*ಕೋವಿಡ್ ಸಮಯದಲ್ಲಿ ಸುರೇಶ್ ಮಾಡಿದ ಜನಸೇವೆಯನ್ನು ಕುಮಾರಣ್ಣ ಮಾತ್ರವಲ್ಲ ದೇಶದ ಯಾವುದೇ ನಾಯಕ ಮಾಡಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*
ಕಾರ್ಯಕರ್ತರ ಹೊಂದಾಣಿಕೆ ಇಲ್ಲದ ಕಾರಣ ಚನ್ನಪಟ್ಟಣದಲ್ಲಿ ಅಮಿತ್ ಷಾ ರೋಡ್ ಶೋ
ಪ್ರಗತಿವಾಹಿನಿ ಸುದ್ದಿ: “ಕೋವಿಡ್ ಸಮಯದಲ್ಲಿ ಸಂಸದ ಡಿ.ಕೆ ಸುರೇಶ್ ಅವರು ಮಾಡಿದ ಜನಸೇವೆ, ಕೆಲಸಗಳನ್ನು ಕುಮಾರಣ್ಣ ಮಾತ್ರವಲ್ಲ ದೇಶದ ಬೇರೆ ಯಾವುದೇ ನಾಯಕ ಮಾಡಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿದರು.
ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳ ಭೇಟಿ ವಿಚಾರವಾಗಿ ಮಾಹಿತಿ ನೀಡಿದ ಅವರು, “ರಾಜರಾಜೇಶ್ವರಿ ನಗರ ದೇವರ ಹೆಸರಲ್ಲಿದೆ. ಅಲ್ಲಿ ಪ್ರಚಾರ ಆರಂಭಿಸುವ ಮುನ್ನ ಆ ದೇವರ ಹೆಸರಲ್ಲಿ ಪೂಜೆ ಮಾಡುತ್ತೇವೆ. ಆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈಗ ದೊಡ್ಡ ಬದಲಾವಣೆ ಮಾಡಲು ಜನ ಮುಂದಾಗಿದ್ದಾರೆ. ಉಪ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಸೋತರೆ, ವಿಧಾನಸಭೆ ಚುನಾವಣೆಯಲ್ಲಿ ಕೇವಲ 10 ಸಾವಿರ ಮತಗಳಿಂದ ಸೋತಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 25-30 ಸಾವಿರ ಮುನ್ನಡೆ ಪಡೆಯುವ ವಿಶ್ವಾಸವಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಜನರಿಗೆ ಅರಿವಾಗಿದೆ. ಬೆಂಗಳೂರು ನಗರಾಭವೃದ್ಧಿ ಸಚಿವನಾಗಿ ಇಲ್ಲಿ ಬದಲಾವಣೆ ತರಲು ಮಾಸ್ಟರ್ ಪ್ಲಾನ್ ಮಾಡಿದ್ದೇನೆ.
ಕೋವಿಡ್ ಸಮಯದಲ್ಲಿ ಸುರೇಶ್ ತೋರಿದ ಮಾನವೀಯತೆ ಹಾಗೂ ಹೃದಯವಂತಿಕೆ ಬೇರೆ ಯಾವುದೇ ನಾಯಕರು ತೋರಿಲ್ಲ. ಕುಮಾರಣ್ಣ ಕೂಡ ಮನೆಯಿಂದ ಆಚೆ ಬರಲಿಲ್ಲ.
ಕೇಂದ್ರ ಸಚಿವ ಸುರೇಶ್ ಅಂಗಡಿ ಸತ್ತಾಗ ಅವರ ಮೃತದೇಹವನ್ನು ರಾಜ್ಯಕ್ಕೆ ತರದೆ ದೆಹಲಿಯಲ್ಲೇ ಜೆಸಿಬಿ ಮೂಲಕ ಗುಂಡಿಗೆ ಹಾಕಿದರು. ಆದರೆ ಸುರೇಶ್ ಖುದ್ದಾಗಿ ಆಸ್ಪತ್ರೆಗೆ ಹೋಗಿ ಅವರಿಗೆ ಔಷಧಿ ಕೊಡಿಸಿದ್ದಲ್ಲದೆ ಸೊಂಕಿತರಿಗೆ ಆತ್ಮ ವಿಶ್ವಾಸ ತುಂಬಿದರು. ಪ್ರತಿ ಮನೆ ಮನೆಗೆ ಔಷಧಿ ಕಿಟ್ ಹಂಚಿದ್ದಾರೆ. ಅನಾಥ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ನೀಡಿದ್ದಾರೆ.
ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದ ರೈತರನ್ನು ರಕ್ಷಿಸಲು ತಮ್ಮ ಜೇಬಿನಿಂದ ಕೋಟ್ಯಂತರ ರುಪಾಯಿ ಖರ್ಚು ಮಾಡಿ ರೈತರಿಂದ ಹಣ್ಣು, ತರಕಾರಿ ಖರೀದಿಸಿ ಅದನ್ನು ಜನರಿಗೆ ಉಚಿತವಾಗಿ ಹಂಚಿದ್ದಾರೆ.
ನಾವು ಯಾರ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ಅಗತ್ಯವಿಲ್ಲ. ಸುರೇಶ್ ಮಾಡಿರುವ ಕೆಲಸಕ್ಕೆ ಜನ ಮತ ಹಾಕುತ್ತಾರೆ. ಜನ ಉಪಕಾರ ಸ್ಮರಣೆ ಮಾಡುತ್ತಾರೆ. ರಾಜ್ಯದಲ್ಲೂ ಜನ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾರೆ.
ಬಿಜೆಪಿಯಿಂದ ದುರ್ಬಲ ತಂತ್ರಗಾರಿಕೆ:
ಬಿಜೆಪಿ ಗೊಂದಲದ ಗೂಡಾಗಿದೆ. ಸದಾನಂದ ಗೌಡರು, ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸೇರಿದಂತೆ ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಏಕಾಏಕಿ ಕೈಬಿಟ್ಟಿದ್ದಾರೆ. 40 ವರ್ಷ ರಾಜಕಾರಣ ಮಾಡಿಕೊಂಡು ಬಂದವರನ್ನು ಈ ರೀತಿ ಕೈಬಿಟ್ಟರೆ ಹೇಗೆ. ಬಿಜೆಪಿ ಇಂತಹ ದುರ್ಬಲ ತಂತ್ರಗಾರಿಕೆ ಮಾಡಿದೆ.
ನಮ್ಮ ಪಕ್ಷ ಭವಿಷ್ಯದಲ್ಲಿ 30-40 ವರ್ಷಗಳ ಕಾಲ ರಾಜಕಾರಣ ಮಾಡಬಲ್ಲ ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಇವರು ರಾಜಕೀಯವಾಗಿ ಪಕ್ಷಕ್ಕೆ ಅಡಿಪಾಯ ಆಗಲಿದ್ದಾರೆ.
ಕಾರ್ಯಕರ್ತರ ಹೊಂದಾಣಿಕೆ ಇಲ್ಲದ ಕಾರಣ ಚನ್ನಪಟ್ಟಣದಲ್ಲಿ ಅಮಿತ್ ಷಾ ರೋಡ್ ಶೋ:
ಚನ್ನಪಟ್ಟಣದಿಂದ ರೋಡ್ ಶೋ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ಮಾಡಲಿ ಬಿಡಿ. ಅವರು ಚನ್ನಪಟ್ಟಣವನ್ನೇ ಯಾಕೆ ಆಯ್ಕೆ ಮಾಡಿದ್ದಾರೆ ಎಂದರೆ. ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಂದಾಗಿದ್ದು, ಕಾರ್ಯಕರ್ತರು ಒಂದಾಗುತ್ತಿಲ್ಲ. ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ದಿನಬೆಳಗಾದರೆ ರಾಜಕೀಯ ಸಂಘರ್ಷ ಮಾಡುತ್ತಿದ್ದಾರೆ. ಈ ಮೈತ್ರಿಯಿಂದ ಏನಾಗಲಿದೆ ಎಂಬ ಅನುಭವ ಯೋಗೇಶ್ವರ್ ಗೆ ಇಲ್ಲ.
ಜೆಡಿಎಸ್ ಕಾರ್ಯಕರ್ತರು ಅತಂತ್ರ ಸ್ಥಿತಿ ತಲುಪಿದ್ದಾರೆ. ಅಲ್ಲಿನ ಜನಕ್ಕೆ ಡಿ.ಕೆ ಸುರೇಶ್ ಏನು ಎಂಬುದು ಗೊತ್ತಿದೆ. ಅಮಿತ ಷಾ ಬಂದರೆ ಬಲ ಬರಬಹುದು ಎಂದು ಮಾಡುತ್ತಿದ್ದಾರೆ. ಇಬ್ಬರೂ ಸೇರಿ ಕಾರ್ಯಕರ್ತರ ಸಭೆ ಯಾಕೆ ಮಾಡಲಿಲ್ಲ? ಇವರಿಬ್ಬರೂ ಒಂದಾದ ತಕ್ಷಣ ಕಾರ್ಯಕರ್ತರು ಒಂದಾಗುತ್ತಾರಾ? ರಾಮನಗರ ಹಾಗೂ ಮಂಡ್ಯ ಜಿಲ್ಲೆ ರಾಜಕಾರಣ ನೋಡಲು ಆಗುತ್ತಿಲ್ಲ.
ಕಳೆದ ಬಾರಿ ಕುಮಾರಸ್ವಾಮಿ ಅವರು ಆಡಿದ ಮಾತು, ಹೇಳಿದ ವಿಚಾರ, ನಡೆದುಕೊಂಡ ರೀತಿ ನೋಡಿದರೆ ಈಗ ಪರಿಸ್ಥಿತಿ ಬದಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ನಿಖಿಲ್ ಪರ ಪ್ರಚಾರ ಮಾಡುವಂತೆ ಚೆಲುವರಾಯಸ್ವಾಮಿ ಅವರಿಗೆ ಆಹ್ವಾನ ನೀಡಿ ಎಂದು ಹೇಳಿದೆ. ಅನಿತಾ ಕುಮಾರಸ್ವಾಮಿ ಅವರು ಕೂಡ ಚೆಲುವರಾಯಸ್ವಾಮಿ ಮನೆಗೆ ಹೋಗಲು ಸಿದ್ಧರಿದ್ದರು. ಆದರೆ ಕುಮಾರಸ್ವಾಮಿ ಅವರು ಚೆಲುವರಾಯಸ್ವಾಮಿ ಅವರ ಮನೆಗೆ ಹೋಗೋದು ಬೇಡ ಎಂದಿದ್ದರು. ಈಗ ಕುಮಾರಸ್ವಾಮಿ ಎಲ್ಲರ ಮನೆಗೆ ಹೋಗಲು ಸಿದ್ಧ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಆಗಿರುವ ಪರಿವರ್ತನೆಗೆ ಬಹಳ ಸಂತೋಷ. ಮೈತ್ರಿ ಸರ್ಕಾರವನ್ನು ಬೀಳಿಸಿದ ಬಿಜೆಪಿ ನಾಯಕರ ಜತೆಗೆ ತಬ್ಬಾಡುತ್ತಿದ್ದಾರೆ. ಇದನ್ನು ಆ ಮತದಾರರೇ ತೀರ್ಮಾನ ಮಾಡಬೇಕು” ಎಂದು ತಿಳಿಸಿದರು.
ರಾಜಕೀಯಕ್ಕಾಗಿ ತಂದೆ ಮಗಳ ದೂರ ಮಾಡಿದ ಅಪವಾದ ಬೇಡ:
ನಿಶಾ ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ಬಗ್ಗೆ ಕೇಳಿದಾಗ, “ಆಕೆ ನಮ್ಮ ಮನೆ ಮಗಳಂತೆ. ಆಕೆ ನಮ್ಮ ಬಳಿ ಬಂದು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಅವರ ತಾಯಿ ನನಗೆ ಪರಿಚಯ. ಅವರಿಗೆ ರಕ್ಷಣೆ ಇಲ್ಲ. ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಸ್ವೀಕಾರ ಮಾಡಿ ಎಂದು ಕೇಳಿದಳು. ರಾಜಕಾರಣಕ್ಕಾಗಿ ತಂದೆ ಮಗಳ ಬೇರೆ ಮಾಡುವುದು ಸರಿಯಲ್ಲ. ಆಕೆಗೆ ಮದುವೆ ಮಾಡಬೇಕು, ಧಾರೆ ಎರೆದು ಅಕ್ಷತೆ ಹಾಕಬೇಕು. ಅದನ್ನು ತಂದೆಯೇ ಮಾಡಬೇಕು. ಹೀಗಾಗಿ ರಾಜಕೀಯಕ್ಕಾಗಿ ಅವರನ್ನು ಬೇರೆ ಮಾಡಲು ಇಷ್ಟವಿಲ್ಲ. ಆಕೆ ಬಂದು ತಮ್ಮ ಕಷ್ಟ ಹೇಳಿಕೊಂಡಿದ್ದಾಳೆ. ಆಕೆ ಪ್ರಬುದ್ಧ ಯುವತಿ. ಆಕೆಗೆ ರಾಜಕಾರಣದಲ್ಲಿನ ಆಯ್ಕೆಗೆ ಸ್ವಾತಂತ್ರ್ಯವಿದೆ. ಆಕೆ ಇನ್ನೂ ಯೋಗೇಶ್ವರ್ ಅವರ ಕುಟುಂಬದ ಮೇಲೆ ಅವಲಂಬಿತವಾಗಿದ್ದಾರೆ.
ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜಕೀಯಕ್ಕೆ ಅಪ್ಪ ಮಗಳನ್ನು ದೂರ ಮಾಡಿದರು ಎಂದು ಜನ ಪ್ರಶ್ನೆ ಮಾಡಬಹುದು. ಯೋಗೇಶ್ವರ್ ಜತೆ ಇರುವ ಬಿಜೆಪಿ ಕಾರ್ಯಕರ್ತರೇ ಆಕೆಗೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ, ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ. ನಿಶಾ ಅವರು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಗಮನಿಸಿದೆ. ಆಕೆ ದೊಡ್ಡ ಧೈರ್ಯ ಮಾಡಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ, ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.
ಶಾಮನೂರು ಅವರ ಹೇಳಿಕೆ ಖಂಡನೀಯ:
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹೆಣ್ಣು ಕುಟುಂಬದ ಕಣ್ಣು. ಕಾಂಗ್ರೆಸ್ ಪಕ್ಷ ಅವರ ಮಾತನ್ನು ಒಪ್ಪುವುದಿಲ್ಲ. ಅವರಿಗೆ ವಯಸ್ಸಾಗಿದೆ. ಅವರು ಯಾವ ಲೆಕ್ಕಾಚಾರದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ. ಅವರ ಸೊಸೆ ಸೇರಿದಂತೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಆರು ಮಹಿಳೆಯರನ್ನು ಕಣಕ್ಕೆ ಇಳಿಸಿದ್ದೇವೆ. ನಮ್ಮ ಕಾರ್ಯಕ್ರಮಗಳು ಮಹಿಳೆ ಕೇಂದ್ರಿತವಾಗಿದೆ. ಅವರ ಬದುಕಿಗೆ ಸಂಬಂಧಿಸಿದೆ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಖಂಡನೀಯ.
ಜಾತಿ, ಧರ್ಮ ಹೊರತಾಗಿ ಮಹಿಳೆಯರು, ರೈತರು, ಕಾರ್ಮಿಕರು, ಯುವಕರ ಕಲ್ಯಾಣಕ್ಕೆ ನಾವು ಬದ್ಧ. ನಾವು ನೀತಿ ಮೇಲೆ ಕಾರ್ಯಕ್ರಮ ರೂಪಿಸಿದ್ದೇವೆ” ಎಂದು ತಿಳಿಸಿದರು.
ಕೋಲಾರದಲ್ಲಿ ಎಲ್ಲರೂ ಸೇರಿ ವಿಜಯ ಪತಾಕೆ ಹಾರಿಸುತ್ತಾರೆ:
ಕೋಲಾರ ನಾಯಕರ ಅಸಮಾಧಾನ ಬಗ್ಗೆ ಕೇಳಿದಾಗ, “ಎಲ್ಲವೂ ಒಂದೇ ದಿನಕ್ಕೆ ಠುಸ್ ಆಗಿದೆ. ಈಗ ಎಲ್ಲಾ ನಾಯಕರು ಕೋಲಾರದಲ್ಲಿ ವಿಜಯ ಪತಾಕೆ ಹಾರಿಸಲು ಹೊರಟಿದ್ದಾರೆ. ಮುನಿಯಪ್ಪ, ರಮೇಶ್ ಕುಮಾರ್ ಹಾಗೂ ಇತರ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಸಂಕಲ್ಪ ಮಾಡಿದ್ದಾರೆ. ಮಾಧ್ಯಮಗಳ ಸಮೀಕ್ಷೆಗಳಲ್ಲಿ ಎನ್ ಡಿ ಎ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಂದಿದೆ. ನಾವು ಕೊಟ್ಟಿರುವ ಕಾರ್ಯಕ್ರಮ, ನಿಲ್ಲಿಸಿರುವ ಅಭ್ಯರ್ಥಿಗಳನ್ನು ದೇಶದಲ್ಲೇ ಬೇರೆಯವರು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ನಾವು ಅಮೃತ ಕೊಟ್ಟಿದ್ದೇವೆ, ಬೆನ್ನಿಗೆ ಚೂರಿ ಹಾಕಿಲ್ಲ:
ನೀವು ಜೆಡಿಎಸ್ ನಾಯಕರಿಗೆ ಬೆನ್ನಿಗೆ ಚೂರಿ ಹಾಕಿದ್ದೀರಿ ಎಂಬ ಆರೋಪದ ಬಗ್ಗೆ ಕೇಳಿದಾಗ, “ಅಮೃತ ಕೊಟ್ಟವರಿಗೆ ಬೆನ್ನಿಗೆ ಚೂರಿ ಹಾಕಿದರು ಎನ್ನುತ್ತಾರೆ. ನಾವು ಎಲ್ಲಿ ಚೂರಿ ಹಾಕಿದ್ದೇವೆ? 38 ಸ್ಥಾನ ಗೆದ್ದವರಿಗೆ ಐದು ವರ್ಷ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ವಿಷವೇ? ಅವರ ಜತೆ ನಿಂತು ಹಗಲಿರುಳು ಹೋರಾಟ ಮಾಡಿದ್ದು ವಿಷವೇ? ನನ್ನ ಆತ್ಮಶಕ್ತಿ, ನಾನು ನಂಬಿರುವ ಶಕ್ತಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ನಾನು ಏನು ಮಾಡಿದ್ದೇನೆ ಎಂದು ಗೊತ್ತಿದೆ” ಎಂದು ತಿಳಿಸಿದರು.
ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಬಗ್ಗೆ ಕೇಳಿದಾಗ, “ನಾನೇ ಅದನ್ನು ಬಿಡುಗಡೆ ಮಾಡಿದ್ದೇನೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ದೇಶ ಸುತ್ತ ಬೇಕಿದೆ. ಅವರಿಗೆ ಸಮಯ ಕಡಿಮೆ ಇದೆ ಹೀಗಾಗಿ ಸಮಯ ಇದ್ದರೆ ಬನ್ನಿ ಎಂದು ಆಹ್ವಾನ ನೀಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಒಂದು ದಿನ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ” ಎಂದು ತಿಳಿಸಿದರು.
ಸುಮಲತಾ ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಸ್ಥಳೀಯ ನಾಯಕರಿಗೆ ಬಿಟ್ಟದ್ದು:
ಸುಮಲತಾ ಅವರು ಬುಧವಾರ ಸಭೆ ಕರೆದಿರುವ ಬಗ್ಗೆ ಕೇಳಿದಾಗ, “ಸುಮಲತಾ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರಿಗೂ ಜೆಡಿಎಸ್ ನಾಯಕರಿಗೆ ನಡೆದ ಮಾತಿನ ಕಾಳಗ ಹಾಗೂ ಅವರು ಸ್ವಾಭಿಮಾನದ ಹೆಸರಲ್ಲಿ ಮತಯಾಚನೆ ಮಾಡಿದ್ದಕ್ಕೆ ಅವರು ಬದ್ಧರಿದ್ದರೆ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಆಲೋಚನೆ ಮಾಡಬಹುದು. ಅವರ ಬದ್ಧತೆ ಬದಲಾಗದಿದ್ದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ತೀರ್ಮಾನವನ್ನು ಸ್ಥಳೀಯ ನಾಯಕರಿಗೆ ಬಿಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಎಲ್ಲರೂ ಒಪ್ಪಿದಾಗ ಹೈಕಮಾಂಡ್ ನಾಯಕರು ಯಾರನ್ನು ಕೈ ಬಿಡುವುದಿಲ್ಲ” ಎಂದು ಹೇಳಿದರು.
ಕಾಂಗ್ರೆಸ್ ನಿಂದ ಆಹ್ವಾನವಿದೆ ನಾನು ಇನ್ನೂ ತೀರ್ಮಾನ ಮಾಡಿಲ್ಲ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಕೇಳಿದಾಗ, “ಅವರಿಗೆ ಸಹಾಯ ಮಾಡಿದವರ ಉಪಕಾರ ತೀರಿಸಬೇಕು ಎಂದಿದ್ದರೆ ಅವರು ತೀರ್ಮಾನ ಮಾಡಲಿ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ