*ತಾನು ಅಕ್ರಮ ಮಾಡಿ, ಬೇರೆಯವರ ಮೂತಿಗೆ ಒರೆಸುವುದು ಕುಮಾರಸ್ವಾಮಿ ಜಾಯಮಾನ: ಡಿಸಿಎಂ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ತಾನು ಅಕ್ರಮ ಮಾಡಿ, ಅದನ್ನು ಬೇರೆಯವರ ಮೂತಿಗೆ ಒರೆಸುವುದು ಕುಮಾರಸ್ವಾಮಿ ಜಾಯಮಾನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಹುಟ್ಟೂರು ಕನಕಪುರದ ದೊಡ್ಡಆಲಹಳ್ಳಿಯಲ್ಲಿ ಮತದಾನ ನಡೆಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್ ನೀಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಚುನಾವಣೆಯಲ್ಲಿ ಗಿಫ್ಟ್ ಕಾರ್ಡ್, ಹಣ ಹಂಚುತ್ತಿರುವುದು ಕುಮಾರಸ್ವಾಮಿ ಅವರು. ಕುಮಾರಸ್ವಾಮಿ ಅವರು ತಾನು ಮಾಡಬಾರದನ್ನು ಮಾಡಿ ಬೇರೆಯವರ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರುಗಳು ಈ ಕ್ಷೇತ್ರದಲ್ಲಿ ಕಾರ್ಡ್ ಗಳನ್ನು ಹಂಚುತ್ತಿದ್ದಾರೆ. ಅವರು ಕಾರ್ಡ್ ಹಂಚಿ ನಮ್ಮ ಮೇಲೆ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಜಾಯಮಾನವೇ ಅಷ್ಟು, ತಾನು ಮಾಡಿದ್ದನ್ನು ಬೇರೆಯವರ ಮೇಲೆ ಹಾಕುವುದು” ಎಂದು ತಿಳಿಸಿದರು.
ರಾಮನಗರದಲ್ಲಿ ನಿಮ್ಮ ಕಾರ್ಯಕರ್ತರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ನಾವು ಜನರ ಮುಂದೆ ಕೈ ಮುಗಿದು ಮತ ಕೇಳುತ್ತಿದ್ದರೆ, ಅವರು ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಕುಮಾರಸ್ವಾಮಿ ಚುನಾವಣೆಗೂ ಮುನ್ನ ಮಂಡ್ಯಕ್ಕೆ ಹೋಗಿದ್ದರೇ? ರಾಮನಗರ, ಕನಕಪುರಕ್ಕೆ ಹೋಗಿದ್ದರಾ? ಹೀಗಾಗಿ ಹಿಂಡು ಹಿಂಡಾಗಿ ಅವರ ಕಾರ್ಯಕರ್ತರು ನಮ್ಮ ಪಕ್ಷ ಸೇರುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಸಾಕ್ಷಿ ಇದ್ದರೆ ಆಯೋಗಕ್ಕೆ ದೂರು ನೀಡಲಿ:
ಲುಲು ಮಾಲ್ ನಲ್ಲಿ 10 ಸಾವಿರ ಗಿಫ್ಟ್ ಕೂಪನ್ ನೀಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ, “ಅವನು ಸತ್ಯಹರಿಶ್ಚಂದ್ರನ ಮೊಮ್ಮಗ ಅಲ್ಲವೇ, ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಲು ಹೇಳಿ. ಖಾಲಿ ಮಾತಿನ ಮೂಲಕ ಹಿಟ್ ಅಂಡ್ ರನ್ ಮಾಡುವುದಲ್ಲ. ಸಾಕ್ಷಿ ಇದ್ದರೆ ಆಯೋಗಕ್ಕೆ ದೂರು ನೀಡಲಿ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದರಿಂದ ಜನರಿಗೆ ಶಕ್ತಿ ಬಂದಿದೆ. ಅವರ ಮನೆಯಲ್ಲಿ ಕೆಲಸ ಮಾಡುವವರಿಗೂ ನಮ್ಮ ಗ್ಯಾರಂಟಿ ತಲುಪುತ್ತಿದೆ. ಅವರ ಮತಗಳು ನಮಗೆ ಬರಲಿದೆ. ಈಗ ಐದು ನ್ಯಾಯ ಯೋಜನೆಗಳ ಮೂಲಕ 25 ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ನಾವು ಬಸವಣ್ಣನ ನಾಡಿನವರು ನುಡಿದಂತೆ ನಡೆಯುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಬಸವಣ್ಣನ ನಾಡಿನಲ್ಲಿ ಜನಿಸಿದವರು. ಈ ಗ್ಯಾರಂಟಿ ಜಾರಿ ಮಾಡಿ ಜನರ ಬದುಕು ಬದಲಾವಣೆ ಮಾಡುತ್ತೇವೆ” ಎಂದು ತಿಳಿಸಿದರು.
ಐಟಿ ದಾಳಿ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದ ನಾಯಕರ ಮನೆ ಮೇಲೆ ದಾಳಿ ಮಾಡಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ನಾನು ಐಟಿ ಇಲಾಖೆ ಕಚೇರಿಗೆ ಹೋಗುತ್ತೇನೆ. ನಮ್ಮ ನಾಯಕರು ಚುನಾವಣೆಗೆ ಬರಬಾರದು ಎಂದು ಈತಂತ್ರ ರೂಪಿಸುತ್ತಿದ್ದಾರೆ. ಈ ಶಾಲೆಗಳಿರುವ ಜಾಗ ನಮ್ಮ ಸ್ವಂತ ಜಾಗ. ಅದನ್ನು ವಿದ್ಯಾಭ್ಯಾಸಕ್ಕಾಗಿ ನಾವು ದಾನ ಮಾಡಿದ್ದೇವೆ. ಈ ಕ್ಷೇತ್ರದಲ್ಲಿ ಇಂತಹ ಎ,ಟು ಕಟ್ಟಡಗಳಿವೆ ನೋಡಿ. ಕುಮಾರಸ್ವಾಮಿ ಬಂದು ಈ ಕಟ್ಟಡ ಕಟ್ಟಿದ್ದನಾ? ಈ ರೀತಿ ತಮ್ಮ ಆಸ್ತಿ ದಾನ ಮಾಡಿದ್ದಾರಾ?” ಎಂದರು.
ನಿಮ್ಮನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರಿಗೆ ಬೇರೆಯವರ ಏಳಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಅವರು ಬಿಜೆಪಿ ವಿರುದ್ಧ ಮುಗಿಬೀಳುತ್ತಾರೆ. ದೇವೇಗೌಡರು ಈಗಾಗಲೇ ಬಿಜೆಪಿ ನಾಯಕರು ಸಹಕಾರ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಅವರ ಮುಂದಿನ ಟಾರ್ಗೆಟ್ ಬಿಜೆಪಿ” ಎಂದರು.
ಮತದಾನದ ಬಗ್ಗೆ ಕೇಳಿದಾಗ, “ಪ್ರಜಾಪ್ರಭುತ್ವದ ಹಬ್ಬದಂದು ಕುಟುಂಬ ಸಮೇತರಾಗಿ ಹುಟ್ಟೂರಿನಲ್ಲಿ ಮತದಾನ ಮಾಡಿದ್ದೇವೆ. ಈ ಊರಿನಿಂದ ಒಬ್ಬ ಮಗನನ್ನು 8 ಬಾರಿ ವಿಧಾನಸಭೆಗೆ, ಮತ್ತೊಬ್ಬ ಮಗನನ್ನು ಮೂರು ಬಾರಿ ಸಂಸತ್ತಿಗೆ ಕಳುಹಿಸಿದ್ದಾರೆ. ನಾವೆಲ್ಲರೂ ಹೋಗಿ ಜನರ ಸೇವೆ ಮಾಡಿದ್ದೇವೆ. ರಾಜ್ಯದಲ್ಲಿ ನಮ್ಮ ಪಕ್ಷದ ಪರವಾಗಿ ಒಳ್ಳೆಯ ವಾತಾವರಣವಿದೆ. ನಾವು ಕೊಟ್ಟ ಮಾತು ಉಳಿಸಿಕೊಂಡಿರುವ ಪರಿಣಾಮ ಜನ ನಮ್ಮ ಮೇಲೆ ನಂಬಿಕೆ ಇದೆ. ಡಿ.ಕೆ. ಸುರೇಶ್ ವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ” ಎಂದರು.
ರಾಜ್ಯದಲ್ಲಿ ಎಷ್ಟು ಸೀಟು ಗೆಲ್ಲುತ್ತೀರಿ ಎಂದು ಕೇಳಿದಾಗ, “ರಾಜ್ಯದಲ್ಲಿ ನಮ್ಮ ಪಕ್ಷ 20ಕ್ಕಿಂತ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಕೇವಲ ಸುಳ್ಳು ಭರವಸೆ ನೀಡುತ್ತಾ ಬಂದಿದೆ. ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದರೂ ಯಾವುದೇ ನೆರವು ನೀಡಿಲ್ಲ. ನಾವು ರಾಜ್ಯದ ಹಿತಕ್ಕಾಗಿ ಹೋರಾಟ ಮಾಡಿದ್ದು, ಜನ ಬೆಂಬಲಿಸುವ ವಿಶ್ವಾಸವಿದೆ” ಎಂದು ತಿಳಿಸಿದರು.
ಮುಸಲ್ಮಾನರ ಮೀಸಲಾತಿ ರದ್ದು ವಿಚಾರವಾಗಿ ಕೇಳಿದಾಗ, “ನಮ್ಮ ದೇಶದಲ್ಲಿ ಸಂವಿಧಾನವಿದ್ದು, ಸಂವಿಧಾನದ ಆಶಯದಂತೆ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣಲಾಗುವುದು” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ