ಪ್ರಗತಿವಾಹಿನಿ ಸುದ್ದಿ: “ಎಲ್ಲರ ಮೇಲೂ ಸದಾ ಆರೋಪ ಮಾಡುವುದೇ ಬಿಜೆಪಿ ಕೆಲಸ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕಲಬುರ್ಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು.
ನಾಗಮಂಗಲ, ಮಂಗಳೂರು ಸೇರಿದಂತೆ ಒಂದಷ್ಟು ಕಡೆ ಗಣಪತಿ ವಿಸರ್ಜನೆ ಗಲಾಟೆಗಳಲ್ಲಿ ಪಿಎಫ್ ಐ, ಬಾಂಗ್ಲಾ ವಲಸಿಗರ ಕೈವಾಡವಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಗಣಪತಿ ವಿಸರ್ಜನೆ ವೇಳೆ ಉಂಟಾಗಿರುವ ಗಲಭೆಗಳ ವಿರುದ್ಧ ನಮ್ಮ ಸರ್ಕಾರ ಕೂಡಲೇ ಕ್ರಮ ತೆಗೆದುಕೊಂಡಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಸರ್ಕಾರ ಮಾಡುತ್ತದೆ. ಪೊಲೀಸ್ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾತನಾಡುವವರು ಮಾತನಾಡಲಿ” ಎಂದರು.
ಪರಪ್ಪನ ಅಗ್ರಹಾರದ ಮೇಲೆ ಪೊಲೀಸ್ ದಾಳಿ, ಗುತ್ತಿಗೆದಾರ ಚೆಲುವರಾಜು ಅವರಿಂದ ಶಾಸಕ ಮುನಿರತ್ನ ಅವರ ಮತ್ತೊಂದು ಆಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ “ನಾನು ಅಮೆರಿಕದಲ್ಲಿದ್ದ ಕಾರಣಕ್ಕೆ ಯಾವ ವಿಚಾರಗಳ ಬಗ್ಗೆಯೂ ಮಾಹಿತಿ ಇಲ್ಲ. ಎಲ್ಲದರ ಬಗ್ಗೆ ತಿಳಿದು ಮಾತನಾಡುತ್ತೇನೆ” ಎಂದು ಹೇಳಿದರು.
ಅಮೆರಿಕ ಪ್ರವಾಸದ ಬಗ್ಗೆ ಕೇಳಿದಾಗ “ಅಮೆರಿಕದ ಚುನಾವಣಾ ಪದ್ಧತಿ, ಅಲ್ಲಿನ ಯುವಕರ ಉತ್ಸಾಹ, ಆಸಕ್ತಿ ಸೇರಿದಂತೆ ಅನೇಕ ವಿಚಾರಗಳನ್ನು ನಾವು ಕಲಿಯಬೇಕಿದೆ. ಅಮೆರಿಕಗೆ ಕುಟುಂಬ ಸಮೇತ ಖಾಸಗಿ ಪ್ರವಾಸಕ್ಕೆ ಹೋಗಿದ್ದೆ” ಎಂದು ಹೇಳಿದರು.
“ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಕಮಲ ಹ್ಯಾರಿಸ್ ಸೇರಿದಂತೆ ನಾನು ಯಾರನ್ನೂ ಭೇಟಿಯಾಗಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನಾನು ಹೋದ ಸಮಯದಲ್ಲೇ ಚುನಾವಣಾ ರ್ಯಾಲಿ ನಡೆಯುತ್ತಿತ್ತು. ಅದು ಹೇಗೆ ನಡೆಯುತ್ತದೆ ಎಂದು ವೀಕ್ಷಿಸಿದೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ