆ ಅಲ್ಪಸಂಖ್ಯಾತರನ್ನು ಈ ವರ್ಗೀಕರಣಕ್ಕೆ ಸೇರಿಸಿರುವುದರಿಂದ ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮೀಸಲಾತಿ ಸಿಗುವುದು ಕಷ್ಟವಾಗುತ್ತದೆ.
ಈ ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಾವ ಸಮುದಾಯಕ್ಕೆ ನ್ಯಾಯ ಒದಗಿಸಿದೆ? ಇನ್ನು ಪರಿಶಿಷ್ಟ ಜಾತಿ ಶೇ.15ರಿಂದ ಶೇ.17, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ರಷ್ಟು ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲೂ ಸರ್ಕಾರ ದ್ರೋಹ ಬಗೆದಿದೆ. ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಕಾನೂನು ಮಾಡಿತಾದರೂ ಅದನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಲಿಲ್ಲ. ಆಮೂಲಕ ಈ ಕಾನೂನು ಕೇವಲ ಕಾಗದದ ಮೇಲೆ ಉಳಿದಿದೆ. ಇನ್ನು ಈ ಮಿಸಲಾತಿ ಹೆಚ್ಚಳದಿಂದ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ರಷ್ಟಾಗಿದೆ. ಆದರೆ ಸದ್ಯ ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ ಮಿತಿಯ ಪ್ರಮಾಣ ಶೇ.50ರಷ್ಟಿದೆ. ಈ ಪರಿಶಿಷ್ಟರಿಗೆ ಈ ಮೀಸಲಾತಿ ಏರಿಕೆ ಆಗಬೇಕಾದರೆ ಈ ಮಿತಿಯನ್ನು ವಿಸ್ತರಣೆ ಮಾಡಬೇಕು. ಆದರೆ ಕೇಂದ್ರ ಸರ್ಕಾರ ಮಾರ್ಚ್.14ರಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮೀಸಲಾತಿ ಮಿತಿ ಹೆಚ್ಚಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೂ ಅವರಿಗೆ ಸಿಗಬೇಕಾದ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.
ಹೀಗೆ ಸಮಾಜದ ಎಲ್ಲಾ ಸಮುದಾಯಗಳಿಗೆ ಮೋಸ, ದ್ರೋಹ ಬಗೆದಿರುವ ಬಿಜೆಪಿ ಸರ್ಕಾರವನ್ನು ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ಸಮಾಧಿ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವದ ಮೇಲೆ ನಡೆಯುತ್ತಿದ್ದು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದು ಇದಕ್ಕಾಗಿ ಮೀಸಲಾತಿ ಮಿತಿಯನ್ನು ವಿಸ್ತರಣೆ ಮಾಡಲು ಸಿದ್ಧ ಎಂದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಈಗಾಗಲೇ ಹೇಳಿದ್ದಾರೆ.
ಈ ಸಮುದಾಯಗಳಿಗೆ ವಿಶ್ವಾಸದ್ರೋಹ ಬಗೆದಿರುವುದಕ್ಕೆ ಯಾರು ಹೊಣೆ? ಈ ಸರ್ಕಾರ ರಾಜ್ಯದ ಜನರ ಬೆನ್ನಿಗೆ ಚೂರಿ ಹಾಕಿದೆ. ಮೋದಿ ಹಾಗೂ ಬೊಮ್ಮಾಯಿ ಅವರ ಸರ್ಕಾರ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲಿಲ್ಲ ಏಕೆ? ಆಮೂಲಕ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಮೀಸಲಾತಿ ವಿಚಾರದಲ್ಲಿ ಹಿಟ್ ವಿಕೆಟ್ ಆಗಿದೆ. ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ವಿಕೆಟ್ ಒಡೆದಿದೆ.
ರಾಜ್ಯದ ಇತಿಹಾಸದಲ್ಲಿ ಯಾವ ಸರ್ಕಾರಗಳು ರಾಜ್ಯದ ಜನರಿಗೆ ಇಂತಹ ಪರಮ ದ್ರೋಹವನ್ನು ಯಾವತ್ತೂ ಬಗೆದಿರಲಿಲ್ಲ. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಸರ್ಕಾರದ ಆಣೆಕಟ್ಟು ಒಡೆದುಹೋಗಿದೆ. ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ಪಕ್ಷ ಬಿಟ್ಟಿರುವ ನಾಯಕರನ್ನು ಸೋಲಿಸುವ ಗುರಿ ಹೊಂದಿದೆಯಂತೆ. ಅವರನ್ನು ಸೋಲಿಸುವ ಮೊದಲು ನೀವು ರಾಜ್ಯದ ಜನರಿಗಾಗಿ ಏನು ಮಾಡಿದ್ದೀರಿ ಎಂದು ಹೇಳಿ. ಕರ್ನಾಟಕಕ್ಕೆ ಕಳೆದ ನಾಲ್ಕು ವರ್ಷಗಳಿಂದ ನಿಮ್ಮ ಕೊಡುಗೆ ಏನು? ಎಂದು ಮಾನ್ಯ ಯಡಿಯೂರಪ್ಪನವರು, ಮೋದಿ ಅವರು, ಬೊಮ್ಮಾಯಿ ಅವರು ಹೇಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ, ಅಭಿವೃದ್ಧಿ, ಉದ್ಯೋಗ ಯಾವುದೂ ಇಲ್ಲವಾಗಿದೆ. ಈ ಸರ್ಕಾರ 40% ಕಮಿಷನ್ ಭ್ರಷ್ಟಾಚಾರದ ಮೂಲಕ ಕರ್ನಾಟಕವನ್ನು ದೇಶದ ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕ ತಂದಿದೆ. ಈ 40% ಕಮಿಷನ್ ಸರ್ಕಾರಕ್ಕೆ ರಾಜ್ಯದ ಜನ 40ಕ್ಕಿಂತ ಕಡಿಮೆ ಕ್ಷೇತ್ರಗಳನ್ನು ನೀಡುತ್ತಾರೆ.
ಈ ಬಿಜೆಪಿ ಸರ್ಕಾರ, ಯುವಕರು, ರೈತರು, ವರ್ತಕರು, ಯುವಕರು, ಮಹಿಳೆಯರು ಎಲ್ಲಾ ವರ್ಗದವರಿಗೆ ಅನ್ಯಾಯ ಮಾಡಿದ್ದು, ಕಾಂಗ್ರೆಸ್ ಪಕ್ಷ 150 ಕ್ಷೇತ್ರಗಳಲ್ಲಿ ಗೆದ್ದು ಸ್ವಂತ ಬಲದ ಸರ್ಕಾರ ರಚಿಸಲಿದೆ ಎಂದು ನಾನು ಕೂಡ ಯಡಿಯೂರಪ್ಪನವರಿಗೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದರು.
ಪ್ರಶ್ನೋತ್ತರ:
ಮೀಸಲಾತಿ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿದ್ದು, ಕಾಂಗ್ರೆಸ್ ಪಕ್ಷದ ನಿಲುವೇನು ಎಂದು ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು, ಸಮಬಾಳು ಎಂಬ ನಿಲುವು ಹೊಂದಿದ್ದು, ಮೀಸಲಾತಿ ಮಿತಿ ವಿಸ್ತರಣೆ ಮಾಡಿ ಎಲ್ಲಾ ಸಮುದಾಯಗಳಿಗೆ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸಿಗಬೇಕಾದ ಹಕ್ಕು ನೀಡಲಾಗುವುದು’ ಎಂದು ತಿಳಿಸಿದರು.
ಚುನಾವಣೆಗೆ 12 ದಿನಗಳು ಬಾಕಿ ಇದ್ದು ಈ ಅವಧಿಯಲ್ಲಿ ನಿಮ್ಮ ವಿರುದ್ಧ ಕುತಂತ್ರ ಮಾಡುವ ಸಾಧ್ಯತೆ ಇದೆಯಾ ಎಂದು ಕೇಳಿದಾಗ, ‘ನನ್ನ ವಿರುದ್ಧ ಬಹಳ ಹಿಂದಿನಿಂದ ಕುತಂತ್ರ ನಡೆಯುತ್ತಿವೆ. ಅವರು ಏನೆಲ್ಲಾ ಕುತಂತ್ರ ಮಾಡಲಿ, ನಾವು ಅವೆಲ್ಲವನ್ನು ಎದುರಿಸಿ ಜನರ ಆಶೀರ್ವಾದದಿಂದ ಸರ್ಕಾರ ರಚನೆ ಮಾಡುತ್ತೇವೆ. ಸದ್ಯ ಮೀಸಲಾತಿ ವಿಚಾರ ಬೇರೆಡೆ ಗಮನಹರಿಯುವುದು ಬೇಡ ಉಳಿದಂತೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ’ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ