Kannada NewsKarnataka NewsLatestPolitics

*ಕಾಲಚಕ್ರ ಉರುಳಲಿದೆ… ಡಿಸಿಎಂ ಮಾರ್ಮಿಕ ಹೇಳಿಕೆಯ ಅರ್ಥವೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: “ನನಗೆ ಕಿರುಕುಳ ನೀಡುವ ಉದ್ದೇಶದಿಂದಲೇ ದ್ವೇಷ ರಾಜಕಾರಣ ಮಾಡಲಾಗುತ್ತಿದ್ದು, ಅಧಿಕಾರಿಗಳೂ ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ. ಭಗವಂತ ಹಾಗು ನ್ಯಾಯಾಲಯದ ಮೇಲೆ ನನಗೆ ನಂಬಿಕೆಯಿದೆ. ಕಾಲಚಕ್ರ ಉರುಳಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ವಿಚಾರದಲ್ಲಿ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ವಿಧಾನಸೌಧದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಬಿಐ ಅವರಿಗೆ ನ್ಯಾಯಾಲಯದ ಮೆಟ್ಟಿಲೇರುವ ಹಕ್ಕಿದೆ, ಅವರು ಹೋಗಿದ್ದಾರೆ. ಅವರು ಏನು ಹೇಳಬೇಕೋ ಹೇಳುತ್ತಾರೆ, ನಾವು ಏನು ಹೇಳಬೇಕೋ ಹೇಳುತ್ತೇವೆ. ಅಂತಿಮವಾಗಿ ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದಲ್ಲಿ ಅನ್ಯಾಯ ಆಗುವುದಿಲ್ಲ ಎಂಬ ನಂಬಿಕೆ ಇದೆ ಎಂದರು.

ನನ್ನ ವಿರುದ್ಧ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ನ್ಯಾಯಾಲಯದ ಆದೇಶವಿಲ್ಲದಿದ್ದರೂ ನನಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಗಿತ್ತು. ಈಗಿನ ಸರ್ಕಾರ ತನ್ನ ನಿರ್ಧಾರ ತೆಗೆದುಕೊಂಡು, ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿದೆ. ಈ ತೀರ್ಮಾನದ ವಿರುದ್ಧ ಸಿಬಿಐ ಈಗ ನ್ಯಾಯಾಲಯದ ಮೆಟ್ಟಿಲೇರಿದೆ.

ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದ ನಂತರವೂ ನನ್ನ ಕುಟುಂಬ ಸದಸ್ಯರು, ನನ್ನ ಸಂಸ್ಥೆ, ನನ್ನ ಜತೆ ವ್ಯವಹಾರ ಹೊಂದಿದ್ದವರಿಗೆ ನೋಟೀಸ್ ನೀಡಲಾಗಿದೆ. ನನ್ನ ಜೊತೆ 30 ವರ್ಷಗಳ ಹಿಂದೆ ವ್ಯವಹಾರ ಮಾಡಿದವರಿಗೂ ನೋಟೀಸ್ ನೀಡಿದ್ದಾರೆ. ಅವರ ಉದ್ದೇಶ ಏನು ಎಂಬುದೇ ಗೊತ್ತಾಗುತ್ತಿಲ್ಲ.

ಬಿಜೆಪಿ ನಾಯಕರ ಮೇಲೂ ಇದೇ ರೀತಿ ಪ್ರಕರಣಗಳು ಇದ್ದರೂ ಅವರ ಮೇಲೆ ಯಾವುದೇ ಕ್ರಮ ಇಲ್ಲ. ನನಗೆ ಕಿರುಕುಳ ನೀಡುವುದಕ್ಕೂ ಒಂದು ಮಿತಿ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ಗೊತ್ತಿದೆ. ರಾಜ್ಯಸಭೆಗೆ ಅಹ್ಮದ್ ಪಟೇಲ್ ಅವರು ಸ್ಪರ್ಧಿಸಿದ್ದಾಗ ನಾನು ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಿದ್ದಕ್ಕೆ ನನ್ನ ಮೇಲೆ ದಾಳಿ ನಡೆಯುತ್ತಿದೆ ಎಂದು ಬೇಸರಿಸಿದರು.

ಆದಾಯ ತೆರಿಗೆ, ಬೇನಾಮಿ ಆಸ್ತಿ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ಇತ್ತೀಚೆಗೆ ಬಿಜೆಪಿ ಶಾಸಕರ ಮನೆಯಲ್ಲಿ ಹಣ ಸಿಕ್ಕ ಪ್ರಕರಣದಲ್ಲಿ, ಅದು ಶಾಸಕರ ಪುತ್ರನಿಗೆ ಸೇರಿದ ಹಣ. ಹೀಗಾಗಿ ಶಾಸಕರು ನಿರ್ದೋಷಿ ಎಂದು ನ್ಯಾಯಾಲಯ ಹೇಳಿದೆ. ಬಿಜೆಪಿ ಸೇರಿದರೆ ಎಲ್ಲಾ ನಾಯಕರ ಮೇಲಿನ ಕಳಂಕ ನಿವಾರಣೆಯಾಗಿ ಬಿಡುತ್ತದೆ. ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ.”

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಈ ಬೆಳವಣಿಗೆ ನಡೆಯುತ್ತಿದೆಯಲ್ಲ ಎಂದು ಕೇಳಿದಾಗ, “ಅವರು ಏನು ಮಾಡಲು ಹೊರಟಿದ್ದಾರೆ ಎಂದು ಗೊತ್ತಿಲ್ಲ. ನಾನು ಜೀವನದಲ್ಲಿ ಎಲ್ಲವನ್ನೂ ನೋಡಿದ್ದು, ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಸಿದ್ಧ. ನನ್ನನ್ನು ಜೈಲಿಗೆ ಕಳುಹಿಸಿದ ನಂತರ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನ್ಯಾಯ ಪೀಠದಿಂದ ಅನ್ಯಾಯ ಆಗುವುದಿಲ್ಲ, ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಗಳಿಗೆ ಶಿವಕುಮಾರ್ ಹಣ ರವಾನೆ ಮಾಡಿದ್ದಾರೆ ಎಂಬ ಮಾಜಿ ಪ್ರಧಾನಿ ದೇವೇಗೌಡರ ಆರೋಪದ ಬಗ್ಗೆ ಕೇಳಿದಾಗ, “ಅವರು ಅದನ್ನು ನೋಡಿದ್ದಾರಾ? ಅದರ ಬಗ್ಗೆ ಅವರಿಗೆ ಮಾಹಿತಿ ಇದ್ದರೆ ಬಹಿರಂಗಪಡಿಸಲಿ” ಎಂದು ತಿಳಿಸಿದರು.

Related Articles

Back to top button