ಪ್ರಗತಿವಾಹಿನಿ ಸುದ್ದಿ: “ರಾಜಕೀಯವನ್ನು ಬೂತ್ ಮಟ್ಟದಲ್ಲಿ ಮಾಡೋಣ, ಈಗ ಎಲ್ಲಾ ಪಕ್ಷದ ನಾಯಕರು ಸೇರಿ ಬೆಂಗಳೂರನ್ನು ಕಟ್ಟೋಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ “ನಾಗರೀಕರ ಧ್ವನಿ- ಅದೇ ಸರ್ಕಾರದ ಧ್ವನಿ” ಎಂಬ ಪರಿಕಲ್ಪನೆಯಡಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಯೋಜನೆಗಳ ಬಗ್ಗೆ ಬೆಂಗಳೂರಿನ ಸರ್ವ ಪಕ್ಷ ಶಾಸಕರುಗಳು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ಶನಿವಾರ ನಡೆಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಕುಮಾರ್ ಅವರು, “ಗ್ರೇಟರ್ ಬೆಂಗಳೂರು ವಿಚಾರವಾಗಿ ಅಶ್ವಥ್ ನಾರಾಯಣ ಅವರು ಗಾಬರಿಯಾಗುವುದು ಬೇಡ, ವಿಧೇಯಕದ ಸಂಪೂರ್ಣ ಮಾಹಿತಿ ನಿಮ್ಮ ಕೈಯಲ್ಲಿದೆ. ಪ್ರತಿ ಪದವನ್ನೂ ಪರಿಶೀಲಿಸಿ. ಬೆಂಗಳೂರಿನ ಭವಿಷ್ಯದ ಹಿತ ಕಾಯಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಗ್ರೇಟರ್ ಬೆಂಗಳೂರಿನಲ್ಲಿ ಕೈಗೊಂಡಿದ್ದೇವೆ. ನೀವು ಚರ್ಚೆ ಮಾಡಿ, ನಿಮ್ಮ ಸಲಹೆ ಸೂಚನೆ ಪರಿಗಣಿಸುತ್ತೇವೆ. ನಿಮ್ಮೆಲ್ಲರ ಒತ್ತಾಯದಂತೆ ಗ್ರೇಟರ್ ಬೆಂಗಳೂರು ವಿಚಾರವಾಗಿ ಸದನ ಸಮಿತಿ ರಚಿಸಲು ತೀರ್ಮಾನಿಸಿದ್ದೇವೆ” ಎಂದರು.
“ವಿರೋಧ ಪಕ್ಷದ ನಾಯಕರು ಇಲ್ಲೇ ಇದ್ದು, ಅವರು ನಿಮ್ಮ ಪಕ್ಷದಿಂದ ಸಮಿತಿಗೆ ಹೆಸರು ಶಿಫಾರಸ್ಸು ಮಾಡಿದರೆ ಇಂದು ಸಂಜೆಯೇ ಸಮಿತಿ ರಚಿಸಿ ಅದನ್ನು ಅಧಿಕೃತವಾಗಿ ಘೋಷಣೆ ಮಾಡಬಹುದು. ಇಂದು ಈ ಎಲ್ಲಾ ವಿಚಾರವಾಗಿ ಎಷ್ಟು ಹೊತ್ತು ಬೇಕಾದರೂ ಚರ್ಚೆ ಮಾಡಲು ಸಿದ್ಧ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿ” ಎಂದು ಹೇಳಿದರು.
“ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬಹಳ ಸವಾಲಿನ ಇಲಾಖೆ. ಬೆಂಗಳೂರಿನ ಸಮಸ್ಯೆಗಳಿಗೆ ಹೊಸ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಕೇಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಕೆಂಗಲ್ ಹನುಮಂತಯ್ಯನವರು ಇಲ್ಲಿ ವಿಧಾನಸೌಧ ಕಟ್ಟಿಸಿದರು. ಎಸ್.ಎಂ ಕೃಷ್ಣ ಅವರು ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೋಯ್ದರು. ಬೆಂಗಳೂರು ಯೋಜಿತ ನಗರವಲ್ಲ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. 1.04 ಕೋಟಿ ವಾಹನಗಳಿವೆ. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ” ಎಂದು ತಿಳಿಸಿದರು.
“ಇಲ್ಲಿರುವ ತಂತ್ರಜ್ಞಾನ, , ಮಾನವ ಸಂಪನ್ಮೂಲ, ಹವಾಮಾನ, ಸಂಸ್ಕೃತಿ ನೋಡಿ ಇಲ್ಲಿಗೆ ಬಂದವರು ಮತ್ತೆ ವಾಪಸ್ ಹೋಗುತ್ತಿಲ್ಲ. ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಬಂದವರು ಕೂಡ ಇಲ್ಲೇ ಉಳಿದುಕೊಂಡಿದ್ದಾರೆ. ಹೀಗೆ ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದೆ. ಬಿಜೆಪಿ ಸರ್ಕಾರ 110 ಹಳ್ಳಿಗಳನ್ನು ಬೆಂಗಳೂರಿನ ವ್ಯಾಪ್ತಿಗೆ ಸೇರಿಸಿದ್ದು, ಇಲ್ಲಿಯವರೆಗೂ ಆ ಭಾಗಕ್ಕೆ ಮೂಲಸೌಕರ್ಯ ಒದಗಿಸಿಕೊಡಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ಕಾವೇರಿ ನೀರಿನ ಸಮಸ್ಯೆ ಒಂದೆಡೆಯಾದರೆ, ಕಳೆದ ಬೇಸಿಗೆಯಲ್ಲಿ ನಗರದ 7 ಸಾವಿರ ಕೊಳವೆಬಾವಿ ಬರಿದಾಗಿ ಸಮಸ್ಯೆ ಉದ್ಭವಿಸಿತ್ತು. ಕೆರೆಗಳನ್ನು ಉಳಿಸಿ ಜೀವಂತವಾಗಿರಿಸಿಕೊಳ್ಳಬೇಕು. ಇದಕ್ಕಾಗಿ ಏನು ಮಾಡಬೇಕು ಚರ್ಚೆ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚಿಸದಿದ್ದರೆ ಪರ್ಯಾಯ ಅವಕಾಶವಿಲ್ಲ” ಎಂದು ತಿಳಿಸಿದರು.
“ಕಸದ ವಿಚಾರ ನಿಮಗೆಲ್ಲಾ ತಿಳಿದಿದೆ. ಇನ್ನು ಸಂಚಾರಿ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಅಧಿಕಾರಿಗಳು ಇದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದು, ಆದರೆ ಅದು ಸಾಧ್ಯವಾಗುತ್ತಿಲ್ಲ. ಕಸ ಹಾಗೂ ಸಂಚಾರಿ ದಟ್ಟಣೆ ಸಮಸ್ಯೆ ವಿಚಾರವಾಗಿ ಸುಮಾರು 70 ಸಾವಿರ ಸಲಹೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ. ಇವುಗಳನ್ನು ಪರಿಶೀಲಿಸಿದ್ದೇವೆ. ಬೆಂಗಳೂರಿನ ಎಲ್ಲಾ ಇಲಾಖೆಗಳಲ್ಲಿ ಪಾರದರ್ಶಕವಾಗಿ ಕೆಲಸ ಮಾಡಲಾಗುತ್ತಿದೆ. ಕಾನೂನು ಚೌಕಟ್ಟಿನ ಆಚೆಗೆ ಯಾವುದೇ ಕೆಲಸ ಮಾಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಎಲ್ಲ ಪ್ರಕ್ರಿಯೆ ನಡೆಯಬೇಕು. ನಾನು ತಪ್ಪು ಮಾಡಲು ಹೋದರೂ ನನಗೆ ಎಚ್ಚರಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಟಿಡಿಆರ್ ವಿಚಾರವಾಗಿ ದೊಡ್ಡ ಹಗರಣವಾಗಿದೆ. ಅವುಗಳನ್ನು ಬಗೆಹರಿಸಲು ಹೊಸ ವ್ಯವಸ್ಥೆ ತರಲಾಗುತ್ತಿದೆ. ಈ ಬಗ್ಗೆಯೂ ನಿಮಗೆ ಮಾಹಿತಿ ನೀಡುತ್ತೇವೆ” ಎಂದರು.
“ಇನ್ನು ಬೆಂಗಳೂರಿನಲ್ಲಿ ವಿಧಾನಸೌಧ ಕಟ್ಟಡ ಬಿಟ್ಟರೆ ಪ್ರವಾಸಿಗರ ಆಕರ್ಷಕ ಕೇಂದ್ರಗಳು ಹೆಚ್ಚಾಗಿಲ್ಲ. ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ನೋಡುತ್ತಿದ್ದ ಕಾಲ ಮುಗಿದಿದೆ. ಸಣ್ಣ ಮಕ್ಕಳು ನೆಹರು ಪ್ಲಾನೆಟೋರಿಯಂ ನೋಡಬಹುದು. ಇದರ ಹೊರತಾಗಿ ಪ್ರಮುಖವಾಗಿ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಸ್ಕೈಡೆಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ವಿಚಾರವಾಗಿ ವಿವರಣೆ ನೀಡಲಾಗುವುದು” ಎಂದು ತಿಳಿಸಿದರು.
ಇದಕ್ಕೂ ಮುನ್ನ ಬ್ರ್ಯಾಂಡ್ ಬೆಂಗಳೂರು ಕುರಿತ ಕಿರುಹೊತ್ತಿಗೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಸತಿ ಸಚಿವ ಜಮೀರ್ ಅಹ್ಮದ್, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಬಿಡುಗಡೆಗೊಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ