*ನಿರೀಕ್ಷೆಗಳು ಹುಸಿಯಾಗಿವೆ; ರಾಜ್ಯಕ್ಕೆ ಯಾವ ನೆರವೂ ನೀಡಿಲ್ಲ; ನಿರಾಶಾದಾಯಕ ಬಜೆಟ್: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ*
ಇದು ಎನ್ ಡಿಎ ಸರ್ಕಾರ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಎಂದು ಆಕ್ರೋಶ
ಪ್ರಗತಿವಾಹಿನಿ ಸುದ್ದಿ: “ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್ ಡಿಎ ಸರ್ಕಾರ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದಾಗಿದೆ. ಕರ್ನಾಟಕಕ್ಕೆ ಯಾವುದೇ ನೆರವು ನೀಡದೆ ಅವರ ಮೇಲಿದ್ದ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೇಂದ್ರ ಬಜೆಟ್ ವಿಚಾರವಾಗಿ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಬಜೆಟ್ ನಲ್ಲಿ ನಿರ್ಮಲಾ ಸೀತರಾಮನ್ ಅವರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕ ಬಜೆಟ್. ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ದೇಶವನ್ನು ಒಂದಾಗಿ ನೋಡಿಲ್ಲ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕಡೆಗಣಿಸಿದ್ದಾರೆ. ಇದು ಕೇವಲ ಬಿಜೆಪಿ ಹಾಗೂ ಎನ್ ಡಿಎ ಮೈತ್ರಿಕೂಟ ಪಕ್ಷಗಳ ಆಡಳಿತ ರಾಜ್ಯಗಳಿಗೆ ನೆರವು ನೀಡುವ ಬಜೆಟ್ ಆಗಿದೆ. ಈ ಬಜೆಟ್ ನಲ್ಲಿ ತಾರತಮ್ಯ ಹೆಚ್ಚಾಗಿದೆ. ಇದು ಖಂಡನೀಯ” ಎಂದು ಟೀಕಿಸಿದರು.
“ಪ್ರಧಾನಮಂತ್ರಿ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ನಾನು ಬಹಳಷ್ಟು ವಿಶ್ವಾಸ ಇಟ್ಟುಕೊಂಡಿದ್ದೆ. ಇಡೀ ವಿಶ್ವ ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಿ ಜಾಗತಿಕ ಮಟ್ಟದಲ್ಲಿ ತನ್ನದೇ ಚಾಪು ಮೂಡಿಸಿದೆ. ಹೀಗಾಗಿ ಪ್ರಧಾನಮಂತ್ರಿಗಳು ಬೆಂಗಳೂರಿಗೆ ಮೂಲಸೌಕರ್ಯ ನೆರವು ಹಾಗೂ ಕರ್ನಾಟಕಕ್ಕೆ ಸಹಾಯ ಮಾಡುವ ಭರವಸೆ ಇಟ್ಟುಕೊಂಡಿದ್ದೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದು, ತಮ್ಮ ರಾಜ್ಯಕ್ಕೆ ಆದ್ಯತೆ ನೀಡುತ್ತಾರೆ. ಕರ್ನಾಟಕದ ಹಿತ ರಕ್ಷಣೆ ಮಾಡುತ್ತಾರೆ, ಬಾಕಿ ಇರುವ ಯೋಜನೆಗಳಿಗೆ ಅನುದಾನ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ