Cancer Hospital 2
Bottom Add. 3

*ನನ್ನನ್ನು ಜೈಲಿಗೆ ಕಳುಹಿಸಲು ಕಟೀಲ್, ಕುಮಾರಸ್ವಾಮಿ ಜಡ್ಜಾ? ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನನ್ನನ್ನು ಜೈಲಿಗೆ ಕಳುಹಿಸಲು ನಳೀನ್ ಕುಮಾರ್ ಕಟೀಲ್ ಆಗಲಿ, ಕುಮಾರಸ್ವಾಮಿ ಅವರಾಗಲಿ ನ್ಯಾಯಾಧೀಶರಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ, “ಶಿವಕುಮಾರ್ ಅವರು ಎರಡನೇ ಬಾರಿಗೆ ತಿಹಾರ್ ಜೈಲಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳಲಿ” ಎಂಬ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. ಉಳಿದಂತೆ ಮಾಧ್ಯಮಗೊಷ್ಠಿಯಲ್ಲಿ ಡಿಸಿಎಂ ಅವರು ಹೇಳಿದ್ದಿಷ್ಟು;

“ಬೆಳಗಾವಿಯಲ್ಲಿ ಇಂದು ಈ ಭಾಗದ ವಿವಿಧ ನೀರಾವರಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಸಭೆ ಮಾಡಿ ಚರ್ಚಿಸಿದ್ದೇನೆ. ಈ ಭಾಗದಲ್ಲಿ ಘಟಪ್ರಭ, ಮಾರ್ಕಂಡೇಯ, ಹಿಪ್ಪರಗಿ, ಆಲಮಟ್ಟಿ ಜಲಾಶಯಗಳಲ್ಲಿ ಶೇ.90 ರಷ್ಟು ನೀರು ತುಂಬಿದೆ. ಮಲಪ್ರಭದಲ್ಲಿ ಮಾತ್ರ ಶೇ. 52ರಷ್ಟಿದೆ.

ಈ ಭಾಗದಲ್ಲಿ ನೀರಾವರಿ ಇಲಾಖೆಯ ಹುದ್ದೆಗಳ ನೇಮಕಾತಿ ಸಮಸ್ಯೆ ಇದೆ. ಒಟ್ಟು 1322 ಹುದ್ದೆಗಳು ಮಂಜೂರಾಗಿದ್ದು, 671 ಭರ್ತಿಯಾಗಿದ್ದು, 651 ಹುದ್ದೆಗಳು ಖಾಲಿ ಇವೆ. ಬೆಂಗಳೂರಿಗೆ ಹೋದ ಮೇಲೆ ಈ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುತ್ತೇನೆ.

ಯಾವ ಕಾಮಗಾರಿಗಳನ್ನು ಉಳಿಸಿಕೊಳ್ಳಬೇಕು, ಯಾವ ಅನಗತ್ಯ ಕಾಮಗಾರಿಗಳನ್ನು ಕೈಬಿಡಬೇಕು ಎಂಬುದರ ಬಗ್ಗೆ ಸಭೆ ಮಾಡಿ ತೀರ್ಮಾನಿಸುತ್ತೇವೆ. ನೀರು ಬಳಕೆದಾರರ ಸಂಘದ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಮುಂದಿನ ನೂರು ದಿನಗಳಲ್ಲಿ ಎಲ್ಲಾ ಕಡೆ ನೀರು ಬಳಕೆದಾರರ ಸಂಘ ಸ್ಥಾಪನೆಯಾಗಬೇಕು ಎಂದು ಕಾಡಾ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ಮೂಲಕ ಸೂಚನೆ ನೀಡುತಿದ್ದೇನೆ. ಚಟುವಟಿಕೆ ನಡೆಯದ ಕಡೆ ಮತ್ತೆ ಚುನಾವಣೆ ಮಾಡಿ ಪುನರಾರಂಭಿಸಬೇಕು.

ಕೆನಾಲ್ ರಿಪೇರಿ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆ ಮಾತನಾಡುತ್ತೇವೆ. ನರೇಗಾ ಮೂಲಕ ಸ್ಥಳೀಯರ ಮೂಲಕ ಕಾಮಗಾರಿಗಳನ್ನು ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ.

ಇನ್ನು ವಾಲ್ಮಿ ತರಬೇತಿಗೆ ಧಾರವಾಡಕ್ಕೆ ಹೋಗಬೇಕಾಗಿದೆ. ರಾಜ್ಯದ ಆಯಾ ಭಾಗಗಳಲ್ಲಿ ವಾಲ್ಮಿ ತರಬೇತಿ ಕೇಂದ್ರಗಳನ್ನು ಆರಂಭಿಸಿ ಅಲ್ಲೇ ತರಬೇತಿ ನೀಡುವ ಬಗ್ಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇದನ್ನು ಪರಿಗಣಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಎಲ್ಲೆಲ್ಲಿ ಮೂಲಭೂತ ಸೌಕರ್ಯ ಇರುವುದಿಲ್ಲವೇ ಅಂತಹ ಪ್ರದೇಶಗಳಲ್ಲಿ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು ತರಬೇತಿ ನೀಡುವ ವ್ಯವಸ್ಥೆ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು.

ಎಲ್ಲಾ ಸೊಸೈಟಿ ಸಭೆಗಳಲ್ಲಿ ಎಇಇಗಳು ಭಾಗವಹಿಸಬೇಕು ಎಕ್ಸಿಕ್ಯೂಟಿವ್ ಇಂಜಿನಿಯರ್ ಉಸ್ತುವಾರಿ ನೋಡಿಕೊಳ್ಳಬೇಕು. ನೀರಾವರಿ ಇಲಾಖೆ ಹಾಗೂ ಕಾಡಾ ಎರಡೂ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ರೈತರಿಗೆ ಭೂಮಿ ಹೇಗೆ ಬಳಕೆಯಾಗಬೇಕು. ಈ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಲಾಗುತ್ತಿದ್ದು, ಇದಕ್ಕೆ ನೀರು ಪೂರೈಸಬೇಕು. ಹೊಸ ಕೆರೆ ಹಾಗೂ ಕೆನಾಲ್ ಗಳಿಂದ ನೀರು ಕದಿಯದಂತೆ ರಕ್ಷಣೆ ಮಾಡಲು ಕಾನೂನು ತರಲಾಗುವುದು. ಈ ವಿಚಾರವಾಗಿ ಮಹಾರಾಷ್ಟ್ರದಲ್ಲಿರುವ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಗಮನಸೆಳೆದಿದ್ದು, ಈ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದೇನೆ. ಸಾಧ್ಯವಾದರೆ ನಾನು ಕೂಡ ಹೋಗಿ ನೋಡಿಕೊಂಡು ಬರುತ್ತೇನೆ” ಎಂದು ತಿಳಿಸಿದರು.

ಪ್ರಶ್ನೋತ್ತರ:
ಕಳಾಸಬಂಡೂರಿ ಯೋಜನೆ ಯಾವ ಹಂತದಲ್ಲಿದೆ ಎಂದು ಕೇಳಿದಾಗ, “ಈ ಯೋಜನೆಗೆ ನಾವು ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರ ಈ ಯೋಜನೆ ವಿಚಾರವಾಗಿ ರಾಜ್ಯಗಳ ನಡುವೆ ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು. ಈ ಬಗ್ಗೆ ಸಚಿವರ ಜತೆಯೂ ಚರ್ಚೆ ಮಾಡಿದ್ದೇವೆ. ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಈ ವಿಚಾರ ಹಿಂದುಳಿದಿದೆ. ಮೇಕೆದಾಟು ಯೋಜನೆ ಆರಂಭಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಕಳಸಾ ಬಂಡೂರಿ ಯೋಜನೆಗೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

ಕಳೆದ ಸರ್ಕಾರ ಕಳಸಾ ಬಂಡೂರಿ ಯೋಜನೆಯಲ್ಲಿ ಕುಡಿಯುವ ನೀರಿಗೆ ಅನುಮೋದನೆ ಸಿಕ್ಕಿದೆ ಎಂದು ಹೇಳಿತ್ತು ಎಂದು ಕೇಳಿದಾಗ, “ಅವರು ಕೇವಲ ಸಂಭ್ರಮಾಚರಣೆ ಮಾಡಿದ್ದರು, ಕೆಲಸ ಮಾಡಲಿಲ್ಲ. ಟೆಂಡರ್ ಕರೆದಿದ್ದು, ಕೆಲಸ ಮಾಡಲು ಅವಕಾಶ ನೀಡಿಲ್ಲ” ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಳಿದಾಗ, “ನಾವು ಒಂದು ಕಡೆಯಿಂದ ಎಲ್ಲಾ ಯೋಜನೆಗಳ ಪರಿಶೀಲನೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಇದೇ 28ರಂದು ಸಭೆ ಕರೆದಿದ್ದೇವೆ. ಈ ವರ್ಷ ಐದು ಗ್ಯಾರಂಟಿ ನೀಡಿದ್ದು, ನಾವು ಮುಖ್ಯಮಂತ್ರಿಗಳ ಜತೆ ಹಣಕಾಸು ಪರಿಸ್ಥಿತಿ ಕುರಿತಾಗಿ ಚರ್ಚೆ ಮಾಡಿ ಈ ಯೋಜನೆಗೆ ಹಣ ಬಿಡುಗಡೆ ಮಾಡಲು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

ಕೃಷ್ಣಾ ಯೋಜನೆಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳ ಸ್ಥಳಾಂತರ ವಿಚಾರವಾಗಿ ಕೇಳಿದಾಗ, “ರೈತರ ವಿಚಾರದಲ್ಲಿ ನಾವು ನಮ್ಮ ಬದ್ಧತೆಯಂತೆ ಕೆಲಸ ಮಾಡಬೇಕು. ಭೂಸ್ವಾಧೀನ ವಿಚಾರಕ್ಕೆ ಆದ್ಯತೆ ನೀಡಬೇಕು. ನಾವು ನೀರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಅನಗತ್ಯವಾಗಿ ವ್ಯರ್ಥ ಮಾಡಬಾರದು. ಈ ಯೋಜನೆಗೆ ಇರುವ ಅಡಚಣೆಗಳ ನಿವಾರಣೆಗೆ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಆಣೆಕಟ್ಟು ಅಧಿಕಾರಿಗಳು ಬೇಕಾಬಿಟ್ಟಿ ನೀರು ಹರಿಸಿದರೆ ಬೇಸಿಗೆಯಲ್ಲಿ ಕುಡಿಯಲು ನೀರು ಇಲ್ಲದ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಕೇಳಿದಾಗ, “ಮಲಪ್ರಭ ಆಣೆಕಟ್ಟಿನಲ್ಲಿ ಕೇವಲ ಶೇ.52ರಷ್ಟು ಮಾತ್ರ ನೀರು ಭರ್ತಿಯಾಗಿದ್ದು, ನೀರು ಹರಿಸದಂತೆ ತೀರ್ಮಾನ ಮಾಡಲಾಗಿದೆ. ಉಳಿದ ಆಣೆಕಟ್ಟುಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿದೆ” ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುತ್ತೀರಾ ಎಂದು ಕೇಳಿದಾಗ, “ನಾಳೆ ನಾಡಿದ್ದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.

ಶಿವಕುಮಾರ್ ಅವರು ಕೇಡಿಯಂತೆ ವರ್ತಿಸಬಾರದು ಎಂಬ ಸಿ.ಟಿ ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ಅವರ ಪಕ್ಷದವರೇ ಲೂಟಿ ರವಿ ಎಂಬ ಹೆಸರು ಕೊಟ್ಟಿದ್ದಾರೆ. ಅವರ ಪಕ್ಷದವರೇ ಏನೆಲ್ಲಾ ಹೇಳಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಇದಕ್ಕೆ ಸಮಯ ಬಂದಾಗ ಉತ್ತರ ನೀಡುತ್ತೇನೆ” ಎಂದು ತಿಳಿಸಿದರು.

Bottom Add3
Bottom Ad 2

You cannot copy content of this page