*ನನ್ನ, ಸಿಎಂ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ” ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ನಿಮ್ಮ ಹಾಗೂ ಸಿಎಂ ಉಪಹಾರ ಸಭೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಮನ್ವಂತರ ಶುರು ಆಗಿದೆಯೇ ಎಂದು ಕೇಳಿದಾಗ, “ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ಬಹಳ ನಿರೀಕ್ಷೆ ಹೊಂದಿದ್ದು, ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. 2028 ರ ಚುನಾವಣೆ ನಮ್ಮ ಮುಂದಿನ ಗುರಿ” ಎಂದು ತಿಳಿಸಿದರು.
ನಾನು ಬೆನ್ನಿಗೆ ಚೂರಿ ಹಾಕಲ್ಲ
“ನಾನು ಯಾವತ್ತೂ ಗುಂಪುಗಾರಿಕೆ ಮಾಡುವುದಿಲ್ಲ. ಎಲ್ಲರೂ ಗಮನಿಸಿರುವಂತೆ ನಾನು ದೆಹಲಿಗೆ ಹೋದರೆ ಒಬ್ಬನೇ ಹೋಗುತ್ತೇನೆ. ನಾನು 8-10 ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಅದು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷ ಸ್ಥಾನದಲ್ಲಿ ಇರುವಾಗ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. 140 ಶಾಸಕರೂ ನಮ್ಮ ನಾಯಕರೇ. ಯಾರಿಗೂ ತಾರತಮ್ಯ ಮಾಡಲ್ಲ. ನಾನು ಕುಮಾರಸ್ವಾಮಿ ಅವರ ಜತೆಯಲ್ಲೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಕುಮಾರಸ್ವಾಮಿ ಅವರು ಒಪ್ಪದೇ ಇರಬಹುದು, ನನ್ನ ನಿಷ್ಠೆ, ನನ್ನ ಆತ್ಮಸಾಕ್ಷಿ ಆ ದೇವರಿಗೆ ಗೊತ್ತಿದೆ. ಕುಮಾರಸ್ವಾಮಿ ಅವರ ಸರ್ಕಾರ ಉಳಿಸಲು ಕೊನೆ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆಯವರಿಗೂ ಗೊತ್ತಿದೆ. ಅವರು ತಮ್ಮ ಆಸೆಗೆ ಏನಾದರೂ ಮಾತಾಡಿಕೊಳ್ಳಲಿ, ನಾನು ಬೇಸರ ಮಾಡಿಕೊಳ್ಳಲ್ಲ. ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು” ಎಂದರು.
ಕೆ.ಸಿ. ವೇಣುಗೋಪಾಲ್ ಅವರ ಜೊತೆಗಿನ ಮಾತುಕತೆ ಬಗ್ಗೆ ಕೇಳಿದಾಗ, “ನಾನು ಎಲ್ಲರ ಜೊತೆ ಚರ್ಚೆ ಮಾಡಿದ್ದು, ಏನು ಚರ್ಚೆ ಮಾಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ” ಎಂದು ತಿಳಿಸಿದರು.
ಬದುಕಿದ್ದೇವೆ ಎಂದು ತೋರಿಸಲು ಬಿಜೆಪಿಯವರು ಮಾತನಾಡುತ್ತಿದ್ದಾರೆ
ಶಿವಕುಮಾರ್ ಸೂಪರ್ ಸಿಎಂ ಆಗುತ್ತಿದ್ದಾರೆ ಎಂದು ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಹೇಳಿದಾಗ, “ಬಿಜೆಪಿ ವಿರೋಧ ಪಕ್ಷವಾಗಿ ಏನಾದರೂ ಮಾತನಾಡಬೇಕಲ್ಲ, ಬದುಕಿದ್ದೇವೆ ಎಂದು ತೋರಿಸಲು ಮಾತನಾಡುತ್ತಾರೆ. ಬಿಜೆಯವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಆಗುತ್ತದೆಯೇ” ಎಂದು ತಿರುಗೇಟು ಕೊಟ್ಟರು.
ಸರ್ವಪಕ್ಷ ಸಭೆ ಬಗ್ಗೆ ಸಿಎಂ ಜೊತೆ ಚರ್ಚೆ
ಕೇಂದ್ರ ಸಚಿವರು, ಸಂಸದರ ಭೇಟಿ ಹೊರತಾಗಿ ಪಕ್ಷ ಹಾಗೂ ರಾಜಕೀಯ ಉದ್ದೇಶದಿಂದ ದೆಹಲಿ ಪ್ರಯಾಣ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಮತ್ತು ಸಿಎಂ ಈಗ ಚರ್ಚೆ ಮಾಡಿದ್ದು, ಮುಂದೆಯೂ ಮಾತನಾಡುತ್ತೇವೆ. ನೀರಾವರಿ, ಮೆಕ್ಕೆಜೋಳ ಹಾಗೂ ಕಬ್ಬು ಬೆಳೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವ ಬಗ್ಗೆ ಸಂಸದರ ಜೊತೆ ಚರ್ಚೆ ಮಾಡಬೇಕು. ಸರ್ವಪಕ್ಷ ಸಭೆ ಕರೆಯಬೇಕಿದ್ದು, ಈ ಸಭೆಯಲ್ಲಿ ಎಲ್ಲಾ ಸಂಸದರು ಭಾಗವಹಿಸಬೇಕು. ಹೀಗಾಗಿ ಈ ಸಭೆಯನ್ನು ದೆಹಲಿಯಲ್ಲಿ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಿಎಂ ಏನು ಹೇಳುತ್ತಾರೆ ಕೇಳುತ್ತೇನೆ. ನಾನೊಬ್ಬನೇ ಹೋಗಿ ಎಲ್ಲರ ಸಭೆ ಮಾಡುವುದು ಸರಿಯಲ್ಲ. ಈ ಸಭೆಯಲ್ಲಿ ರಾಜ್ಯದ ಇತರ ಸಚಿವರೂ ಇರಬೇಕು” ಎಂದರು.
ಅಪ್ಪ, ಮಗ ಭೇಟಿಗೆ ಅರ್ಜಿ ಹಾಕಿಕೊಳ್ಳಬೇಕೆ?
ದೆಹಲಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ಅಪ್ಪ ಮಗನ ಭೇಟಿಗೂ ನೀವು ಅರ್ಥ ಕಲ್ಪಿಸುತ್ತೀರಾ? ಅಪ್ಪ, ಮಕ್ಕಳ ಭೇಟಿಗೂ ಅರ್ಜಿ ಹಾಕಿಕೊಳ್ಳಬೇಕಾ? ಪ್ರಿಯಾಂಕ್ ಖರ್ಗೆ ಅವರು ಎಐ ತಂತ್ರಜ್ಞಾನದ ಅತ್ಯುತ್ತಮ ಸಾಧನ ಪರಿಚಯಿಸಿದ್ದಾರೆ. ಇದರ ಉದ್ಘಾಟನೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದೆವು, ಅವರು ಬರಲು ಆಗಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರು ಅದರ ಬಗ್ಗೆ ಮಾಹಿತಿ ಪಡೆಯಲು ಕರೆದಿದ್ದರು. ಹೀಗಾಗಿ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಅವರನ್ನು ಕರೆಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಇಲ್ಲೂ ರಾಜಕೀಯ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವೇ? ಅಪ್ಪ ಮಕ್ಕಳು, ಅಣ್ಣ ತಮ್ಮ ಸೇರಿದಾಗ ರಾಜಕೀಯವೇ? ಬೇರೆಯವರು ಸೇರಿದಾಗ ನಿಮಗೆ ಲೆಕ್ಕಕ್ಕೆ ಇರುವುದಿಲ್ಲ. ನಮ್ಮದು ಮಾತ್ರ ಲೆಕ್ಕ ಹಾಕುತ್ತೀರಿ” ಎಂದು ಹೇಳಿದರು.
ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಬಗ್ಗೆ ಕೇಳಿದಾಗ, “ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಅವರು ದಿನಾಂಕ ನೀಡಿರಲಿಲ್ಲ. ಈಗ ವಾರಾಂತ್ಯದಲ್ಲಿ ಬಂದು ನೆರವೇರಿಸಿ ಎಂದು ಕೇಳಿದ್ದೇನೆ. 100 ಭವನಗಳ ಸ್ಥಾಪನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನನಗೆ ತೃಪ್ತಿ ಇದೆ” ಎಂದರು.
ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗುತ್ತಿರುವ ಬಗ್ಗೆ ಕೇಳಿದಾಗ, “ನಾನು ಅದನ್ನು ಸ್ವಾಗತಿಸುತ್ತೇನೆ” ಎಂದರು.
ಮನಶಾಂತಿಗೆ ದೇವಾಲಯ ಭೇಟಿ, ಪೂಜೆ
ಟೆಂಪಲ್ ರನ್ ಮಾಡುತ್ತಿದ್ದು, ಏನು ಸಂಕಲ್ಪ ಮಾಡಿದ್ದೀರಿ ಎಂದು ಕೇಳಿದಾಗ, “ನಾವು ನಮ್ಮ ಬದುಕಿನಲ್ಲಿ ನಮ್ಮದೇ ಆದ ಆಚರಣೆ ಹಿಂದಿರುತ್ತೇವೆ. ನಮ್ಮ ಮನಶಾಂತಿಗಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ದೇವಾಲಯ, ಮಸೀದಿ, ಚರ್ಚ್, ಜೈನ ಬಸದಿಗೆ ಹೋಗಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇದನ್ನು ಟೆಂಪಲ್ ರನ್ ಎನ್ನುವ ಅಗತ್ಯವೇನು? ನಮ್ಮ ಹಿರಿಯರು ಕೊಟ್ಟ ಮಾರ್ಗದರ್ಶನದ ಪ್ರಕಾರ ನಾನು ನಿತ್ಯ ಬೆಳಗ್ಗೆ ಪೂಜೆ ಮಾಡದೇ ಮನೆಯಿಂದ ಆಚೆ ಬರುವುದಿಲ್ಲ. ಸರ್ಕಾರ ದೇವಾಲಯ ಮುಚ್ಚಲು ಸಾಧ್ಯವೇ? ಗ್ರಾಮೀಣ ಭಾಗದ ದೇವಾಲಯ ಅಭಿವೃದ್ಧಿಗೆ ಬಂಗಾರಪ್ಪನವರ ಕಾಲದಲ್ಲಿ ಆರಾಧನಾ ಯೋಜನೆ ಜಾರಿಗೆ ತಂದಿದ್ದರು” ಎಂದರು.
“ನಮ್ಮ ಸ್ನೇಹಿತರು ಭೂವರಾಹಸ್ವಾಮಿ ದೇವಾಲಯದ ಬಗ್ಗೆ ಹೇಳುತ್ತಿದ್ದರು. ನಾನು ಹೋಗಿದ್ದೆ, ದೇವಾಲಯ ಬಹಳ ಚೆನ್ನಾಗಿದೆ” ಎಂದರು.
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ಹೇಳುತ್ತಿರುತ್ತೀರಿ ಎಂದು ಕೇಳಿದಾಗ, “ಅದನ್ನು ಎಷ್ಟು ಬಾರಿ ಹೇಳಲಿ. ನಾನು ಅದನ್ನು ಹೇಳಿದರೆ ಅದನ್ನು ಬೇರೆ ಅರ್ಥಕ್ಕೆ ತಿರುಚುತ್ತೀರಿ” ಎಂದು ಪ್ರತಿಕ್ರಿಯೆ ನೀಡಿದರು.
No differences between CM and me: DCM DK Shivakumar
Deputy Chief Minister DK Shivakumar today said that there were no differences between CM Siddaramaiah and him.
Speaking to reporters at his Sadashivanagar residence, he said, “We are all working together. The people of the state have a lot of expectation from us and we have to fulfil their aspirations. Our goal is 2028 elections.” He was replying to questions if the breakfast meeting has heralded a new era.
I won’t backstab
“I have never indulged in factional politics. As you would have noticed, I go to Delhi alone. I can take 8-10 MLAs with me, but I don’t do it. I have to take everyone along with me as the President of KPCC. All 140 MLAs are our leaders. Even with Kumaraswamy government, I have been sincere. Kumaraswamy’s father knows how much effort I put in to save his son’s government. My brand of politics is direct, I don’t backstab.”
Asked about his discussion with K C Venugopal, he said, “I have discussed with everyone. I won’t discuss what transpired in the meeting.”
BJP is facing existential threat
Asked about BJP’s criticism that he was becoming a super CM, he said, “As an Opposition party, the BJP has to show the people that it is still alive. We can’t be bothered about BJP.”
Will discuss all-party meeting with CM
Asked if he was travelling to Delhi for political discussions, he said, “CM and I have discussed about maize and sugarcane issues and we need to discuss it with the state’s MPs. I believe we should call for an all-party meeting in Delhi. Need to see the view of CM. All ministers of the state also need to be there.”
Asked about Priyank Kharge meeting Mallikarjun Kharge, he said, “Does son need to apply for a meeting with his father? You are reading too much into everything. It isn’t politics when father and son meet.”
Asked about his temple run, he said, “I have my own rituals. I do it for my peace of mind. You don’t have to call it temple run. I won’t come out of the house without offering pooja. My friends were mentioning about Boo Varaha temple and hence went there.”


