*HDKಗೆ ಕಾಮನ್ ಸೆನ್ಸ್ ಇಲ್ಲ; ಇಡೀ ರಾಮನಗರವೇ ಬೆಂಗಳೂರಿಗೆ ಸೇರಲಿದೆ ಎಂದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕನಕಪುರ ಮಾತ್ರವಲ್ಲ ಇಡೀ ರಾಮನಗರ ಜಿಲ್ಲೆಯೇ ಬೆಂಗಳೂರಿಗೆ ಸೇರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇನೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ರಾಮನಗರ ಜನತೆಗೆ ಮಡಿದ ಮಹಾದ್ರೋಹ ಮಾತ್ರವಲ್ಲ ಬೇನಾಮಿ ಆಸ್ತಿಯ ಹುನ್ನಾರದ ಉದ್ದೇಶವಿದೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಮಾಜಿ ಸಿಎಂ, ಅವರು ಪ್ರಜ್ಞಾವಂತರು ಎಂದುಕೊಂಡಿದ್ದೆ. ಆದರೆ ಅವರಿಗೆ ಕಾಮನ್ ಸೆನ್ಸ್ ಇಲ್ಲ. ಅವರ ತಂದೆಯಿಂದ ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಕೋವಿಡ್ ನಂತರ ನಮ್ಮ ಜನ ಭೂಮಿ, ಆಸ್ತಿ ಮಾರಾಟಮಾಡಿಕೊಂಡು ಹೋಗುತ್ತಿದ್ದಾರೆ. ಇದು ನಿಲ್ಲಬೇಕು. ಕನಕಪುರ, ಮಾಡಗಿ, ಚನ್ನಪಟ್ಟಣದಲ್ಲಿ ಗ್ರಾಮಸ್ಥರು ತಮ್ಮ ಜಮೀನು ಮಾರುತ್ತಿದ್ದಾರೆ. ಹಾಗಾಗಿ ನಿಮ್ಮ ಜಮೀನು ಆಸ್ತಿಯನ್ನು ಮಾರಾಟ ಮಾಡಬೇಡಿ ಉಳಿಸಿಕೊಳ್ಳಿ. ಮುಂದೊಂದು ದಿನ ಅದಕ್ಕೆ ಉತ್ತಮ ಬೆಲೆ ಬರುತ್ತೆ ಎಂದು ಹೇಳಿದ್ದೇನೆ ಎಂದರು.
ಕುಮಾರಸ್ವಾಮಿ ಏನೋ ಹೇಳುತ್ತಾರೆ ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ತಲೆಯಲ್ಲಿ ಏನೋ ಆಲೋಚನೆಯಿದೆ ಆ ನಿಟ್ಟಿನಲ್ಲಿ ಏನು ಮಾಡಬೇಕು ಅದನ್ನು ಮಾಡಲಾಗುವುದು. ಕನಕಪುರ ಮಾತ್ರವಲ್ಲ ಚನ್ನಪಟ್ಟಣ, ಮಾಗಡಿ ಸೇರಿದಂತೆ ಇಡೀ ರಾಮನಗರ ಜಿಲ್ಲೆಯೇ ಬೆಂಗಳೂರಿಗೆ ಸರಲಿದೆ. ನಾವೆಲ್ಲರೂ ಬೆಂಗಳೂರಿನವರೆ. ರಾಮನಗರದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನೀಲ ನಕ್ಷೆ ಇದೆ. ಎಲ್ಲವನ್ನೂ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ