Kannada NewsKarnataka NewsLatestPolitics

*ಕುಮಾರಸ್ವಾಮಿ ಅವರು ಹೇಳಿದ್ದನ್ನೇ ನಾನು ಪಾಲನೆ ಮಾಡುತ್ತಿದ್ದೇನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್*

ಬಿಜೆಪಿ ಹಾಗೂ ದಳದವರಿಗೆ ನಾನು ಉತ್ತರಕೊಡಬೇಕಾಗಿಲ್ಲ; ಡಿಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾವು ಮತ್ತು ತಮಿಳುನಾಡಿನವರು ಅಣ್ಣ ತಮ್ಮಂದಿರಂತೆ ಕಾವೇರಿ ವಿಚಾರ ಬಗೆಹರಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಹಿಂದೆ ಹೇಳಿದ್ದರು. ಅವರ ಮಾತಿನಂತೇ ನಾನು ನಡೆಯುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.

ವಿಧಾನಸೌಧದಲ್ಲಿ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನೀರಿನ ವಿಚಾರವಾಗಿ ದಿನಾ ಜಗಳ ಮಾಡುವುದ್ದಕ್ಕಿಂತ, ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂಬುದು ನನ್ನ ಆಶಯ. ತಮಿಳುನಾಡು ಮತ್ತು ಕರ್ನಾಟಕದ ಜನ ಪರಸ್ಪರ ಎರಡೂ ಕಡೆ ಜೀವನ ಮಾಡುತ್ತಿದ್ದಾರೆ. ಹೀಗಿದ್ದಾಗ ಜಗಳ ಮಾಡುವುದು ಸರಿಯೇ? ಈ ಹಿಂದೆ ಜೂನ್ 2021ರಲ್ಲಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಇದನ್ನೇ ಹೇಳಿದ್ದರು ಎಂದರು.

ನಮ್ಮ ಕರ್ನಾಟಕ ರಾಜ್ಯಕ್ಕೆ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪೀಠ ರಚನೆ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನಾವು ನಮ್ಮ ರಾಜ್ಯದ ಪರಿಸ್ಥಿತಿ ವಾಸ್ತವಾಂಶವನ್ನು ನ್ಯಾಯಾಲಯದ ಮುಂದೆ ಇಡುತ್ತೇವೆ. ಆ.31ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದಾರೆ. ನಮಗೆ ಒಟ್ಟು 124 ಟಿಎಂಸಿ ನೀರು ಅಗತ್ಯವಿದೆ. ಆದರೆ ಈಗ ಇರುವುದು ಕೇವಲ 55 ಟಿಎಂಸಿ ಮಾತ್ರ. ಬೆಂಗಳೂರಿಗೆ ಕುಡಿಯಲು 24 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರಕ್ಕೆ 20 ಟಿಎಂಸಿ ಬೇಕು. ಕೆಆರ್ ಎಸ್ ನಲ್ಲಿ 22 ಟಿಎಂಸಿ, ಕಬಿನಿಯಲ್ಲಿ 6.5 ಟಿಎಂಸಿ, ಹಾರಂಗಿಯಲ್ಲಿ 7 ಟಿಎಂಸಿ ಹಾಗೂ ಹೇಮಾವತಿಯಲ್ಲಿ 20 ಟಿಎಂಸಿ ನೀರು ಇದೆ ಎಂದು ಹೇಳಿದರು.

ಇದೇ ಆ.23 ಬುಧವಾರ ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ವಿಚಾರವಾಗಿ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕರೆಯಲಾಗಿದೆ. ಮಾಜಿ ಮುಖ್ಯಮಂತ್ರಿಗಳು, ಸಂಸದರನ್ನು ನಾವು ಸಭೆಗೆ ಕರೆದಿದ್ದೇವೆ. ಸಭೆಯಲ್ಲಿ ಸರ್ವಪಕ್ಷ ನಿಯೋಗ ಹೋಗಿ ಕೇಂದ್ರಕ್ಕೆ ಒತ್ತಡ ಹಾಕಲು ಒಪ್ಪಿದರೆ ನಾವು ಅದಕ್ಕೆ ಸಿದ್ಧ. ನಮಗೆ ರಾಜ್ಯ ರೈತರ ಹಿತ ಮುಖ್ಯ. ನಮ್ಮ ರಾಜ್ಯದ ಗೌರವ ಉಳಿಯಬೇಕು. ಇದು ಎಲ್ಲಾ ಪಕ್ಷಗಳ ಜವಾಬ್ದಾರಿ.

ಮೇಕೆದಾಟು ಯೋಜನೆಯಲ್ಲಿ ಹುಲಿ ಸಂರಕ್ಷಣೆ ಪ್ರದೇಶ ಸೇರಿದಂತೆ ಅನೇಕ ಅಡಚಣೆ ಬಂದಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ವಪಕ್ಷ ಸಭೆ ಕರೆದಿದ್ದೇವೆ. ನಾವು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ, ಸರ್ವಪಕ್ಷ ಸಭೆ ಆದ ನಂತರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕೆ ಇಲ್ಲವೇ ಎಂದು ತೀರ್ಮಾನ ಮಾಡಲಾಗುವುದು. ಸುಪ್ರೀಂಕೋರ್ಟ್‌ ಆಗಸ್ಟ್‌ 31 ರ ತನಕ 10 ಸಾವಿರ ಕ್ಯೂಸೆಕ್ಸ್‌ ಬಿಡಬೇಕು ಎಂದು ಹೇಳಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಅನೇಕ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಅವರು ಎಷ್ಟು ನೀರು ಬಿಟ್ಟಿದ್ದರು ಎಂಬುದರ ಬಗ್ಗೆ ನನಗೆ ಅರಿವಿದೆ ಎಂದರು.

ತಮಿಳುನಾಡು ಸರ್ಕಾರ ಕೇಂದ್ರ ನೀರಾವರಿ ಪ್ರಾಧಿಕಾರದ ವಿರುದ್ದ ಹೋಗಿದ್ದಾರೆಯೇ ಹೊರತು ಕರ್ನಾಟಕ ಸರ್ಕಾರದ ವಿರುದ್ಧ ಅಲ್ಲ. ಕೇಂದ್ರ ಸರ್ಕಾರ ತಮಿಳುನಾಡು ಅರ್ಜಿ ವಿರುದ್ಧ ಅಫಿಡವಿಟ್‌ ಸಲ್ಲಿಸಬಹುದಿತ್ತು. ಆದರೆ ಏಕೆ ಸಲ್ಲಿಸಿಲ್ಲ? ಇದೆಲ್ಲವೂ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತಿರುವ ವಿಚಾರ. ಆದರೂ ಬೊಮ್ಮಾಯಿ ಅವರು ಸರ್ಕಾರಕ್ಕೆ ನೀರು ಬಿಡಬೇಡಿ ಎಂದು ಪತ್ರ ಬರೆದಿದ್ದಾರೆ. ಕುಮಾರಸ್ವಾಮಿ ಅವರು ಮೈತ್ರಿ ಕಾರಣಕ್ಕೆ ನೀರು ಹರಿಸಲಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನವರು 64 ಟಿಎಂಸಿ ನೀರನ್ನು ಬಳಸಿಕೊಂಡಿದ್ದಾರೆ ಎಂದು ಬೊಮ್ಮಾಯಿ ಅವರು ಆರೋಪ ಮಾಡುತ್ತಿದ್ದಾರೆ. ಅವರ ಪಾಲಿನ ನೀರನ್ನು ಬಳಸಿಕೊಳ್ಳುವುದ್ದಕ್ಕೆ ನಾವು ಅಡ್ಡಿ ಪಡಿಸಲು ಆಗುತ್ತದೆಯೇ? ಅವರ ಪಾಲಿನ ನೀರನ್ನು ಅವರು ಹೇಗಾದರೂ ಬಳಸಿಕೊಳ್ಳಲಿ. ಅದನ್ನು ಪ್ರಶ್ನಿಸುವ ಹಕ್ಕು ನಮಗೆ ಇಲ್ಲ. ನಾವು ಪ್ರತಿ ಹನಿ ನೀರನ್ನು ಲೆಕ್ಕಾಚಾರದಲ್ಲಿ ನೀಡುತ್ತಿದ್ದೇವೆ. ನಾವು ಹೆಚ್ಚುವರಿಯಾಗಿ ನೀರು ಬಿಟ್ಟಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಇಬ್ಬರಿಗೂ ಕಾವೇರಿ ನೀರಿನ ವಿಚಾರ ಸರಿಯಾಗಿ ಗೊತ್ತಿಲ್ಲದೇ ಏಕೆ ಮಾತನಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ತಮಿಳುನಾಡಿಗೆ ಕೊಡಲು ನಮ್ಮಲ್ಲಿ ನೀರಿಲ್ಲ. ರೈತರ ಬೆಳೆ ಹಾಳಾಗಬಾರದು ಎಂದು ಎರಡು ಬಾರಿ ನೀರು ಬಿಟ್ಟಿದ್ದೇವೆ. ನಾವು ಈಗಾಗಲೇ ಪ್ರಾಧಿಕಾರಕ್ಕೆ ತಮ್ಮ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದು, ಸರ್ವಪಕ್ಷ ಸಭೆ ಬಳಿಕ ನಾವು ಸುಪ್ರೀಂ ಕೋರ್ಟಿಗೆ ಮೆಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ. ನಾನು ಬಿಜೆಪಿ ಹಾಗೂ ದಳದವರಿಗೆ ಉತ್ತರಕೊಡಬೇಕಾಗಿಲ್ಲ. ರಾಜ್ಯದ ಜನರಿಗೆ ಹಾಗೂ ನ್ಯಾಯಾಲಯಕ್ಕೆ ನಾನು ಉತ್ತರ ನೀಡಬೇಕು. ಟೀಕೆ ಮಾಡುವವರಿಗೆ ಉತ್ತರ ಕೊಡಬೇಕಿಲ್ಲ. ಅವರು ಮಾತನಾಡುತ್ತಾರೆ ಎಂದು ನಾನು ತಪ್ಪಾಗಿ ಮಾತನಾಡಿದರೆ ತಮಿಳುನಾಡಿನವರು ಅದನ್ನು ನ್ಯಾಯಾಲಯದ ಮುಂದೆ ಇಡುತ್ತಾರೆ ಎಂದು ಹೇಳಿದರು.

ಪ್ರಶ್ನೋತ್ತರ:

ಇಂಡಿಯಾ ಮೈತ್ರಿಗಾಗಿ ನೀರು ಬಿಡಲಾಗುತ್ತಿದೆ ಎಂಬ ಟೀಕೆ ಬಗ್ಗೆ ಕೇಳಿದಾಗ, “ಮಾತನಾಡುವವರನ್ನು ಬೇಡ ಎನ್ನಲು ಆಗುವುದಿಲ್ಲ. ಅವರು ಮಾತನಾಡಲಿ. ರಾಜ್ಯ ಹಾಗೂ ರೈತರನ್ನು ಕಾಪಾಡಲು ನಾನು ಕೆಲಸ ಮಾಡುತ್ತೇನೆ. ಟೀಕೆ ಮಾಡುವವರಿಗೆ ಅಲ್ಲ. ಟೀಕೆ ಮಾಡುವವರು ನಮ್ಮ ಕಾಲದಲ್ಲಿ ಏನಾಗಿತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಹೇಳಿದರು.

ಕಾವೇರಿ ನೀರು ವಿಚಾರವನ್ನು ವಿನಾಕಾರಣ ವಿವಾದ ಮಾಡಲಾಗುತ್ತಿಲ್ಲವೆ ಎಂದು ಕೇಳಿದಾಗ, “ಕೆಲವರು ರಾಜಕಾರಣ ಮಾಡಬೇಕು, ಅದಕ್ಕೆ ವಿವಾದ ಮಾಡುತ್ತಿದ್ದಾರೆ. ಈ ವಿಚಾರ ಜನರಿಗೂ ಗೊತ್ತಿದೆ. ನಮ್ಮ ರೈತರ ಅನುಕೂಲಕ್ಕಾಗಿ ನಾನು ಎರಡು ಬಾರಿ ನಾಲೆಗೆ ನೀರು ಬಿಡಿಸಿದ್ದೇನೆ. ಚೆಲುವರಾಯ ಸ್ವಾಮಿ ಅವರು ನಮಗೆ ಒತ್ತಡ ಹಾಕಿ ನೀರು ಬಿಡಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲ ಆಗಿಲ್ಲವೇ? ಈ ನೀರಿನ ಅಭಾವ ನೀಗಿಸಲು ಇರುವ ಪರಿಹಾರ ಎಂದರೆ ಅದು ಮೇಕೆದಾಟು ಯೋಜನೆ ಮಾತ್ರ” ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರು ನೈಸ್‌ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, “ಸದಾ ಸುದ್ದಿಯಲ್ಲಿ ಇರಬೇಕು ಎಂದು ಇದೇ ವಿಚಾರವನ್ನು ಪದೇ, ಪದೇ ಮುನ್ನೆಲೆಗೆ ತರುತ್ತಿದ್ದಾರೆ. ಏನು ಬೇಕಾದರೂ ಬಿಡುಗಡೆ ಮಾಡಲು ಅವರು ಸ್ವತಂತ್ರರು. ನಾನು ಎಷ್ಟು ಹೆದರಿಕೊಳ್ಳುತ್ತೇನೆ ಎನ್ನುವುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ವಿನಾಕಾರಣ ಅದೇ ವಿಚಾರ ಮಾತನಾಡಲು ಇಷ್ಟವಿಲ್ಲ. ನನಗೆ ಮಾಡಲು ಬೇರೆ ಕೆಲಸಗಳಿವೆ” ಎಂದು ಪ್ರತ್ಯುತ್ತರ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button