Politics

*ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು: ಡಿಸಿಎಂ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: “ಬಂಡವಾಳ ಹೂಡಿಕೆ ವಿಚಾರವಾಗಿ ರಾಜ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಚುನಾವಣೆ ಮುಗಿದ ಬಳಿಕ ಅವರಿಗೆ ದಾಖಲೆ ಸಮೇತ ಉತ್ತರ ನೀಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಗಳಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದು ಹೀಗೆ;

“ಈ ರೀತಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಅವರು ದಾಖಲೆಗಳನ್ನು ಪರಿಶೀಲಿಸಿ ಮಾತನಾಡಬೇಕು. ಬಿಜೆಪಿಯ ದುರಾಡಳಿತ, ಕಿರುಕುಳಕ್ಕೆ ಬೇಸತ್ತು ಲಕ್ಷಾಂತರ ಉದ್ದಿಮೆದಾರರು, ವ್ಯಾಪಾರಿಗಳು ದೇಶ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಂಡವಾಳ ಹೂಡಿಕೆದಾರರು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ನಮ್ಮ ಕೈಗಾರಿಕಾ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಈ ವಿಚಾರವಾಗಿ ದಾಖಲೆ ಸಮೇತ ಬಿಜೆಪಿ ನಾಯಕರಿಗೆ ಉತ್ತರ ನೀಡುತ್ತೇವೆ. ಕರ್ನಾಟಕ ಪ್ರಗತಿ, ಅಭಿವೃದ್ಧಿ ಹಾಗೂ ಶಾಂತಿಯ ನಾಡು ಎಂದು ಇಡೀ ದೇಶಕ್ಕೇ ಗೊತ್ತಿದೆ. ನಮ್ಮ ರಾಜ್ಯ ಹಾಗೂ ಬೆಂಗಳೂರನ್ನು ಇಡೀ ವಿಶ್ವವೇ ನೋಡುತ್ತಿದೆ” ಎಂದರು.

ಪ್ರಜ್ವಲ್ ರೇವಣ್ಣ ಅವರ ವಿಚಾರವಾಗಿ ದೇವೇಗೌಡರ ಪತ್ರದ ಬಗ್ಗೆ ಕೇಳಿದಾಗ, “ಇದು ಅವರ ಕುಟುಂಬದ ವಿಚಾರ. ಈ ವಿಚಾರವಾಗಿ ಮಾತನಾಡುವುದಿಲ್ಲ” ಎಂದರು.

ಸಿಎಂ ಹಾಗೂ ಡಿಸಿಎಂ ನಗರ ಪ್ರದಕ್ಷಿಣೆ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಅವರ ಟೀಕೆ ಬಗ್ಗೆ ಕೇಳಿದಾಗ, “ಅವರು ಏನಾದರೂ ಟೀಕೆ ಮಾಡಲಿ. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ನಾವು ಜನರಿಗಾಗಿ ಇದ್ದೇವೆ. ಜನ ನಮ್ಮ ಪರವಾಗಿ ಇರುತ್ತಾರೆ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button