*ಕಾನೂನಿನ ಮುಂದೆ ಲಿಂಬಾವಳಿ ಬೇರೆ ಅಲ್ಲ; ಶಿವಕುಮಾರ್ ಬೇರೆ ಅಲ್ಲ ಎಂದ ಡಿ.ಕೆ.ಶಿವಕುಮಾರ್; ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೂ ತಿರುಗೇಟು ನೀಡಿದ ಕೆಪಿಸಿಸಿ ಅಧ್ಯಕ್ಷ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿದ್ದೇಶ್ವರ ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಹೋಗುತ್ತಿದ್ದೇನೆ. ಕಲಬುರ್ಗಿಗೆ ಹೋಗಿ, ಅಲ್ಲಿಂದ ವಿಜಯಪುರಕ್ಕೆ ತೆರಳುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದರು. ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ ಅಮಿತ್ ಶಾ ಅವರ ರಾಜ್ಯ ಪ್ರವಾಸ, ಅವರ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅಮಿತ್ ಶಾ ಅವರು ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಇಲ್ಲ ಎಂದು ಒಪ್ಪಿಕೊಂಡಿರುವುದನ್ನು ನಾನು ಅಭಿನಂದಿಸುತ್ತೇನೆ. ಈ ಕಾರಣಕ್ಕೆ ರಾಜ್ಯಕ್ಕೆ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದು, ಇದರರ್ಥ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸಂಪೂರ್ಣ ವೈಫಲ್ಯ ಅನುಭವಿಸಿದೆ ಎಂದು. ಹೀಗಾಗಿ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕತ್ವವನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದ ವಿಚಾರಗಳೇ ಬೇರೆ. ರಾಜ್ಯದಲ್ಲಿನ ಆಡಳಿತ, ಅಭಿವೃದ್ಧಿಯ ವಿಚಾರ ಗಣನೆಗೆ ಬರುತ್ತದೆ. ಇಡೀ ವಿಶ್ವ ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದೆ. ನಾವು ಜ.11 ರಿಂದ ರಾಜ್ಯ ಪ್ರವಾಸ ಆರಂಭಿಸುತ್ತಿದ್ದು, ಎಲ್ಲ ಮೂಲೆ, ಮೂಲೆಗಳನ್ನು ತಲುಪಿ ಎಲ್ಲ ವರ್ಗದ ಜನರನ್ನು ಭೇಟಿ ಮಾಡಲಾಗುವುದು. ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿದ್ದು, ಈ ಸರ್ಕಾರ ಮಾಡಿರುವ ಅನ್ಯಾಯವನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿ ಸರ್ಕಾರದ ಅಂತ್ಯವಾಗಿ ಕಾಂಗ್ರೆಸ್ ಸರ್ಕಾರ ಬರಲಿದೆ’ ಎಂದು ತಿಳಿಸಿದರು.
ಲಿಂಬಾವಳಿ ಅವರ ಹೆಸರು ಬರೆದಿಟ್ಟು ಉದ್ಯಮಿ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ‘ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಇದೆ. ಈ ಪ್ರಕರಣದಲ್ಲಿ ಶಾಸಕರ ಹೆಸರು ಪ್ರಸ್ತಾಪವಾಗಿದ್ದು, ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು. ತನಿಖೆ ಆಗಲಿ, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಲಿ, ನಾವು ಈ ವಿಚಾರದಲ್ಲಿ ಅನಗತ್ಯವಾಗಿ, ಯಾರ ಹೆಸರನ್ನೂ ಹೇಳುವುದಿಲ್ಲ. ಜನಸಾಮಾನ್ಯರು ಈ ಪ್ರಕರಣವನ್ನು ನೋಡುತ್ತಿದ್ದು, ಸರ್ಕಾರ ಧೃಡ ಕ್ರಮ ಕೈಗೊಳ್ಳಬೇಕು. ಶಾಸಕರ ದುರ್ವರ್ತನೆಗಳಿಂದ ಅನೇಕ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಕೊನೆ ಹಾಡಬೇಕು. ತಪ್ಪಿತಸ್ಥರು ಶಿಕ್ಷೆಗೆ ಒಳಗಾಗಬೇಕು. ಕಾನೂನಿನ ಮುಂದೆ ಲಿಂಬಾವಳಿ ಬೇರೆಯಲ್ಲ, ಶಿವಕುಮಾರ್ ಬೇರೆಯಲ್ಲ. ಆದರೆ ಈ ಸರ್ಕಾರ ಲಂಚ, ಮಂಚ, ಇಂತಹ ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ರಕ್ಷಣೆ ಮಾಡಿಕೊಂಡು ಬಂದಿದೆ. ಜನ ಇನ್ನು 60 ದಿನ ಈ ಸರ್ಕಾರದ ಅನ್ಯಾಯವನ್ನು ತಡೆದುಕೊಳ್ಳಬೇಕಿದೆ’ ಎಂದರು.
ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಲಿಂಬಾವಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಮೃತ ವ್ಯಕ್ತಿ ಅವರ ಕಡೆ ಹುಡುಗ. ಆತನ ಮರಣಪತ್ರವನ್ನು ನಾವು ಬರೆದಿದ್ದೆವಾ ಅಥವಾ ಬರೆಸಿದ್ದೆವಾ? ನಾವು ಷಡ್ಯಂತ್ರದಲ್ಲಿ ಭಾಗಿಯಾಗಿದ್ದರೆ ಯಾರು ಭಾಗಿಯಾಗಿದ್ದಾರೆ ಎಂದು ಹೇಳಲಿ. ಆತ್ಮಹತ್ಯೆ ಪತ್ರ ಬರೆದಿರುವುದರಿಂದ ಎಲ್ಲರೂ ತನಿಖೆಗೆ ಒಳಗಾಗಿ ಶಿಕ್ಷೆಗೆ ಒಳಗಾಗಬೇಕು’ ಎಂದರು.
ನಂದಿನಿ ಹಾಗೂ ಅಮೂಲ್ ವಿಲೀನವಿಲ್ಲ. ಕೇವಲ ತಂತ್ರಜ್ಞಾನ ವಿನಿಮಯ ಮಾತ್ರ ಎಂಬ ಮುಖ್ಯಮಂತ್ರಿಗಳ ಸ್ಪಷ್ಟನೆ ವಿಚಾರವಾಗಿ, ‘ಬೊಮ್ಮಾಯಿ ಅವರು ಈ ಪ್ರಕರಣವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ಅಮಿತ್ ಶಾ ಅವರು ಏನು ಹೇಳಿದ್ದಾರೆ ಎಂಬುದನ್ನು ಒಮ್ಮೆ ಕೇಳಿ ನೋಡಿ. ಅಮಿತ್ ಶಾ ಅವರು ಸಾರ್ವಜನಿಕ ವೇದಿಕೆಯಲ್ಲಿ ನೀಡಿರುವ ಹೇಳಿಕೆ ಬಹಿರಂಗವಾಗಿದೆ. ನಾವು ಇದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಈ ವಿಚಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ರಾಜ್ಯಗಳ ವಿಚಾರವೇ ಹೊರತು ರಾಷ್ಟ್ರೀಯ ವಿಚಾರವಲ್ಲ. ನೀವು ಕನಕಪುರಕ್ಕೆ ಹೋಗಿ ಅಲ್ಲಿನ ಹಾಲು ಉತ್ಪಾದನೆ ಘಟಕವನ್ನು ನೋಡಿ. ಅದು ಅಮೂಲ್ ಸಂಸ್ಥೆಗಿಂತ ಹಾಗೂ ಏಷ್ಯಾದಲ್ಲೇ ಅತ್ಯುತ್ತಮ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಘಟಕ. ರಾಜ್ಯದಲ್ಲಿ ಇಂತಹ ತಂತ್ರಜ್ಞಾನ ಇರುವಾಗ ನಮಗೆ ಬೇರೆ ರಾಜ್ಯದ ತಂತ್ರಜ್ಞಾನದ ಅಗತ್ಯವಿಲ್ಲ. ನಮ್ಮ ರಾಜ್ಯದ ಮಾದರಿಯು ಗುಜರಾತ್ ಮಾದರಿಗಿಂತ ಉತ್ತಮವಾಗಿದೆ. ಅಮೂಲ್ ಕೊರಿಯನ್ ಕ್ರಾಂತಿಯ ಫಲವಾಗಿದೆ. ಹೀಗಾಗಿ ನಾವು ಅವರನ್ನು ಗೌರವಿಸುತ್ತೇವೆ’ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಸ್ತೆ, ಚರಂಡಿ ಅಭಿವೃದ್ಧಿ ವಿಚಾರಕ್ಕಿಂತ ಲವ್ ಜಿಹಾದ್ ವಿಚಾರವನ್ನು ಪ್ರಸ್ತಾಪಿಸಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವ ವಿಚಾರವಗಿ ಪ್ರತಿಕ್ರಿಯಿಸಿ, ‘ಇದು ಅತ್ಯಂತ ಕೆಟ್ಟ ಸಂದೇಶವಾಗಿದೆ. ಇದು ಅವರು ಅಭಿವೃದ್ಧಿಗೆ ಆದ್ಯತೆ ನೀಡುವುದಕ್ಕಿಂತ, ದ್ವೇಷ ಪಸರಿಸಿ, ದೇಶವನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿರುವುದಕ್ಕೆ ಸಾಕ್ಷಿ. ನಾವು ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಜನರ ಹೊಟ್ಟೆ ತುಂಬಿಸುವ, ಬೆಲೆ ಏರಿಕೆ ನಿಯಂತ್ರಣ, ಜನರ ಬದುಕಿನ ಬಗ್ಗೆ ಗಮನ ಹರಿಸಿದರೆ, ಅವರು ಜನರ ಭಾವನೆಗಳ ಮೇಲೆ ಗಮನ ಹರಿಸುತ್ತಿದ್ದಾರೆ’ ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಮುಚ್ಚುವ ಸರ್ಕಾರದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ‘ಜನರ ಹೊಟ್ಟೆ ತುಂಬಿಸಲು ಕಡಿಮೆ ದರದಲ್ಲಿ ಊಟ ನೀಡುವ ಯೋಜನೆ ಇದಾಗಿದ್ದು, ಸರ್ಕಾರ ಹಲವು ಕೇಂದ್ರಗಳನ್ನು ಮುಚ್ಚಿದೆ. ಇದು ಜನರ ಹೃದಯದಲ್ಲಿ ಸ್ಥಾನ ಪಡೆದಿರುವ ಯೋಜನೆಯಾಗಿದೆ. ಚಾಲಕರು, ಕೂಲಿ ಕಾರ್ಮಿಕರು ಈ ಬೆಲೆ ಏರಿಕೆ ಸಮಯದಲ್ಲಿ ಕಡಿಮೆ ದರದಲ್ಲಿ ಊಟ ಪಡೆದು ನೆಮ್ಮದಿಯಾಗಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕ್ರಮವಾಗಿರುವುದರಿಂದ ಬಿಜೆಪಿ ಸರ್ಕಾರ ಇದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ. ಈ ವಿಚಾರವಾಗಿ ನಾವು ಹೋರಾಟ ಮಾಡುತ್ತೇವೆ. ಈ ಯೋಜನೆ ಉಳಿದು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡುತ್ತೇವೆ’ ಎಂದು ತಿಳಿಸಿದರು.
*ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿನಂದನಾ ಪತ್ರದಲ್ಲೇನಿದೆ?*
https://pragati.taskdun.com/siddeshwara-swamijilast-latterjnanayogashrama/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ