ಪ್ರಗತಿವಾಹಿನಿ ಸುದ್ದಿ; ಹಾಸನ: ಸಕಲೇಶಪುರದ ಈ ಬಹಿರಂಗ ಸಭೆ ನೋಡುತ್ತಿದ್ದರೆ, ಕನಕಪುರದ ಬಹಿರಂಗ ಸಭೆಯಂತೆ ಕಾಣುತ್ತಿದೆ. ನನ್ನ ರಾಜಕೀಯ ಜೀವನದಲ್ಲಿ ಸಕಲೇಶಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂದಿರುವುದು ಪಕ್ಷಕ್ಕೆ ಶಕ್ತಿ ತಂದಿದೆ. ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್ ಅವರನ್ನು ವಿಧಾನಸಭೆಗೆ ಕಳುಹಿಸಿಕೊಡುತ್ತೀರಿ ಎಂಬುದಕ್ಕೆ ಈ ಸಭೆಯೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ,ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗ ಅಧಿಕಾರಕ್ಕೆ ಬಂದಂತೆ. ಇಲ್ಲಿ ರೈತರು, ಕಾರ್ಮಿಕರು, ಬಡ ವರ್ಗದ ಜನರು ಬಂದಿದ್ದೀರಿ. ರೈತನಿಗೆ ಸಂಬಳ, ಬಡ್ತಿ, ಪಿಂಚಣಿ, ನಿವೃತ್ತಿ ಲಂಚ ಯಾವುದೂ ಸಿಗುವುದಿಲ್ಲ. ಈ ರೈತನನ್ನು ಬದುಕಿಸಬೇಕು.
1989ರಲ್ಲಿ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಬಂಗಾರಪ್ಪ, ದೇವರಾಜ ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ, ಫಾರಂ 53, 57, 58 ನೀಡಿ ರೈತರನ್ನು ಯಾರೂ ಕೂಡ ಒಕ್ಕಲೆಬ್ಬಿಸದಂತೆ ಅನುಕೂಲ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇದು ಕಾಂಗ್ರೆಸ್ ಬದ್ಧತೆ.
ಕಾಂಗ್ರೆಸ್ ಪಕ್ಷ ಬಡವರಿಗೆ ನಿವೇಶನ, ಮನೆ ನೀಡಿದೆ. ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ, ಮಹಿಳೆಯರಿಗಾಗಿ ಸ್ತ್ರೀಶಕ್ತಿ ಸಂಘಗಳು, ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ ಯೋಜನೆ ನೀಡಿದೆ. ಇಂತಹ ಒಂದು ಯೋಜನೆ ಜೆಡಿಎಸ್ ಅಥವಾ ಬಿಜೆಪಿಯವರು ಕೊಟ್ಟಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಡವರ ಹೊಟ್ಟೆ ತುಂಬಿಸಲು ಒಂದು ಸಣ್ಣ ಯೋಜನೆಯನ್ನು ನೀಡಿಲ್ಲ. ಬೆಲೆ ಏರಿಕೆ ನಿಯಂತ್ರಣ ಮಾಡಲು, ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲು, ಸಮಾಜದಲ್ಲಿ ಶಾಂತಿ ನಿರ್ಮಿಸಲು ಒಂದು ಯೋಜನೆಯನ್ನು ಕೊಟ್ಟಿಲ್ಲ.
ಇದು ಮಲೆನಾಡು ಪ್ರದೇಶ. ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಪ್ರದೇಶ. ಇತ್ತೀಚೆಗೆ ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಸರ್ಕಾರ ಘೋಷಿಸಿತ್ತು. ಇದರಲ್ಲಿ ಮಲೆನಾಡು ಭಾಗದಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗುತ್ತಿದೆ? ಈ ಭಾಗದಲ್ಲಿ 50 ಸಾವಿರ ಕೋಟಿ ಅಥವಾ 5 ಸಾವಿರ ಕೋಟಿಯಾದರೂ ಬಂಡವಾಳ ಹೂಡಿಕೆಯಾಗಿದೆಯಾ? ಮೋದಿ ಅವರು ಹೇಳಿದಂತೆ ನಿಮ್ಮ ಖಾತೆಗೆ 15 ಲಕ್ಷ ಹಾಕಿದರಾ? ನಿಮಗೆ ಅಚ್ಛೇದಿನ ಬಂತಾ? ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು ನಿಮ್ಮ ಆದಾಯ ಡಬಲ್ ಆಯಿತಾ? ರೈತರು ಬಳಸುವ ಗೊಬ್ಬರ, ಮೇವುಗಳ ಬೆಲೆ ಏರಿಕೆಯಾಗುತ್ತಿವೆ. ಅಡುಗೆ ಅನಿಲ, ಅಡುಗೆ ಎಣ್ಣೆ, ದಿನಸಿ ವಸ್ತುಗಳು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ಬಿಜೆಪಿ ಅಧಿಕಾರದಿಂದ ದೂರ ಇಡಲು ಕುಮಾರಸ್ವಾಮಿಗೆ ಬೇಷರತ್ ಬೆಂಬಲ ನೀಡಿದೆವು. ಕುಮಾರಸ್ವಾಮಿ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೆಡಿಎಸ್ 37 ಜನರಿದ್ದರೂ ನಾವು 80 ಶಆಸಕರಿದ್ದರೂ ನಾವು ಅವರಿಗೆ ಬೆಂಬಲ ನೀಡಿದೆವು. ಸಕಲೇಶಪುರದ ಕುಮಾರಸ್ವಾಮಿ ಅವರು ನಾನು ರಬ್ಬರ್ ಸ್ಟಾಂಪ್ ಆಗಿದ್ದೇನೆ ಎಂದರು ಹೇಳಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ರೇವಣ್ಣ ಮಂತ್ರಿ ಆಗಲು ಸಾಧ್ಯವಿದೆಯಾ? ನಾನು ಅವರ ಆಂತರಿಕ ರಾಜಕೀಯ ಮಾತನಾಡುವುದಿಲ್ಲ.
ಬಿಜೆಪಿ 104 ಶಾಸಕರ ಜತೆ ಆಪರೇಷನ್ ಕಮಲ ಮಾಡಿ ಡಬಲ್ ಇಂಜಿನ್ ಸರ್ಕಾರ ಮಾಡಿದರು. ಈ ಸರ್ಕಾರದಿಂದ ನಿಮಗೆ ಯಾವುದಾದರೂ ಅನುಕೂಲವಾಯಿತಾ? ಹುಡುಗರಿಗೆ ಉದ್ಯೋಗ ಸಿಕ್ಕಿದೆಯಾ? ಬೆಲೆ ಏರಿಕೆ ನಿಯಂತ್ರಣ ಮಾಡಿದರಾ? ಕೊಟ್ಟ ಕುದುರೆ ಏರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಎಂದು ಅಲ್ಲಮ್ಮ ಪ್ರಭುಗಳು ಹೇಳಿದ್ದಾರೆ. ಅದೇ ರೀತಿ ಅಧಿಕಾರ ಇದ್ದಾಗ ಜನರಿಗಾಗಿ ಏನೂ ಮಾಡಲಾಗದವರು ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎಂದರೆ ಅದರಲ್ಲಿ ಅರ್ಥವಿರುವುದಿಲ್ಲ.
ರಾಜ್ಯದಲ್ಲಿ ಯಾರೂ ಕತ್ತಲಲ್ಲಿ ಇರಬಾರದು, ಬೆಲೆ ಏರಿಕೆಯಿಂದ ಪರಿಹಾರ ಪಡೆಯಲು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ನಾನು ಇಂಧನ ಸಚಿವನಾಗಿದ್ದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ಸಾರ್ವಜನಿಕ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮೇ 13ರಂದು ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುವುದು.
ಇಂತಹ ಯೋಜನೆಗಳನ್ನು ಬಿಜೆಪಿ, ಜೆಡಿಎಸ್ ಪಕ್ಷದವರು ನೀಡಲು ಸಾಧ್ಯವೇ? ಯಡಿಯೂರಪ್ಪ ಅವರು ಒಂದು ಸೈಕಲ್ ಹಾಗೂ ಸೀರೆ ಬಿಟ್ಟು ಬೇರೆ ಏನಾದರೂ ಕೊಟ್ಟಿದ್ದಾರಾ? ಈ ಐದು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಐದು ವರ್ಷಗಳಲ್ಲಿ 4-5 ಲಕ್ಷದಷ್ಟು ಆರ್ಥಿಕ ನೆರವು ಸಿಗಲಿದೆ.
ಕೋಮುಗಲಭೆ, 40% ಕಮಿಷನ್, ಕೋಮುಗಲಭೆ, ಹುದ್ದೆಗಳ ಮಾರಾಟ ಹಾಗೂ ರಾಜ್ಯ ಲೂಟಿ ಬಿಜೆಪಿಯ ಗ್ಯಾರಂಟಿಗಳಾಗಿವೆ. ಹೀಗಾಗಿ ಈ ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತರು, ದಲಿತರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು 75 ಸಾವಿರ ಜನರಿದ್ದು, ನೀವೆಲ್ಲರೂ ಸೇರಿ ನನ್ನ ಮಿತ್ರ ಮುರಳಿ ಮೋಹನ್ ಅವರನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸುತ್ತೇವೆ ಎಂಬ ಗ್ಯಾರಂಟಿಯನ್ನು ನೀವು ನಮಗೆ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಪಕ್ಷದಿಂದ ಜಿ.ಟಿ ವೆಂಕಟೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ