Politics

*ಲೋಕದ ಡೊಂಕ ನೀವೇಕೆ ತಿದ್ದುವಿರಿ; ಬಸವಣ್ಣನವರ ವಚನದ ಮೂಲಕ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: “ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ, ನಿಮ್ಮ ಮನವ ಸಂತೈಸಿಕೊಳ್ಳಿ” ಎಂಬ ಬಸವಣ್ಣನವರ ವಚನದ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ವಿಧಾನಸೌಧದ ಆವರಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಕುಮಾರಸ್ವಾಮಿ ಅವರು ರಾಜ್ಯಪಾಲರ ಭೇಟಿ ಮಾಡಿದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ;

“ಬೇರೆಯವರ ಸಂಗತಿ ಅವರಿಗೆ ಏಕೆ ಬೇಕು? ಲೋಕದ ಡೊಂಕು ನೀವೇಕೆ ತಿದ್ದುವರಿ ಎಂಬ ಬಸವಣ್ಣನವರ ವಚನದಂತೆ ಮೊದಲು ಅವರು ಅವರ ಮನೆಯನ್ನು ಸರಿಮಾಡಿಕೊಳ್ಳಲಿ. ಅದು ಬಿಟ್ಟು ಬೇರೆಯವರ ಬಗ್ಗೆ ಏಕೆ ಮಾತನಾಡುತ್ತೀರಾ? ನಿಮ್ಮಲ್ಲಿರುವ, ನಿಮ್ಮ ಮನೆಯಲ್ಲಿರುವ ಡೊಂಕನ್ನು ಮೊದಲು ತಿದ್ದಿಕೊಳ್ಳಿ. ನಾವೆಲ್ಲರೂ ಬಸವಣ್ಣನವರ ಈ ಮಾತನ್ನು ಪಾಲನೆ ಮಾಡಿಕೊಂಡು ನಡೆಯೋಣ. ರಾಜ್ಯಪಾಲರ ಬಳಿ ಹೋಗಿರುವ ಅವರಿಗೆ “ಆಲ್ ದ ಬೆಸ್ಟ್.”

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಯಾವುದೇ ಸಂತ್ರಸ್ತೆಯರು ದೂರು ನೀಡಿಲ್ಲ ಎನ್ನುವ ಕೇಂದ್ರ ಮಹಿಳಾ ಆಯೋಗದ ಹೇಳಿಕೆ ಬಗ್ಗೆ ಕೇಳಿದಾಗ “ಈಗಲಾದರೂ ಕೇಂದ್ರ ಮಹಿಳಾ ಆಯೋಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದೆ ಎಂಬುದೇ ಸಮಾಧಾನದ ಸಂಗತಿ. ಆಯೋಗದ ಹೇಳಿಕೆಯ ವಿಚಾರ ನನಗೂ ಮಾಧ್ಯಮಗಳ ಮೂಲಕ ತಿಳಿಯಿತು. ಉತ್ತರ ನೀಡುವುದು ನನ್ನ ಕೆಲಸವಲ್ಲ, ಅದಕ್ಕೆ ಪೊಲೀಸ್ ಇಲಾಖೆ ಹಾಗೂ ತನಿಖಾಧಿಕಾರಿಗಳು ನೀಡಲಿದ್ದಾರೆ”.

ಎಸ್ ಐಟಿ ಅಧಿಕಾರಿಗಳು ಯಾವುದೇ ಸಂತ್ರಸ್ತರು ಬಂದು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ ಎಂದಾಗ “ಸಂತ್ರಸ್ತೆಯರಿಗೆ ಪ್ರಭಾವಿ ರಾಜಕಾರಣಿಗಳಿಂದ ಬೆದರಿಕೆ, ಅಪಾಯ ಇದೆ ಎನ್ನುವ ಭಯವಿದೆ. ಅವರು ಬಂದು ಏಕೆ ಭೇಟಿ ಮಾಡುತ್ತಾರೆ?

ಭಾರತೀಯರ ವರ್ಣದ ಬಗ್ಗೆ ಸ್ಯಾಮ್ ಪಿತ್ರೋಡಾ ಹೇಳಿಕೆ ಬಗ್ಗೆ ಕೇಳಿದಾಗ “ನಮ್ಮ ದೇಶ ಒಗ್ಗಟ್ಟಿನಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶ ಭಾರತ. ಕಾಂಗ್ರೆಸ್ ಜಾತ್ಯಾತೀತ ನಿಲುವಿನ ಬಗ್ಗೆ ಯಾವುದೇ ಅನುಮಾನವೇ ಬೇಡ”.

ನಮ್ಮದು ಬಸವ ತತ್ವದ ಸರ್ಕಾರ

“ನಮ್ಮ ನಾಡು ಬಸವಣ್ಣನವರ ತತ್ವ, ಆದರ್ಶಗಳ ಆಧಾರದ ಮೇಲೆ ನಡೆಯುತ್ತಿದೆ. ಜಗತ್ತಿನಲ್ಲಿ ಮೊದಲನೇ ಸಂಸತ್ತು ಕಟ್ಟಿದವರು‌ ಬಸವಣ್ಣ. ಅವರು ಹಾಕಿಕೊಟ್ಟ ಬುನಾದಿ ಮೇಲೆ ನಾವು ಇಂದಿಗೂ ನಡೆಯುತ್ತಿದ್ದೇವೆ.

ನಮ್ಮ ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ಕಾರ್ಯಕ್ರಮವೂ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎನ್ನುವ ತತ್ವದ ಮೇಲೆ ನಡೆಯುತ್ತಿದೆ. ಯಾವುದೇ ಜಾತಿ, ಧರ್ಮಗಳ ಬೇಧವಿಲ್ಲದೆ ಎಲ್ಲರಿಗೂ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಅನ್ನ ಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಮಹಿಳಾ ಸಬಲೀಕರಣದ ಯೋಜನೆ ಹಾಗೂ ಯುವನಿಧಿ ಕಾಯಕ ಕೇಂದ್ರೀತ ಯೋಜನೆಗಳ ಮೂಲಕ ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಬಸವಣ್ಣನವರೇ ಸ್ಪೂರ್ತಿ.

ಬಸವಣ್ಣನವರ ಆದರ್ಶ ತತ್ವಗಳು ಎಲ್ಲೆಡೆ ಹರಡಲಿ ಎಂದು ಅವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಮಾಡಿದ್ದೆವು. ಈಗ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ.

ಸಂಸ್ಕೃತಿಯೇ ನಮ್ಮ ದೇಶದ ಆಸ್ತಿ. ಬಸವಣ್ಣನವರ ಆಚಾರ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕೇವಲ ಮಾತಿನಲ್ಲಿ ಹೇಳದೆ ಕೃತಿ ರೂಪದಲ್ಲಿ ತರಬೇಕು ಎಂಬುದೇ ನಮ್ಮ ಆಶಯ. ಅವರ ತತ್ವ, ಸಿದ್ದಾಂತ ಹಾಗೂ ಅವರ ಹಾದಿಯಲ್ಲಿ ನಾವು ನಡೆಯಬೇಕು” ಎಂದರು.

Related Articles

Back to top button