
ಪ್ರಗತಿವಾಹಿನಿ ಸುದ್ದಿ: “ಸಿಎಂ ಕುರ್ಚಿ ಖಾಲಿಯಿಲ್ಲ. ಈ ಕುರ್ಚಿ ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎನ್ನುವ ಆರ್.ವಿ.ದೇಶಪಾಂಡೆಯವರ ಹೇಳಿಕೆ ಬಗ್ಗೆ ಕೇಳಿದಾಗ ಹೀಗೆ ಉತ್ತರಿಸಿದರು.
“ಹಿರಿಯರಾದ ದೇಶಪಾಂಡೆ ಅವರು ಆಸೆ ಪಡುವುದು ತಪ್ಪಲ್ಲ. ಆದರೆ ಮಾಧ್ಯಮಗಳ ಮುಂದೆ ಮಾತನಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನೀಡೋಣ” ಎಂದರು.
ನ್ಯಾಯಲಯದಲ್ಲಿ ಸಿದ್ದರಾಮಯ್ಯ ಅವರ ವಿರುದ್ದವಾಗಿ ತೀರ್ಪು ಬಂದರೆ ಮುಂದಿನ ನಡೆ ಏನು ಎಂದು ಕೇಳಿದಾಗ “ಯಾವುದೇ ವ್ಯತಿರಿಕ್ತವಾಗುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಕೆಲಸ ಮಾಡುತ್ತಾರೆ” ಎಂದರು.
ಕಾಂಗ್ರೆಸ್ ಬಗ್ಗೆ ಸಂಸದ ಸುಧಾಕರ್ ಪ್ರಮಾಣ ಪತ್ರ ನೀಡಲಿ
ಕೋವಿಡ್ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಡಾ.ಕೆ.ಸುಧಾಕರ್ ಅವರು, ಕಾಂಗ್ರೆಸ್ ಅವರು ಸತ್ಯಹರಿಶ್ಚಂದ್ರರೇ ಎನ್ನುವ ಹೇಳಿಕೆ ಬಗ್ಗೆ ಕೇಳದಾಗ “ಕಾಂಗ್ರೆಸ್ ಅಲ್ಲಿ ಇದ್ದು ಈಗ ಬಿಜೆಪಿಗೆ ಹೋಗಿರುವ ಸಂಸದ ಸುಧಾಕರ್ ಅವರು ತಮ್ಮ ಹೇಳಿಕೆಯ ಬಗ್ಗೆ ಮೊದಲು ಪ್ರಮಾಣ ಪತ್ರ ನೀಡಲಿ. ಅವರ ರಕ್ತ, ಆಚಾರ, ವಿಚಾರ ಎಲ್ಲವೂ ಕಾಂಗ್ರೆಸ್ ಇತ್ತು. ಈಗ ನಾಲ್ಕೈದು ವರ್ಷದಿಂದ ಬದಲಾಗಿದೆ” ಎಂದರು.
“ನಾನು ಕೋವಿಡ್ ಹಗರಣದ ವರದಿಯನ್ನು ಓದಿಲ್ಲ. ಕೇವಲ ಮಾಧ್ಯಮಗಳ ವರದಿಯನ್ನು ಮಾತ್ರ ಓದಿದ್ದೇನೆ. ವರದಿ ಪರಿಶೀಲನೆ ನಂತರ ಪ್ರತಿಕ್ರಿಯಿಸುತ್ತೇನೆ” ಎಂದು ಹೇಳಿದರು.
ಯಡಿಯೂರಪ್ಪ ಅವರ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ಶೀಘ್ರ ತನಿಖೆಗೆ ರಾಜ್ಯ ಮಹಿಳಾ ಆಯೋಗ ಸೂಚಿಸಿರುವ ಬಗ್ಗೆ ಕೇಳಿದಾಗ “ಇರ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ