*ನನ್ನ ಮೇಲಿನ ಆರೋಪ ಸಾಬೀತಾದರೆ ಇಂದೇ ರಾಜಕೀಯ ನಿವೃತ್ತಿ; ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್ ವಿಪಕ್ಷ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನನ್ನ ಮೇಲಿನ ಕಮಿಷನ್ ಆರೋಪ ಸಾಬೀತಾದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಬೊಮ್ಮಾಯಿ, ಆರ್.ಅಶೋಕ್ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ? ಎಂದು ಸವಾಲು ಹಾಕಿದರು.
ಗುತ್ತಿಗೆದಾರರ ದೂರಿನ ಹಿಂದೆ ಯಾರಿದ್ದಾರೆ ಎಂಬುದು ಗೊತ್ತು. ಯಾರಿಗೆಲ್ಲ ದೂರು ನೀಡುತ್ತಾರೆ ನೀಡಲಿ. ಯಾರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸರ್ಕಾರ ನಡೆಸುವ ನಮಗೆ ಮಾಹಿತಿ ಇರುತ್ತೆ. ನಮಗೂ ಆಡಳಿತ ನಡೆಸುವುದು ಗೊತ್ತು. ಆರ್.ಅಶೋಕ್ ಸುಮ್ಮನೇ ಮಾತನಾಡುವುದು ಬೇಡ. ಯಾರೂ ಯಾವ ಕಮಿಷನನ್ನೂ ಕೇಳಿಲ್ಲ. ನಾನು 10-15% ಕಮಿಷನ್ ಕೇಳಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಯಾರು ನಿಮ್ಮ ಬಳಿ ಕಮಿಷನ್ ಕೇಳಿದ್ದು? ನಾನು ಕೇಳಿದ್ದೇನಾ? ಬೇರೆ ಯಾವ ಶಾಸಕರು, ಅಧಿಕಾರಿಗಳು ಯಾರು ಕೇಳಿದ್ದಾರೆ ಎಂಬುದನ್ನು ಮೊದಲು ಅವರ ಹೆಸರು ಹೇಳಲಿ ಎಂದು ಆಗ್ರಹಿಸಿದರು.
ಬಿಜೆಪಿಯವರು ಅವರ ಅವಧಿಯಲ್ಲೇ ಬಿಲ್ ಕ್ಲೀಯರ್ ಮಾಡಿಲ್ಲ. ಯಾಕೆ ನಿಮ್ಮ ಅವಧಿಯಲ್ಲೇ ನೀವು ಬಿಲ್ ಪಾವತಿ ಮಾಡಿಲ್ಲ? ಯಾರು ನಿಮ್ಮನ್ನು ತಡೆದರು? ಎಂದು ಪ್ರಶ್ನಿಸಿದ್ದಾರೆ. ಬೊಮ್ಮಾಯು ಅವರಾಗಲಿ, ಅಶೋಕ್ ಅವರಾಗಲಿ ನೀವೇಕೆ ಬಿಲ್ ಕ್ಲೀಯರ್ ಮಾಡಿಲ್ಲ? ಅದನ್ನು ಮೊದಲು ಸ್ಪಷ್ಟ ಪಡಿಸಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ