Kannada NewsKarnataka NewsLatestPolitics

*ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಮಾತು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ ಎಂದರೆ ಪ್ರತಿ ನಿಲ್ದಾಣದಲ್ಲೂ ಬಸ್ ಇಳಿದು ಹತ್ತುವಂತೆ ಮಾಡುವುದಲ್ಲ,. ಒಮ್ಮೆ ಹತ್ತಿದರೆ ಕಡೆಯ ತನಕವೂ ಇರುವಂತಹ ದೃಢ ನಿರ್ಧಾರ ಮಾಡಬೇಕು. ಬಸ್ ಹತ್ತುವುದು, ಇಳಿಯುವುದು ಮಾಡಬಾರದು. ಮಾಡಿದರೆ ಆಗ ನಮ್ಮ ಬೆಲೆಯನ್ನೇ ಕಳೆದುಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜೆಡಿಎಸ್ ನಾಯಕ ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕ್ಷದಲ್ಲಿ ಹೆಚ್ಚು ಕಾಲ ಇದ್ದಷ್ಟು ಹಿರಿತನ, ಜವಾಬ್ದಾರಿ ಮತ್ತು ಗೌರವ ಬರುತ್ತದೆ. ಬರುವುದು, ಹೋಗುವುದು ಮಾಡಿದರೆ ನಾಯಕತ್ವಕ್ಕೂ ಧಕ್ಕೆಯಾಗುತ್ತದೆ. ಈ ಮಾತನ್ನು ಕೇವಲ ಇಂದು ಪಕ್ಷ ಸೇರ್ಪಡೆಯಾದ ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಹೇಳುತ್ತಿಲ್ಲ, ರಾಜ್ಯದ ಸಮಸ್ತ ಕಾರ್ಯಕರ್ತರು, ಮುಖಂಡರಿಗೆ ಕಿವಿ ಮಾತು ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯುವುದೇ ಒಂದು ಸೌಭಾಗ್ಯ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷದ ರಕ್ತ ಸಾಮಾನ್ಯವಾದದ್ದಲ್ಲ ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ, ಕಾಂಗ್ರೆಸ್ಸಿಗನಾಗುವುದೆಂದರೆ ಅದು ಅಭಿಮಾನದ ಸಂಕೇತ. ಈ ರಾಷ್ಟ್ರ ಧ್ವಜ ಯಾರ ಹೆಗಲ ಮೇಲಿದೆ ಎಂದರೆ ಅದು ಕಾಂಗ್ರೆಸ್ಸಿಗರ ಹೆಗಲ ಮೇಲೆ ಮಾತ್ರ ನಾವೆಲ್ಲಾ ಅಭಿಮಾನದಿಂದ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳಬೇಕು.

ಈಗ ನಾವು ಕೊಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ- ಜನತಾದಳ ಪಕ್ಷಗಳಿಗೆ ನೀಡಲು ಸಾಧ್ಯವಾಯಿತೇ? ಅರಣ್ಯ ಹಕ್ಕು, ಆದಿವಾಸಿಗಳ ಹಕ್ಕು ಸೇರಿದಂತೆ ಅನೇಕ ಕಾನೂನುಗಳನ್ನು ನೀಡಿದ್ದು ನಮ್ಮ ಕಾಂಗ್ರೆಸ್. ದೇಶದ ಎಲ್ಲಾ ಜಾತಿ, ಧರ್ಮಗಳ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ.

ದಿವಂಗತ ಬಂಗಾರಪ್ಪ ಅವರು ಆಶ್ರಯ ಯೋಜನೆಗೆ ಹೊಸ ರೂಪ ನೀಡಿದರು, ಗ್ರಾಮ ದೇವತೆಗಳ ದೇವಾಲಯ ಜೀರ್ಣೋದ್ಧಾರಕ್ಕೆ ಆರಾಧನಾ ಯೋಜನೆ ಪ್ರಾರಂಭ ಮಾಡಿದ್ದೇ ಬಂಗಾರಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ.

ಪಕ್ಷ ಸೇರ್ಪಡೆಯಾದ ಆಯನೂರು ಮಂಜುನಾಥ್ ಅವರು ಬಿಜೆಪಿಗೆ ಹೋದರು, ಜೆಡಿಎಸ್‌ ಸೇರಿದರು ಆದರೆ ಕಾಂಗ್ರೆಸ್ ಪಕ್ಷದ ಬಗೆಗಿನ ಒಲವು ಅವರನ್ನು ಮತ್ತೆ ಕರೆತಂದಿದೆ. ಎಲ್ಲಾ ನದಿಗಳು ಸಮುದ್ರ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಸೇರಲೇ ಬೇಕು, ನಮ್ಮ ಪಕ್ಷ ಸಮುದ್ರ ಇದ್ದಂತೆ ಎಂದರು.

ನಮ್ಮ ಪಕ್ಷ ಸೇರುವವರಿಗೆ ಯಾವುದೇ ಸ್ಥಾನಮಾನ ನೀಡುತ್ತೇವೆ ಎನ್ನುವ ಭರವಸೆ ನೀಡಿಲ್ಲ. ಅವರ ಶಕ್ತಿ, ಸಂಘಟನಾ ಸಾಮರ್ಥ್ಯ ನೋಡಿ ಪರಿಗಣಿಸಲಾಗುವುದು. ಯಾರು ಪಕ್ಷದ ಬೆಳವಣಿಗೆಗೆ ತಳಮಟ್ಟದಿಂದ ಕೆಲಸ ಮಾಡಿರುತ್ತಾರೆ ಅವರಿಗೆ ಮೊದಲ ಆದ್ಯತೆ, ಹೊಸದಾಗಿ ಬಂದಿರುವವರು ಹಳಬರನ್ನು ತಳ್ಳಿ ಮುಂದೆ ಬರಲು ಈ ಡಿ.ಕೆ.ಶಿವಕುಮಾರ್ ಅವಕಾಶ ನೀಡುವುದಿಲ್ಲ.

ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ, ಮೊದಲು ತಾಯಿ ಆನಂತರ ನಾವೆಲ್ಲಾ, ನಾನು ಮತ್ತು ಮುಖ್ಯಮಂತ್ರಿಗಳು ಸೇರಿ ತೀರ್ಮಾನ ಮಾಡಿದ್ದೇವೆ. ಇದು ಕೇವಲ ನನ್ನೊಬ್ಬನ ತೀರ್ಮಾನವಲ್ಲ. ಇಷ್ಟೊಂದು ಮಟ್ಟದಲ್ಲಿ ಪಕ್ಷ ಸೇರ್ಪಡೆಯಾಗುತ್ತಿರುವುದು ನೋಡಿ ಸಂತೋಷವಾಗುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರದಲ್ಲಿ ಸೋಷಿಯಲ್‌ ಎಂಜಿನಿಯರಿಂಗ್ ತಿಳಿದುಕೊಳ್ಳದೆ ಎಡವಟ್ಟಾಯಿತು. ಲೋಕಸಭೆಯಲ್ಲಿ ಸರಿಪಡಿಸಿಕೊಳ್ಳುತ್ತೇವೆ.

ಕಾಂಗ್ರೆಸ್ ಪಕ್ಷ ಸೇರದೆ ಇಷ್ಟು ದಿನ ಮಾಡಿದ ತಪ್ಪನ್ನು ಮಾಡದೆ,‌ ಎಲ್ಲಾ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಇಂದಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಿ ಎಂದು ಕರೆ ನೀಡಿದರು.

ಗೃಹಲಕ್ಷ್ಮೀ ಯೋಜನೆ ಇದೇ ಆ.30 ಕ್ಕೆ ಮೈಸೂರಿನಲ್ಲಿದೆ, ಆನಂತರ ಎಲ್ಲಾ ಜಿಲ್ಲಾ ಮಟ್ಟದ ಫಲಾನುಭವಿಗಳನ್ನು ಸೇರಿಸಿ ಕಾರ್ಯಕ್ರಮ ಮಾಡುವ ಉದ್ದೇಶವಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button