ಪ್ರಗತಿವಾಹಿನಿ ಸುದ್ದಿ: ಬಿಜೆಪಿಯ ಶಾಸಕರುಗಳ ಮಾತುಕೇಳಿ 15 ಬಿಲ್ ಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಬಿಜೆಪಿಯವರ ಮಾತನ್ನೇ ಕೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಏಕಿರಬೇಕು. ಏನಾದರು ಸ್ಪಷ್ಟನೆ ಕೇಳಿದರೆ ನೀಡೋಣ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ರಾಜ್ಯಪಾಲರಿಗೆ ದೇವರು ಒಳ್ಳೆ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದಾಗ ಸರ್ಕಾರ ಬೀಳಿಸಲು ಯಾವ ಪ್ರಯತ್ನ ಮಾಡಿದರೂ ಏನು ಆಗುವುದಿಲ್ಲ. ನಾವೂ ಸಹ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಖಾರವಾಗಿ ಉತ್ತರಿಸಿದರು.
ಜಿಂದಾಲ್ ಗೆ ಭೂಮಿ ಮಾರಾಟ ಮಾಡಿದ್ದನ್ನು ಈ ಹಿಂದೆ ವಿರೋಧಿಸಿದ್ದ ಕಾಂಗ್ರೆಸ್ ಅದೇ ಜಿಂದಾಲ್ ಗೆ ಭೂಮಿ ಮಾರಾಟ ಮಾಡಿದೆ ಎಂದು ಕೇಳಿದಾಗ “ಉದ್ಯೋಗ ಸೃಷ್ಟಿಯಾಗಬೇಕು. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು. ಕರ್ನಾಟಕದಲ್ಲಿ ಇರುವ ಕೈಗಾರಿಕಾ ಕಾನೂನಿಗೆ ತಕ್ಕಂತೆ ಅವರಿಗೆ ಭೂಮಿ ನೀಡಿದ್ದೇವೆ. ನಾವು ಅವರಿಗೆ ಹೊಸದಾಗಿ ಭೂಮಿ ಕೊಟ್ಟಿಲ್ಲ. ಈ ಹಿಂದೆ ಕೊಟ್ಟಿದ್ದನ್ನೇ ಪರಿಶೀಲಿಸಿ ಸೇಲ್ ಡೀಡ್ ಮಾಡಿಕೊಟ್ಟಿದ್ದೇವೆ. ಸಾವಿರಾರು ಲಕ್ಷಾಂತರ ಜನ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಟ್ಟಂತೆ ಇಲ್ಲಿಯೂ ಅದನ್ನೇ ಮಾಡಲಾಗಿದೆ. ಬಿಜೆಪಿಯವರು ಮಾಡಿದ್ದನ್ನು ನಾವು ಸರಿ ಮಾಡಿಕೊಟ್ಟಿದ್ದೇವೆ” ಎಂದು ತಿಳಿಸಿದರು.
ಪರಮೇಶ್ವರ್ ಅವರು ಸಹ ದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದಾಗ ಬರುವವರನ್ನು ಬೇಡ ಎನ್ನಲು ಆಗುತ್ತದೆಯೇ? ಅವರದೇ ಇಲಾಖೆ ಕೆಲಸ, ಪಕ್ಷದ ಕೆಲಸ ಇರುತ್ತದೆ. ನಮಗೂ ಸಹ ಎರಡೂ ಕೆಲಸಗಳಿದ್ದು. ಎಲ್ಲರು ಒಟ್ಟಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ