
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಗೃಹ ಸಚಿವ ಅಮಿತ್ ಶಾ ಅವರ ಪುತ್ತುರು ರೋಡ್ ಶೋ ರದ್ದು ಮಾಡಿದ್ದಾರೆ. ಅಮಿತ್ ಶಾ ಅವರಿಗೆ ಲಾ ಆಂಡ್ ಆರ್ಡರ್ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಗೃಹ ಸಚಿವರಿಗೆ ರಕ್ಷಣೆ ಕೊಡಲು ಇವರಿಗೆ ಆಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಗೃಹ ಸಚಿವರಿಗೆ ರಕ್ಷಣೆ ಇಲ್ಲ ಎಂದರೆ ಜನರ ಪರಿಸ್ಥಿತಿ ಏನಿರಬಹುದು? ಕಾನೂನಿಲ್ಲದ ಸರ್ಕಾರ ಇಲ್ಲಿಗೆ ಕೊನೆಯಾಗಬೇಕು. ರಾಜ್ಯದಲ್ಲಿ ಜನಪರವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ನಾವು ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿ ಮಾಡ್ತೀವಿ. ಉಡುಪಿ, ದಕ್ಷಿಣ ಕನ್ನಡದಲ್ಲಿ ನಾವು ಹತ್ತು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಕರಾವಳಿಯಲ್ಲಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು:
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕರಾವಳಿಯಲ್ಲಿ ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಂದಿದೆ.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಆದ ಕಾರ್ಯಕ್ರಮ ರೂಪಿಸಿದೆ. ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಈ ಭಾಗದ ಹಿಂದುಳಿದ ವರ್ಗಗಳಾದ ಮೊಗವೀರರು, ಬಂಟರು, ಬಿಲ್ಲವರು, ಕುಲಾಲ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಮಾಡಿ, ಈ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಪ್ರಕಟ ಮಾಡಿ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗುವುದು ಎಂದರು.
ಈ ಭಾಗದಲ್ಲಿ ಹತ್ಯೆ ನಡೆದಾಗ ಬಿಜೆಪಿ ಕಾರ್ಯಕರ್ತರು ಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷರ ವಿರುದ್ಧ ಹೇಗೆ ಪ್ರತಿಭಟನೆ ನಡೆಸಿದರು ಎಂದು ನಿಮಗೆ ಗೊತ್ತೇ ಇದೆ. ಹಿಂದುತ್ವದ ಹೆಸರಿನ ಹೋರಾಟದಲ್ಲಿ ಬಿಜೆಪಿ ನಾಯಕರ ಮಕ್ಕಳು ಬಲಿಯಾಗಿಲ್ಲ. ಬಡವರ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಈ ಬಗ್ಗೆ ಜನರಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ಬಿಡುತ್ತೇನೆ ‘ ಎಂದು ತಿಳಿಸಿದರು.
ಟಿಕೆಟ್ ಹಂಚಿಕೆ ವಿಚಾರವಾಗಿ ಸ್ಕ್ರೀನಿಂಗ್ ಕಮಿಟಿ ಸಭೆ ಬಗ್ಗೆ ಕೇಳಿದಾಗ, ‘ ನಮ್ಮ ಪಕ್ಷದ ಟಿಕೆಟ್ ಹಂಚಿಕೆಗೆ ನಮ್ಮದೇ ಆದ ಪ್ರಕ್ರಿಯೆ ಇವೆ. ನಾವು ಈಗಾಗಲೇ ಚುನಾವಣಾ ಸಮಿತಿ ಸಭೆ ಮಾಡಿದ್ದು, ಸ್ಕ್ರೀನಿಂಗ್ ಕಮಿಟಿ ಚರ್ಚೆ ಮಾಡಿ ಶೀಘ್ರದಲ್ಲಿ ಪಟ್ಟಿ ಪ್ರಕಟ ಮಾಡಲಾಗುವುದು ‘ ಎಂದರು.
ಬಿಜೆಪಿ ಹಿಂದುತ್ವ ಈ ಬಾರಿ ಚುನಾವಣೆಯಲ್ಲಿ ವರ್ಕ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ ನಾನು ಶಿವಮೊಗ್ಗಕ್ಕೆ ಹೋಗಿದ್ದಾಗ ಆಯನೂರು ಮಂಜುನಾಥ್ ಅವರು ಮೋದಿ, ಅಮಿತ್ ಶಾ, ಕಟೀಲ್ ಅವರ ಫೋಟೋ ಹಾಕಿಕೊಂಡು ಗೂಂಡಾ, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ, ಕೋಮುಗಲಭೆ, ದಂಗೆ, ರಕ್ತಪಾತ ರಹಿತ, ನಿಷೇದಾಜ್ಞೆ ಮುಕ್ತ ನೆಮ್ಮದಿಯ ಶಿವಮೊಗ್ಗಕ್ಕೆ ಬೆಂಬಲ ನೀಡುವಂತೆ ಬೋರ್ಡ್ ಹಾಕಿಕೊಂಡಿದ್ದಾರೆ. ಅಂದರೆ ಶಿವಮೊಗ್ಗದಲ್ಲಿ ನೆಮ್ಮದಿ, ಶಾಂತಿ ಇಲ್ಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಸಂಸದ, ಎಂ ಎಲ್ ಸಿ ಆಗಿದ್ದ ಆಯನೂರು ಮಂಜುನಾಥ ಅವರಿಗೆ ನಾವು ಹೇಳುತ್ತಿದ್ದ ಸತ್ಯ ಒಪ್ಪಿರುವುದಕ್ಕೆ ಸೆಲ್ಯೂಟ್ ಮಾಡುತ್ತೇನೆ. ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ಸೌಹಾರ್ದತೆ ನಾಶವಾಗಿದ್ದು ಮಲೆನಾಡು ಹಾಗೂ ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರವನ್ನು ಕಿತ್ತುಹಾಕಬೇಕು. ಬಿಜೆಪಿಯವರು ಅಂಬೇಡ್ಕರ್ ಅವರ ಸಂವಿಧಾನದ ಹೆಸರಲ್ಲಿ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿ ನಂತರ ಎಲ್ಲಾ ವರ್ಗದ ರಕ್ಷಣೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರ ಜಿಲ್ಲೆ, ಮಲೆನಾಡು, ಕರಾವಳಿ ಭಾಗದಲ್ಲಿ ಇದು ಸಾಧ್ಯವಾಗಿಲ್ಲ ಎಂದು ಅವರ ಪ್ರಣಾಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಮತ್ತೇನು ಬೇಕು? ‘ ಎಂದು ತಿಳಿಸಿದರು.
ಶಾಂತಿ ಬಯಸುವುದರಲ್ಲಿ ತಪ್ಪೇನು ಎಂಬ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅರ್ಹತೆಯನ್ನು ಅವರು ಉಳಿಸಿಕೊಂಡಿಲ್ಲ. ಇಡೀ ಸರ್ಕಾರ ಹಾಗೂ ರಾಜ್ಯಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ಮೆರವಣಿಗೆ ಮಾಡಿದ್ದು ಅವರೇ ಅಲ್ಲವೇ? ಬಿಜೆಪಿ ಅವರು ಹೃದಯಪೂರ್ವಕವಾಗಿ ಸತ್ಯ ಒಪ್ಪಿಕೊಂಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ‘ ಎಂದರು.
*ಭೀಕರ ಅಪಘಾತ; ಮೂವರು ಯುವಕರು ಬಲಿ*
https://pragati.taskdun.com/bike-accidentthree-youth-deathdavanagere/