Kannada NewsKarnataka NewsLatestPolitics

*ಕ್ರಾಂತಿಯಾಗುತ್ತೆ ಆದರೆ ಈಗಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್: ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: “ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ, ಜನವರಿ, ಫೆಬ್ರವರಿಗೂ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028 ರಲ್ಲಿ, ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.

ನವೆಂಬರ್ ಕ್ರಾಂತಿ ಹಾಗೂ ಈ ತಿಂಗಳು 22 ಹಾಗೂ 26 ರ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ಯಾರೋ ಸುಮ್ಮನೆ ಬರೆದಿದ್ದಾರೆ. ಪಕ್ಷ ನಮಗೆ ಬಿಹಾರ ಚುನಾವಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನೀಡಿದ್ದು, ನಾವು ಅದನ್ನು ಮಾಡುತ್ತಿದ್ದೇವೆ. ಇದರ ಹೊರತಾಗಿ ಬೇರೆ ಯಾವುದೇ ಕ್ರಾಂತಿ ಆಗುವುದಿಲ್ಲ” ಎಂದು ತಿಳಿಸಿದರು.

ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ

Home add -Advt

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು. ಮತಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ, ಇಂದು ಸಭೆ ಮಾಡಿದ್ದೇವೆ. ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಏನಿದ್ದರೂ ನಿಮ್ಮದು (ಮಾಧ್ಯಮ). ನಾಯಕತ್ವ ಬದಲಾವಣೆ ಬಗ್ಗೆ ನಾನು ಏನಾದರೂ ಹೇಳಿದ್ದೇನಾ? ಸಿಎಂ ಏನಾದರೂ ಹೇಳೀದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ ಎಂದು ಹೇಳಿದ್ದೇವೆ. ಸಿಎಂ ಐದು ವರ್ಷ ಇರಬೇಕು ಎಂದರೆ ಐದು ವರ್ಷ ಇರುತ್ತಾರೆ. ಹತ್ತು ವರ್ಷ ಇರಬೇಕು ಎಂದರೆ ಹತ್ತು ವರ್ಷ ಇರುತ್ತಾರೆ. 15 ವರ್ಷ ಇರಬೇಕು ಎಂದರೆ 15 ವರ್ಷ ಇರುತ್ತಾರೆ. ನಮಗೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುತ್ತಿರಬೇಕು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ರೇಖೆ ಬಿಟ್ಟು ನಾನು ಎಂದಿಗೂ ಹೋಗುವುದಿಲ್ಲ” ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ಆಕಾಂಕ್ಷೆಯಲ್ಲಿರುವವರಿಗೆ ಏನು ಹೇಳುತ್ತೀರಾ ಎಂದು ಕೇಳಿದಾಗ, “ಅದೆಲ್ಲವನ್ನು ದೆಹಲಿ ನಾಯಕರು ಯಾವಾಗ, ಯಾವ ರೀತಿ ಮಾಡಬೇಕೋ ಮಾಡುತ್ತಾರೆ” ಎಂದರು.

Related Articles

Back to top button