LatestUncategorized
ಸಚಿವರು, ಶಾಸಕರು ಏನೇ ತಪ್ಪು ಮಾಡಿದರೂ ಅದಕ್ಕೆ ಬಿ ರಿಪೋರ್ಟ್ ಬರೆಯುವುದೇ ಈ ಸರ್ಕಾರದ ದೊಡ್ಡ ಸಾಧನೆ – ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ: ಸಚಿವರು ಶಾಸಕರು ಏನೇ ತಪ್ಪು ಮಾಡಿದರೂ ಅದಕ್ಕೆ ಬಿ ರಿಪೋರ್ಟ್ ಬರೆಯುವುದೇ ಈ ಸರ್ಕಾರದ ದೊಡ್ಡ ಸಾಧನೆ. ಈ ಸರ್ಕಾರದಲ್ಲಿ ಸಚಿವರು ಲಂಚ ಹಾಗೂ ಮಂಚದ ಪ್ರಕರಣದಲ್ಲಿ ಭಾಗಿಯಾದರೂ ಅವರು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಅವರು, ಇಷ್ಟೆಲ್ಲಾ ಭ್ರಷ್ಟಾಚಾರದ ನಂತರ ಜಾತಿ ಹಾಗೂ ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿದರು. ಈಗ ಕೊನೆಯದಾಗಿ ಮತದಾರರ ಪಟ್ಟಿ ತಿರುಚಲು ಮುಂದಾಗಿದ್ದಾರೆ. ಮತದಾರರ ಮಾಹಿತಿ ಕದಿಯಲು ಮುಂದಾಗಿದ್ದಾರೆ. ಪಂಚಾಯಿತಿ ಸದಸ್ಯನಿಂದ ಸಂಸತ್ ಸದಸ್ಯನವರೆಗೂ ಆಯ್ಕೆ ಮಾಡುವಂತಹ ಹಕ್ಕನ್ನು ಕಸಿಯಲು ಈ ಸರ್ಕಾರ ಮುಂದಾಗಿದೆ ಎಂದರು.
ಡಿ.ಕೆ.ಶಿವಕುಮಾರ ಭಾಷಣದ ಪೂರ್ಣಪಾಠ ಇಲ್ಲಿದೆ:
ಮಧು ಬಂಗಾರಪ್ಪನವರು ನನ್ನ ಹಾಗೂ ಸಿದ್ದರಾಮಯ್ಯನವರ ಬಳಿ ಬಂದು, ನಿಮ್ಮ ಕಾಲಿಗೆ ಬೀಳುತ್ತೇನೆ, ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿಕೊಂಡರು. ಆದರೆ ನಾವು ಇಂದು ಕಾಲು ಮುಟ್ಟಿಸಿಕೊಳ್ಳಲು ಬಂದಿಲ್ಲ. ಬದಲಿಗೆ ನಾವು ನಿಮ್ಮ ಪಾದಗಳಿಗೆ ನಮಸ್ಕರಿಸುತ್ತಾ, ನಿಮ್ಮ ಜೊತೆ ನಾವು ಸದಾ ಇರುತ್ತೇವೆ ಎಂದು ಹೇಳಲು ಬಂದಿದ್ದೇವೆ.
ಈ ಹೋರಾಟದಲ್ಲಿ ನಿಮಗೆ ಶಕ್ತಿ ಕೊಡಬೇಕು, ನಿಮ್ಮ ಧ್ವನಿಯಾಗಿ ಇರಬೇಕು, ನಿಮ್ಮ ನೋವು ಹಾಗೂ ಬದುಕಿನಲ್ಲಿ ನಾವು ಇರಬೇಕು ಎಂಬ ಉದ್ದೇಶದಿಂದ ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ.
ರೈತನಿಗೆ ಸಂಬಳ, ಪ್ರಮೋಷನ್, ಲಂಚ, ಪಿಂಚಣಿ ಯಾವುದು ಇಲ್ಲ. ರೈತನ ಬದುಕು ಉಳಿಸಬೇಕು ಎಂದು ದೇಶದಲ್ಲಿ ನಾವು ಸಾಕಷ್ಟು ಕಾನೂನುಗಳನ್ನು ತಂದಿದ್ದೇವೆ. ಇದು ಹೋರಾಟಗಾರರ ಭೂಮಿ. ಮಹಾನ್ ನಾಯಕರುಗಳನ್ನು ಕೊಟ್ಟ ಭೂಮಿ.
ನಮಗೆ ಬಸವಣ್ಣನವರ ನಾಡು, ಶಿಶುನಾಳ ಶರೀಫರ ಕರ್ನಾಟಕ, ಕನಕದಾಸರು ಹಾಗೂ ಕುವೆಂಪು ಅವರ ಕರ್ನಾಟಕ ಬೇಕು.
ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ ಈ ಭಾಗದ ನಮ್ಮ ಪಕ್ಷದ ಕಾರ್ಯಕರ್ತನೊಬ್ಬ ಮೃತಪಟ್ಟ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಆತನಿಗೆ ಖುದ್ದಾಗಿ ಹೋಗಿ ಪರಿಹಾರ ನೀಡುವಂತೆ ಸೂಚನೆ ನೀಡಿದರು. ಆತ ನಮ್ಮ ಪಕ್ಷದ ಬೂತ್ ಏಜೆಂಟ್ ಆಗಿದ್ದ. ಆತನ ಕುಟುಂಬದವರನ್ನು ಭೇಟಿ ಮಾಡಿ 10 ಲಕ್ಷ ರು. ಪರಿಹಾರ ನೀಡಲಾಗಿದೆ.
ನನಗೆ ಈ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಗೋಳಿನ ಪರಿಸ್ಥಿತಿ, ಕೋರ್ಟ್ ಆದೇಶ ಹಾಗೂ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ತಿಳಿಯಿತು.
ಇಲ್ಲಿನ ಜನ 9,000 ಎಕರೆ ಜಮೀನು ಕಳೆದುಕೊಂಡಿದ್ದು, 56 ಆದೇಶಗಳನ್ನು ರದ್ದು ಮಾಡಲಾಗಿದೆ ಎಂಬುದು ತಿಳಿಯಿತು.
ಆಗ ನಾನು ಈ ಭಾಗದ ಜನರ ಕಾಳಜಿಗಾಗಿ ಇಲ್ಲಿನ ನಾಯಕರನ್ನು ಸೇರಿಸಿ ಪಕ್ಷದ ವತಿಯಿಂದ ಸಮಿತಿ ಮಾಡಿ ಮಲೆನಾಡಿನ ಭಾಗದ ಜನರ ಸಮಸ್ಯೆ ಏನು ಎಂದು ವರದಿ ತಯಾರಿಸಲು ಸೂಚನೆ ನೀಡಿದೆ.
ಶರಾವತಿ ಮುಳುಗಡೆ ಸಂತ್ರಸ್ತರ ಸಂಕಷ್ಟದ ಬಗ್ಗೆ, ರೈತರ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಮಾಹಿತಿ ಪಡೆದಿದ್ದೇನೆ. ನೀವೆಲ್ಲ ನಿಮ್ಮ ಆಸ್ತಿಯನ್ನು ಕಳೆದುಕೊಂಡು ರಾಜ್ಯಕ್ಕೆ ಬೆಳಕು ನೀಡುತ್ತಿದ್ದೀರಿ. ಈ ದೇಶಕ್ಕಾಗಿ ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ತ್ಯಾಗ ಮಾಡಿದ್ದೀರಿ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿ, ನೀರಾವರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ.
ಶರಾವತಿ ವಿದ್ಯುತ್ ಘಟಕ ಸುಟ್ಟುಹೋದ ಸಂದರ್ಭದಲ್ಲಿ ನಾನು ಹಾಗೂ ಕಾಗೋಡು ತಿಮ್ಮಪ್ಪನವರು ಭೇಟಿ ನೀಡಿ ಕೇವಲ ಮೂರು ತಿಂಗಳಲ್ಲಿ ಅದನ್ನು ಸರಿ ಮಾಡಿ ಮತ್ತೆ ವಿದ್ಯುತ್ ಉತ್ಪಾದನೆ ಆಗುವ ರೀತಿಯಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದೆವು. ಅದೊಂದು ಇತಿಹಾಸ.
ಮುಖ್ಯಮಂತ್ರಿ ಬೊಮ್ಮಾಯಿಯವರೇ ನಿಮ್ಮ ಬಳಿ ಇಂಧನ ಹಾಗೂ ಜಲ ಸಂಪನ್ಮೂಲ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಈ ಜಿಲ್ಲೆಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇದ್ದಾರೆ. ಈ ಭಾಗದಲ್ಲಿ ಮತ ಹಾಕಿ ನಿಮಗೆ ಆರು ಶಾಸಕರನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ನುಡಿದಂತೆ ನಡೆಯುತ್ತೇವೆ ಎಂದು ನೀವು ವಾಗ್ದಾನ ನೀಡಿದ್ದೀರಿ.
ನೀವು ಕೊಟ್ಟ 600 ಭರವಸೆಗಳ ಪೈಕಿ 550 ಆಶ್ವಾಸನೆಗಳನ್ನು ಈಡೇರಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಕೊಟ್ಟಿದ್ದ 179 ಭರವಸೆಗಳ ಪೈಕಿ 165 ಅನ್ನು ಈಡೇರಿಸಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿತ್ತು. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ಗೂ ಇರುವ ವ್ಯತ್ಯಾಸ.
ಈ ವಿಚಾರವಾಗಿ ಉತ್ತರ ಕೊಡಿ ಎಂದು ಪ್ರತಿನಿತ್ಯ ಪ್ರಶ್ನೆ ಕೇಳುತ್ತಲೇ ಇದ್ದೇವೆ. ಇದುವರೆಗೂ ಬಿಜೆಪಿಯ ಒಬ್ಬ ನಾಯಕರು ನಮ್ಮ ಪ್ರಶ್ನೆಗಳಿಗೆ ಒಂದೂ ಉತ್ತರ ನೀಡಿಲ್ಲ.
ಅಕ್ಟೋಬರ್ 6, 1959 ರಂದು ನೀಡಿದ ಆದೇಶದಲ್ಲಿ ಯಾರೆಲ್ಲ ಜಮೀನು ತ್ಯಾಗ ಮಾಡಿದ್ದಾರೋ ಅವರಿಗೆ ನಿವೇಶನ, ಮನೆ ನಿರ್ಮಾಣ ಮಾಡಿಕೊಟ್ಟು ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿ ಕೊಡಬೇಕು. ನೀವು ಇವರಿಗೆ ಪರ್ಯಾಯ ಜಮೀನನ್ನು ನೀಡಬೇಕು ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ. ನೀವು ಅರಣ್ಯ ಪ್ರದೇಶದಲ್ಲಿ ಅಥವಾ ಕಂದಾಯ ಪ್ರದೇಶದಲ್ಲಿ ಜಮೀನು ನೀಡಿ. ಇವರಿಗೆ ಜಮೀನು ನೀಡಬಾರದು ಎಂದು ಯಾವ ಕಾನೂನಿನಲ್ಲಿದೆ? ಈ ಜನರಿಗೆ ರಕ್ಷಣೆ ನೀಡಲಾಗದೆ, 56 ಆದೇಶಗಳನ್ನು ಹಿಂಪಡೆದಿದ್ದೀರಲ್ಲ, ನಿಮಗೆ ಹೃದಯ, ಮಾನವೀಯತೆ ಇದೆಯಾ?
ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲವಾಗಿದೆ. ಇಂತಹ ಸರ್ಕಾರ ಇರಬೇಕಾ ಎಂದು ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ.
ಬಂಗಾರಪ್ಪನವರ ಕಾಲದಲ್ಲಿ ಅರ್ಜಿ ತುಂಬುವ ಮೂಲಕ ಬಗರ್ ಹುಕುಂ ಸಾಗುವಳಿ ಮಾಡುವಂತೆ ಆದೇಶ ನೀಡಿದೆವು. ಆ ಮೂಲಕ ಲಕ್ಷಾಂತರ ಜನರಿಗೆ ಭೂಮಿ ನೀಡಿದ್ದೇವೆ. ಅರಣ್ಯ ಕಾಯ್ದೆ ಮೂಲಕ ಆದಿವಾಸಿ ಹಾಗೂ ಬುಡಕಟ್ಟು ಜನರಿಗೆ ಜಮೀನು ನೀಡುವಂತೆ ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಾನೂನು ತಂದಿತು.
ಈ ಮಲೆನಾಡಿನ ರೈತರಿಗೆ ನಾನು ಹೇಳುವುದು ಒಂದೇ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಬಂದಾಗ ಯಾವ ಒಬ್ಬ ರೈತನನ್ನು ಒಕ್ಕಲು ಎಬ್ಬಿಸಲು ಅವಕಾಶ ನೀಡುವುದಿಲ್ಲ ಎಂದು ಮಾತು ಕೊಡುತ್ತಿದ್ದೇನೆ.
ಯಡಿಯೂರಪ್ಪನವರೆ, 15 ದಿನಗಳಲ್ಲಿ ಈ ಭಾಗದ ಸಂತ್ರಸ್ತ ಜನರಿಗೆ ಪರಿಹಾರ ನೀಡುವುದಾಗಿ ಹೇಳಿದ್ದೀರಿ. ಆದರೆ ಇದು ನಿಮ್ಮ ಸರ್ಕಾರವಲ್ಲ. ಇದೊಂದು ಅಪವಿತ್ರ ಮೈತ್ರಿ ಸರ್ಕಾರ. ನೀವು ನುಡಿದಂತೆ ನಡೆಯಲು ಸಾಧ್ಯವಾಗುತ್ತಿಲ್ಲ. ಈ ಸರ್ಕಾರ ಈ ರೈತರಿಗೆ ಶಾಪವಾಗಿ ಪರಿಣಮಿಸಿದೆ. ನಿಮ್ಮಿಂದ ಈ ರೈತರ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡುತ್ತಾರೆ, ಆಗ ನಾವು ಈ ರೈತರ ರಕ್ಷಣೆಯನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದೇನೆ.
ನಿಮ್ಮೆಲ್ಲರ ಪರವಾಗಿ ನಾವು ಹೋರಾಟ ಮಾಡುತ್ತೇವೆ. ಈ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಅದು ಬೇರೆ ವಿಚಾರ. ನೀವು ಆತಂಕ, ಗಾಬರಿಪಡುವ ಅಗತ್ಯವಿಲ್ಲ. ನೀವು ಯಾರೊಬ್ಬರು ಜಮೀನು ಬಿಟ್ಟು ಹೊರಹೋಗುವ ಅಗತ್ಯವಿಲ್ಲ. ಈ ವಿಚಾರವಾಗಿ ನಿಮಗೆ ವಚನ ನೀಡಲು ನಾವು ಇಲ್ಲಿಗೆ ಬಂದಿದ್ದೇವೆ.
ನಮಗೆ ಈ ದೇಶದ ಕಾನೂನಿನ ಬಗ್ಗೆ ಅರಿವಿದೆ. ಕಾನೂನಿನಲ್ಲಿ ಅರಣ್ಯ ಭೂಮಿ ಕೊಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಈಗ ಕೋರ್ಟ್ ಆದೇಶದ ಪ್ರಕಾರ ಪರಿಹಾರವಾಗಿ ಕಂದಾಯ ಪ್ರದೇಶದಲ್ಲಿ ಜಮೀನು ನೀಡಬೇಕು ಎಂದು ಹೇಳಲಾಗಿದೆ. ಕೈಗಾರಿಕೆ ಉದ್ದೇಶಗಳಿಗೆ ಅರಣ್ಯ ಭೂಮಿ ನೀಡಲಾಗುತ್ತಿಲ್ಲವೇ? ವಿದ್ಯುತ್ ಉತ್ಪಾದನೆಗಾಗಿ ಅರಣ್ಯ ಭೂಮಿಯನ್ನು ನೀಡಲಾಗುತ್ತಿಲ್ಲವೇ?ಮೇಕೆದಾಟು ಯೋಜನೆಗೂ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದೇವೆ. ಪರ್ಯಾಯವಾಗಿ ಬೇರೆ ಕಡೆ ಭೂಮಿಯನ್ನು ಅರಣ್ಯಕ್ಕಾಗಿ ನೀಡಲಾಗಿದೆ.
ಈ ಭಾಗದಲ್ಲೂ ಈ ಜನರಿಗೆ ನ್ಯಾಯ ಒದಗಿಸಲು ನೀವು ಕೂಡ ಇಂಥದೇ ಪ್ರಯತ್ನವನ್ನು ಮಾಡಿ. ಈ ಭಾಗದ ಜನರನ್ನು ಒಕ್ಕಲೆಬ್ಬಿಸಲು ಯಾರು ಹೇಳಿದ್ದಾರೆ? ಇವರಿಗಾಗಿ ನೀಡಲಾಗಿದ್ದ ಆದೇಶವನ್ನು ವಜಾ ಮಾಡುವಂತೆ ಯಾರು ಹೇಳಿದ್ದಾರೆ? ಮೈ ಮೇಲೆ ಹಸಿರು ಟವಲ್ ಹಾಕಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತೀರಿ, ಆದರೆ ಅದೇ ರೈತನ ಬೆನ್ನಿಗೆ ಚೂರಿ ಹಾಕುತ್ತಿದ್ದೀರಿ. ಯಡಿಯೂರಪ್ಪನವರೇ, ನಿಮ್ಮ ಬೊಮ್ಮಾಯಿ ಅವರ ಸರ್ಕಾರ ರೈತ ವಿರೋಧಿ ಸರ್ಕಾರ ಎಂಬುದಕ್ಕೆ ಇದೇ ಸಾಕ್ಷಿ.
ರೈತ ಬಂಧುಗಳೇ ಅಡಕೆ ಬೆಳೆ ವಿಚಾರದಲ್ಲಿ ಅಮಿತ್ ಶಾ ಅವರು ಕೂಡ ನುಡಿದಂತೆ ನಡೆಯಲು ಸಾಧ್ಯವಾಗಿಲ್ಲ. ಅಡಕೆ ರೋಗಕ್ಕೆ ಪರಿಹಾರ ನೀಡಲು ಅವರಿಂದ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತ್ಯೇಕವಾಗಿ ಅಡಕೆ ಮಂಡಳಿ ರಚನೆ ಮಾಡಲಾಗುತ್ತದೆ. ನಾವು ಶಿಕಾರಿಪುರಕ್ಕೆ ಹೋದಾಗ ಅಲ್ಲಿ ಲಂಬಾಣಿ ತಾಂಡದವರು ನಮ್ಮ ಬಳಿ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ಈ ವಿಚಾರವಾಗಿ ನಾನು ರಾಹುಲ್ ಗಾಂಧಿಯವರ ಜೊತೆಯು ಚರ್ಚೆ ಮಾಡಿದ್ದು, ಯಾರೆಲ್ಲ ಅರಣ್ಯ ಪ್ರದೇಶದಲ್ಲಿ ಜೀವನ ಮಾಡಿಕೊಂಡು ಬಂದಿದ್ದಾರೆಯೋ ಅವರಲ್ಲಿ ಪರಿಶಿಷ್ಟ ಜಾತಿಯವರಿಗೆ 25 ಹಾಗೂ ಸಾಮಾನ್ಯ ವರ್ಗದವರಿಗೆ 75 ವರ್ಷಗಳು ಎಂದು ಹಾಕಿರುವ ನಿರ್ಬಂಧವನ್ನು ತೆಗೆಯುತ್ತೇವೆ. ನಾನು ಸೇರಿ ಕಾಂಗ್ರೆಸ್ ಪಕ್ಷ ನಿಮ್ಮ ರಕ್ಷಣೆಗೆ ಮುಂದಾಗಲಿದೆ.
ಈ ಭೂಮಿ ನಮ್ಮದಲ್ಲ, ಈ ಭೂಮಿ ನಿಮ್ಮದು. ಈ ಭೂಮಿಯಲ್ಲಿ ಉಳುಮೆ ಮಾಡಿ ಹಸಿರು ಮಾಡುತ್ತಿರುವವರು ನೀವು. ಈ ಭೂಮಿಯಿಂದ ಬದುಕುತ್ತಿರುವವರು ನೀವು.
ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಅಂಗವಾಗಿ ನಮ್ಮ ರಾಜ್ಯದಲ್ಲಿ 510 ಕಿ. ಮೀ ದೂರ ನಡೆದಿದ್ದಾರೆ. ಆಗ ಒಬ್ಬ ವಯಸ್ಸಾದ ಮಹಿಳೆ ಬಂದು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ತನ್ನ ಜಮೀನಿನಲ್ಲಿ ಬೆಳೆದ ಸೌತೆಕಾಯಿಯನ್ನು ಕೊಟ್ಟು ಇದು ನಿನ್ನ ಅಜ್ಜಿ ಇಂದಿರಾಗಾಂಧಿಯವರು ಕೊಟ್ಟ ಜಮೀನಿನಲ್ಲಿ ಬೆಳೆದದ್ದು ಎಂದು ಹೇಳಿದರು. ಇದು ಕಾಂಗ್ರೆಸ್ ಪಕ್ಷದ ಇತಿಹಾಸ, ಕಾಂಗ್ರೆಸ್ ಪಕ್ಷದ ಶಕ್ತಿ. ಈ ದೇಶದಲ್ಲಿ ಬಡವನಿಗೆ ಜಮೀನು ಕೊಟ್ಟಿದ್ದು ಕಾಂಗ್ರೆಸ್. ಬಡವರಿಗೆ ನಿವೇಶನಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಉದ್ಯೋಗಗಳನ್ನು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ.
ಇಂದು ಸಂಗಮೇಶ್ ಅವರು ಭದ್ರಾವತಿಯ ಕಾರ್ಖಾನೆ ಬಗ್ಗೆ ಮಾತನಾಡಿದರು. ಈ ಕಾರ್ಖಾನೆಯನ್ನು ನಾಶ ಮಾಡಿದ್ದು ಯಾರು? ಅಂದು ಕಾಂಗ್ರೆಸ್ ಸರ್ಕಾರ ಈ ಕಾರ್ಖಾನೆ ಉಳಿವಿಗೆ ಎಲ್ಲ ರೀತಿಯ ಪ್ರಯತ್ನ ಮಾಡಿತ್ತು. ಆದರೆ ಇಂದು ಆ ಕಾರ್ಖಾನೆ ಮುಚ್ಚಲು ಯಾರು ಪ್ರಯತ್ನಿಸುತ್ತಿದ್ದಾರೆ? ಬಿಜೆಪಿ ಸರ್ಕಾರ. ಕಾಂಗ್ರೆಸ್ ಪಕ್ಷ ಕೈಗಾರಿಕೆಗಳನ್ನು ಆರಂಭಿಸಿ ಉದ್ಯೋಗ ನೀಡಿದರೆ, ಬಿಜೆಪಿ ಅದನ್ನು ಮಾರಾಟ ಮಾಡುತ್ತಿದೆ.
ಬಂಧುಗಳೇ ಇಡೀ ದೇಶದಲ್ಲಿ ರಾಜ್ಯಕ್ಕೆ ದೊಡ್ಡ ಕಳಂಕವಾಗಿ ಭ್ರಷ್ಟಾಚಾರ ಸರ್ಕಾರ ಅಧಿಕಾರದಲ್ಲಿದೆ. ನಮ್ಮ ರಾಜ್ಯ ಐಟಿ ಬಿಟಿ, ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದಲ್ಲಿ ಮಾದರಿಯಾಗಿತ್ತು. ವಿಶ್ವದ ಬಂಡವಾಳ ಹೂಡಿಕೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿ ಮುಂದೆ ಬರುತ್ತಿದ್ದರು. ಆದರೆ ಇಂದು ನಮ್ಮ ರಾಜ್ಯ ದೇಶದಲ್ಲಿ ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕ ಹೊತ್ತಿದೆ.
ಈ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಹತ್ತು ವರ್ಷ ಬೇಕಾ? ಈ ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಇಂತಹ ಸರ್ಕಾರ ಯಾಕೆ ಇರಬೇಕು?
ಈ ಭಾಗದಲ್ಲಿ ಭತ್ತ ಬೆಳೆಯುತ್ತಾರೆ. ರಾಜ್ಯದ ಹಲವು ಭಾಗಗಳಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭತ್ತ ಖರೀದಿಗೆ ಸರ್ಕಾರ ಆದೇಶ ಮಾಡಿದೆ. ಬೇರೆ ಭಾಗಗಳಲ್ಲಿ ಖರೀದಿ ಮಾಡಲು ಯಾಕೆ ಆದೇಶ ಮಾಡಿಲ್ಲ? ಕೇವಲ ಆ ಭಾಗದ ಜನರಿಗೆ ಮಾತ್ರ ಬೆಂಬಲ ಬೆಲೆ ಸಿಗಬೇಕಾ? ರಾಜ್ಯದ ಬೇರೆ ಭಾಗದ ರೈತರ ಬದುಕಿನ ಬಗ್ಗೆ ಸರ್ಕಾರ ಚಿಂತನೆ ಮಾಡುವುದಿಲ್ಲವೇ? ಎಲ್ಲಾ ಭಾಗದ ರೈತರು ಒಂದೇ ಅಲ್ಲವೇ? ಆ ಜಿಲ್ಲೆ ರೈತರಿಗೆ ಬೆಂಬಲ ಬೆಲೆ ಕೊಡಬೇಡಿ ಎಂದು ನಾನು ಹೇಳುತ್ತಿಲ್ಲ. ಬೇರೆ ಭಾಗದ ರೈತರ ಬಗ್ಗೆಯೂ ಸರ್ಕಾರ ಚಿಂತನೆ ಮಾಡಬೇಕು ಎಂದು ಹೇಳುತ್ತಿದ್ದೇನೆ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ 40 ಪರ್ಸೆಂಟ್ ಕಮಿಷನ್ ಭಷ್ಟಾಚಾರ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ. ನಾವು ಆತನ ಪರವಾಗಿ ಹೋರಾಟ ಮಾಡಿದ ಪರಿಣಾಮ ಆತನಿಗೆ ಕಿರುಕುಳಕೊಟ್ಟ ಸಚಿವರಿಂದ ರಾಜೀನಾಮೆ ನೀಡುವಂತೆ ಮಾಡಿದೆವು. ಯಡಿಯೂರಪ್ಪನವರು, ಗೃಹ ಮಂತ್ರಿಗಳು ಈಶ್ವರಪ್ಪನವರು ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂದು ಹೇಳಿದರು. ಇವರ ಹೇಳಿಕೆ ಪರಿಣಾಮವಾಗಿ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಬರೆಯುತ್ತಾರೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆತ ಮಾಡಿದ ಕೆಲಸಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಇಂತಹ ನೂರಾರು ಉದಾಹರಣೆ ಈ ಸರ್ಕಾರದಲ್ಲಿದೆ.
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೂಡ 40% ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಅವರ ವಿರುದ್ಧ ಇವರು ಪ್ರಕರಣ ದಾಖಲಿಸಿಲಿಲ್ಲ ಯಾಕೆ? ಹುಬ್ಬಳ್ಳಿ ಗುತ್ತಿಗೆದಾರನೊಬ್ಬ ದಯಾಮರಣಕ್ಕೆ ಅರ್ಜಿ ಹಾಕಿದ್ದಾನೆ. ನಿಮ್ಮ ಸಚಿವರು ಶಾಸಕರು ಏನೇ ತಪ್ಪು ಮಾಡಿದರೂ ಅದಕ್ಕೆ ಬಿ ರಿಪೋರ್ಟ್ ಬರೆಯುವುದೇ ಈ ಸರ್ಕಾರದ ದೊಡ್ಡ ಸಾಧನೆ. ಈ ಸರ್ಕಾರದಲ್ಲಿ ಸಚಿವರು ಲಂಚ ಹಾಗೂ ಮಂಚದ ಪ್ರಕರಣದಲ್ಲಿ ಭಾಗಿಯಾದರೂ ಅವರು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ.
ಇಷ್ಟೆಲ್ಲಾ ಭ್ರಷ್ಟಾಚಾರದ ನಂತರ ಜಾತಿ ಹಾಗೂ ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿದರು. ಈಗ ಕೊನೆಯದಾಗಿ ಮತದಾರರ ಪಟ್ಟಿ ತಿರುಚಲು ಮುಂದಾಗಿದ್ದಾರೆ. ಮತದಾರರ ಮಾಹಿತಿ ಕದಿಯಲು ಮುಂದಾಗಿದ್ದಾರೆ. ಪಂಚಾಯಿತಿ ಸದಸ್ಯನಿಂದ ಸಂಸತ್ ಸದಸ್ಯನವರೆಗೂ ಆಯ್ಕೆ ಮಾಡುವಂತಹ ಹಕ್ಕನ್ನು ಕಸಿಯಲು ಈ ಸರ್ಕಾರ ಮುಂದಾಗಿದೆ.
ಕಳೆದ ಐದು ವರ್ಷಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಮತಗಳನ್ನು ತೆಗೆದುಹಾಕಲಾಗಿದೆ. ತಮಗೆ ಯಾರು ಮತ ಹಾಕುವುದಿಲ್ಲ ಎನಿಸುತ್ತದೆಯೋ ಅಂತಹ 27 ಲಕ್ಷ ಮತಗಳನ್ನು ತೆಗೆದುಹಾಕಲಾಗಿದೆ. ಖಾಸಗಿಯವರಿಗೆ ನಕಲಿ ಬಿ ಎಲ್ ಓ ಗುರುತಿನ ಚೀಟಿ ಕೊಟ್ಟಿದ್ದಾರೆ. ಇದು ನಕಲಿ ನೋಟು ಮುದ್ರಣ ಮಾಡಿದಷ್ಟೇ ಮಹಾ ಅಪರಾಧ. ಚಿಲುಮೆ ಎಂಬ ಸಂಸ್ಥೆ ಸಚಿವ ಅಶ್ವಥ್ ನಾರಾಯಣ್ ಅವರ ಕೃಪಾಪೋಷಿತ ನಾಟಕ ಮಂಡಳಿ. ಅವರ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ, ಅದರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತೆಗೆಯುವ ಕೆಲಸ ಮಾಡಿಸಿದ್ದಾರೆ. ಈಗ ಕೆಲವು ಅಮಾಯಕ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ನಾವು ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಿದ್ದೇವೆ. ಈ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂದು ಅರಿವಾಗಿ ಐಎಎಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದಾರೆ. ಮತದಾರರ ಪಟ್ಟಿ ಮರುಪರಿಶೀಲನೆ ನಡೆಯುತ್ತಿದೆ.
ಈ ವಿಚಾರದಲ್ಲಿ ನೀವುಗಳು ಬಹಳ ಜಾಗೃತರಾಗಿ ಇರಬೇಕು. ನಿಮ್ಮ ನಿಮ್ಮ ಕ್ಷೇತ್ರಗಳ ಪ್ರತಿ ಬೂತ್ ನಲ್ಲಿ ಮತದಾರರ ಪಟ್ಟಿಯನ್ನು ತೆಗೆದುಕೊಂಡು ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸಬೇಕು.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಪರಿಶಿಷ್ಟರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರ ಮತವನ್ನು ಹುಡುಕಿ ಹುಡುಕಿ ತೆಗೆದುಹಾಕುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು. ಇದರ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ.
ಇನ್ನು ನಮ್ಮ ಭಾಗದ ರೈತರ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಜಮಾ ಮಾಡಿ ನಂತರ ಚಿಲುಮೆ ಸಂಸ್ಥೆಯವರು ಅವರ ಖಾತೆಗಳಿಂದ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಮುಂದೆ ಈ ವಿಚಾರವಾಗಿ ಮಾತನಾಡುತ್ತೇನೆ.
ಈ ಜನಾಕ್ರೋಶ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ರಾಜ್ಯದ ತುಂಬಾ ಜನಾಕ್ರೋಶ ಹರಡುತ್ತಿದೆ. ಇದೊಂದು ಭ್ರಷ್ಟ ಸರ್ಕಾರ. ಬೆಲೆಗಳು ಗಗನಕ್ಕೇರಿ ನಿಮ್ಮ ಆದಾಯ ಪಾತಾಳಕ್ಕೆ ಕುಸಿದಿದೆ.
ಮಲೆನಾಡಿನ ರೈತರು ಹಾಗೂ ಎಲ್ಲಾ ವರ್ಗದ ಜನರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಈ ಹಿಂದೆ ರಾಜ್ಯದಲ್ಲಿ ಬಂಗಾರಪ್ಪ ಹಾಗೂ ಕೃಷ್ಣ ಅವರ ಸರ್ಕಾರ ಬಂದಾಗ ಈ ಜಿಲ್ಲೆಯ ಜನ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರು ಸೇರಿದಂತೆ ಎಲ್ಲರನ್ನೂ ಸೋಲಿಸಿದ ಇತಿಹಾಸ ಇದೆ. ಇತಿಹಾಸ ಮತ್ತೆ ಮರುಕಳಿಸಬೇಕು. ಈ ಭಾಗದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂಬ ಧೈರ್ಯದಿಂದ ಪ್ರತಿಕ್ಷೇತ್ರದಲ್ಲೂ ಬಹಳ ಮಂದಿ ಪಕ್ಷದ ಟಿಕೆಟ್ಗಾಗಿ ಅರ್ಜಿ ಹಾಕಿದ್ದೀರಿ. ಇದು ಕಾಂಗ್ರೆಸ್ ಪಕ್ಷದ ಶಕ್ತಿ.
https://pragati.taskdun.com/panchmasali-convention-in-gandigwad-december-19-deadline-for-the-government/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ