LatestUncategorized

*ಇಡಿಯಿಂದ ಮತ್ತೆ ಬುಲಾವ್; ಮಗಳಿಗೂ ಸಿಬಿಐ ನೊಟೀಸ್; ಬೇಸರ ತೋಡಿಕೊಂಡ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಇಡಿ, ಸಿಬಿಐ ಎಲ್ಲವೂ ನಮಗೆ ಮಾತ್ರ ಇರುವುದು, ಆಡಳಿತ ಪಕ್ಷ ಬಿಜೆಪಿಯವರಿಗೆ ಯಾವ ತನಿಖೆ, ವಿಚಾರಣೆಯೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿಬಿಐನವರು ಮಗಳಿಗೂ ನೊಟೀಸ್ ನೀಡಿದ್ದಾರೆ. ಸ್ಕೂಲು, ಕಾಲೇಜು ಫೀಸ್ ಕಟ್ಟಿದ್ದರ ಬಗ್ಗೆ ಕೇಳಿದ್ದಾರೆ. ಶಾಲೆ, ಕಾಲೇಜು ಶುಲ್ಕದ ಬಗ್ಗೆಯೂ ಕೇಳುತ್ತಿದ್ದಾರೆ ಎಂದರೆ ಇವರು ಯಾವ ಮಟ್ಟಕ್ಕೆ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂಬುದನ್ನು ನೀವೇ ಯೋಚಿಸಿ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಇಡಿಯವರು ಫೆ.24ರಂದು ನನಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ನಾನು ಇಡಿ ವಿಚಾರಣೆಗೆ ಹಾಜರಾಗಲೋ? ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲೋ? ಪ್ರತಿ ದಿನ ಒಂದಲ್ಲ ಒಂದು ನೋಟೀಸ್, ವಿಚಾರಣೆ ಎಲ್ಲಾ ರೀತಿಯಿಂದ ತೊಂದರೆಕೊಡುತ್ತಿದ್ದಾರೆ. ಇದೆಲ್ಲ ನಮಗೆ ಮಾತ್ರ, ಬಿಜೆಪಿಯವರಿಗೆ ಇಡಿ, ಸಿಬಿಐ ಯಾವುದೂ ಇಲ್ಲ, ಏನೇನು ಮಾಡುತ್ತಾರೆ ನೋಡೋಣ ಎಂದು ಹೇಳಿದರು.

ಇದೇ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕಿಡಿ ಕಾರಿದ ಡಿ.ಕೆ.ಶಿವಕುಮಾರ್, ಅರಗ ಜ್ಞಾನೇಂದ್ರ ಹಗರಣಗಳ ಬಗ್ಗೆ ಪುಸ್ತಕವನ್ನೇ ಬರೆಯಬಹುದು. ಶಿವಮೊಗ್ಗ, ಭ್ರದ್ರಾವತಿಯಲ್ಲಿ ರೈತರು ಬದುಕುವಂತಿಲ್ಲ, ಬಿಜೆಪಿಯವರು ಎಲ್ಲಾ ಕಾರ್ಖಾನೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಸುಪರ್ದಿಯಲ್ಲಿರುವ ಭ್ರದ್ರಾವತಿಯ ಕಾರ್ಖಾನೆಯನ್ನು ಸರ್ಕಾರ ಮುಚ್ಚಬಾರದು. ಈಗಾಗಲೇ ಬಿಜೆಪಿ ಸರ್ಕಾರ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕಾರ್ಖಾನೆ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button