ಪ್ರಗತಿವಾಹಿನಿ ಸುದ್ದಿ; ಸಕಲೇಶಪುರ: ರಾಜ್ಯದ ಜನರ ಆಚಾರ ವಿಚಾರ, ಸಂಕಷ್ಟ, ನೋವುಗಳನ್ನು ಅರಿತು, ಅವುಗಳಿಗೆ ಸ್ಪಂದಿಸಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಾಸನ ಸಕಲೇಶಪುರದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕಳೆದ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಆಯ್ಕೆಯಾಗಿಲ್ಲ. ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ ಎತ್ತಿನಹೊಳೆ ಯೋಜನೆ ಮಾಡಿದೆವು. ಅನ್ನಭಾಗ್ಯ ಯೋಜನೆ ನೀಡಿದೆವು. ರೈತರಿಗೆ 7 ತಾಸು ವಿದ್ಯುತ್ ನೀಡಿದೆವು. ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡಿದೆವು. ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಿದೆವು. ಈಗ ಈ ಭಾಗದ ಜನರ ಸಮಸ್ಯೆಗಳೇನು, ಇವರಿಗೆ ಯಾವ ರೀತಿಯ ನೆರವಿನ ಅಗತ್ಯವಿದೆ ಎಂದು ತಿಳಿಯಲು ಬಂದಿದ್ದೇವೆ ಎಂದರು.
ಎಸ್.ಎಂ. ಕೃಷ್ಣಾ ಅವರ ಕಾಲದಲ್ಲಿ ಮೋಟಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಮಹಿಳೆಯರಿಗೆ ಶಕ್ತಿ ತುಂಬಲು ಸ್ತ್ರೀ ಶಕ್ತಿ ಸಂಘಗಳಿಗೆ ಉತ್ತೇಜನ ನೀಡಲಾಯಿತು. ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ನೀಡಲಾಯಿತು. ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದವರಿಗೆ ಜಮೀನು ನೀಡುವ ಕಾನೂನು ತಿದ್ದುಪಡಿ ಮಾಡಿದೆವು. ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ಜಮೀನು ನೀಡಿದೆವು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಪಿಂಚಣಿ ಯೋಜನೆ ಜಾರಿ ಮಾಡಿದ್ದೆವು.
ನಮಗೆ ಬಹುಮತ ಬಾರದೇ ಇದ್ದಾಗ, ಐದು ವರ್ಷ ಸರ್ಕಾರ ಮಾಡುವಂತೆ ದಳದವರಿಗೆ ಬೆಂಬಲ ನೀಡಿದೆವು. ಅವರ ಅಧಿಕಾರ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಆಯಿತಾ? ಇನ್ನು ಬಿಜೆಪಿ ಡಬಲ್ ಇಂಜಿನ್ ಸರ್ಕಾರದಿಂದ ಏನಾದರೂ ಅನುಕೂಲ ಆಗಿದೆಯಾ? ಇತ್ತೀಚೆಗೆ 3 ಕೋಟಿ ಅನುದಾನ ಬಂದಿದ್ದು, ನಂತರ ಅದು ಹಾಸನ ಹಾಗೂ ಹೊಳೆನರಸಿಪುರಕ್ಕೆ ಹೋಯಿತು ಎಂದು ನಮ್ಮ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ಆಸ್ತಿ ಹಾನಿ ಜತೆಗೆ 78 ಜನ ಸತ್ತಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಪರಿಹಾರ ನೀಡಿದೆ? ಕೋವಿಡ್ ಬಂದ ಸಂದರ್ಭದಲ್ಲಿ ಶಾಸಕರು, ಸರ್ಕಾರದಿಂದ ಏನಾದರೂ ಸಹಾಯ ಸಿಕ್ಕಿತಾ? ಬೀದಿ ವ್ಯಾಪಾರಿಗಳಿಗೆ ಹಣ ಕೊಟ್ಟರಾ? ಆಸ್ಪತ್ರೆ ಖರ್ಚು, ಸತ್ತವರಿಗೆ ಪರಿಹಾರ ಕೊಟ್ಟರಾ? ಕೋವಿಡ್ ಸಮಯದಲ್ಲಿ ಜನ ನರಳುತ್ತಿರುವಾಗ ರೈತರ ಬೆಳೆಗೆ ಬೆಲೆ ನಿಗದಿ ಮಾಡಲು ಆಗಲಿಲ್ಲ.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಮಂದಿ ಸತ್ತಾಗ ಒಬ್ಬ ಮಂತ್ರಿ, ಅಧಿಕಾರಿ ಹೋಗಿ ಭೇಟಿ ಮಾಡಲಿಲ್ಲ. ನಾವು ಭೇಟಿ, ಪರಿಶೀಲನೆ ಮಾಡಿ ಅವರಿಗೆ ಪಕ್ಷದ ವತಿಯಿಂದ 1 ಲಕ್ಷ ಪರಿಹಾರ ನೀಡಿ ಸಾಂತ್ವಾನ ಹೇಳಿದೆವು. ನಂತರ ನಮ್ಮ ಸರ್ಕಾರ ಬಂದಾಗ ನಿಮಗೆ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆವು. ಈ ಸರ್ಕಾರಕ್ಕೆ ಕಿವಿ, ಕಣ್ಣು, ಹೃದಯವಿಲ್ಲ. ಈ ಸರ್ಕಾರ ನಿಮಗೆ ಬೇಕಾ?
ಬಿಜೆಪಿಯವರು ನಿಮ್ಮ ಆದಾಯ ಡಬಲ್ ಮಾಡುತ್ತೇವೆ, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ಅಚ್ಛೇದಿನ ತರುತ್ತೇವೆ ಎಂದರು. ಯಾವುದಾದರೂ ಭರವಸೆ ಈಡೇರಿಸಿದ್ದಾರಾ? ಇಲ್ಲ. ಆದರೂ ಮತ್ತೆ ಮತ ಯಾಕೆ ಕೇಳುತ್ತಿದ್ದಾರೆ? ಈ ಭಾಗದ ಶಾಸಕ ಕುಮಾರಸ್ವಾಮಿ ಅವರು ಹಲವು ಬಾರಿ ಗೆದ್ದಿದ್ದರೂ ನಿಮಗೆ ರಕ್ಷಣೆ ನೀಡಲು ಆಗದಿದ್ದರೆ ಹೇಗೆ. ಸ್ವತಃ ಅವರೇ ನನಗೆ ಜನರ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ಹೇಳಿದ್ದಾರೆ. ಅವರಿಗೆ ನೀವು ವಿಶ್ರಾಂತಿ ನೀಡಬೇಕು. ಅವರಿಗೆ ರೇವಣ್ಣ ಹಾಗೂ ಬಿಜೆಪಿ ಮುಂದೆ ಹೋರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಎಂದು ನಾವು ನಿಮ್ಮ ಮುಂದೆ ಬಂದಿದ್ದೇವೆ.
ನಾವು ಮಾಡಿದ ಕಾನೂನು ಅನುಷ್ಠಾನಕ್ಕೆ ತರು ಇವರಿಗೆ ಆಗಿಲ್ಲ. ನೀವು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಸರ್ಕಾರ ತಂದರೆ 94ಸಿ ಜಾರಿ ಆಗಲಿದೆ ಹಾಗೂ ಅರಣ್ಯ ಪ್ರದೇಶದಲ್ಲಿ ಆಗುತ್ತಿರುವ ತೊಂದರೆಯನ್ನು ತಪ್ಪಿಸುತ್ತೇವೆ. ಹೇಮಾವತಿ ಮುಳುಗಡೆ ಪ್ರದೇಶದಲ್ಲಿ ನಿಮಗೆ ಸಹಾಯವಾಗಬೇಕಿದೆ. ಎತ್ತಿನಹೊಳೆಯಲ್ಲಿ ಪರಿಹಾರ ಸರಿಯಾಗಿ ಆಗಿಲ್ಲ ಎಂಬ ಅರ್ಜಿಯನ್ನು ಕೊಟ್ಟಿದ್ದಾರೆ.
ಈ ಯಾತ್ರೆ ನಿಮಗೆ ಬದಲಾವಣೆ ತರುವ ಅವಕಾಶ ಕಲ್ಪಿಸಿದೆ. ನೀವು ಹೋರಾಟ ತ್ಯಾಗ ಮಾಡಿ ನಮಗೆ ಶಕ್ತಿ ನೀಡಬಹುದು. ಆಮೂಲಕ ಈ ಸರ್ಕಾರವನ್ನು ಕಿತ್ತುಹಾಕಬಹುದು, ನಿಮ್ಮ ಕ್ಷೇತ್ರದಲ್ಲಿ ಬದಲಾವಣೆ ತರಬಹುದು. ಈ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿದೆ. ಮೋದಿ ಅವರು ರಾಜ್ಯಕ್ಕೆ ಬಂದು ಯಡಿಯೂರಪ್ಪ ಅವರಿಗೆ ನಮ್ರತೆಯಿಂದ ನಮಸ್ಕರಿಸುತ್ತಿದ್ದಾರೆ. ಆದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ? ಇನ್ನು ಅಮಿತ್ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಡಬಲ್ ಇಂಜಿನ್ ಸರ್ಕಾರ ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದೆ. ವಿಧಾನಸೌಧದಿಂದ ಯಾವುದೇ ಸರ್ಕಾರಿ ಕಚೇರಿಯವರೆಗೆ ಪ್ರತಿಯೊಂದು ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸವಾಗಿಲ್ಲ.
ಸಚಿವ ಈಶ್ವರಪ್ಪ ಅವರಿಗೆ 40% ಲಂಚ ನೀಡಲಾಗದೇ ಬಿಜೆಪಿ ಕಾರ್ಯಕರ್ತ ನೇಣಿಗೆ ಶರಣಾದ. ಅಮಿತ್ ಶಾ ಅವರು ಹೇಳಿದಂತೆ ಈ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡಲು ಬಿಜೆಪಿ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
*ದಳಪತಿಗಳ ಕೋಟೆಯಲ್ಲಿ ಅಬ್ಬರಿಸಿದ ಡಿ.ಕೆ.ಸುರೇಶ್; ಮಹಾಭಾರತದ ಕಥೆ ಮೂಲಕ ಕಾಂಗ್ರೆಸ್ ಗೆಲುವಿಗೆ ಕರೆ ಕೊಟ್ಟ ಸಂಸದ*
https://pragati.taskdun.com/d-k-sureshholenarasipuraprajadhwani/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ