*ಇಂತಹ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಯಾರು?; HDK ವಿರುದ್ಧ ಕಿಡಿ ಕಾರಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಟಿ ನರಸೀಪುರ: ಬನ್ನೂರಿನ ಪ್ರತಿ ಹೆಜ್ಜೆಗೂ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನನಗೆ ಸ್ಫೂರ್ತಿ ತುಂಬಿರುವ ನಿಮ್ಮ ಸೇವೆಗೆ ನಾನು ನನ್ನ ಜೀವ ಕೊಡುತ್ತೇನೆ. ನಿಮಗಾಗಿ ಹೋರಾಟ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಟಿ ನರಸೀಪುರದ ಬನ್ನೂರಿನ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಾರೆ ಎಂದು ನಾವು ಅವರನ್ನು ಸ್ಮರಿಸುತ್ತೇವೆ. ಪ್ರಾಣ ಒತ್ತೆ ಇಟ್ಟಾದರೂ ಹೋರಾಟ ಮಾಡು. ನೀನು ನಾಯಕನಾಗುತ್ತೀಯಾ, ನೀನು ಸತ್ತರೆ ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಅವರ ಈ ಮಾತಿನ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ ಎಂದರು.
ಈ ಪ್ರಜಾಧ್ವನಿ ಯಾತ್ರೆ ನನ್ನ ಯಾತ್ರೆ ಅಲ್ಲ. ಇದು ನಿಮ್ಮ ನೋವು, ಸಂಕಟ, ಬದುಕಿನ ಪ್ರತಿಧ್ವನಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಅಧಿಕಾರ ಇದ್ದಾಗ ಏನು ಮಾಡುತ್ತೇವೆ ಎಂಬುದು ಮುಖ್ಯ. ಜನರ ಸೇವೆ ಹೇಗೆ ಮಾಡುತ್ತೇವೆ ಎಂಬುದು ಮುಖ್ಯ. ನಮಗೆ ಅಧಿಕಾರ ಎಂದಿಗೂ ಶಾಶ್ವತವಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸಾಧನೆಯ ಮೇಲೆ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುತ್ತಾರೆ.
ದೇಶದಲ್ಲಿ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಂಬೇಡ್ಕರ್, ಮನಮೋಹನ್ ಸಿಂಗ್, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ತಮ್ಮ ಯೋಜನೆಗಳ ಮೂಲಕ ಸ್ಮರಿಸುತ್ತಾರೆ. ನೆಹರೂ ಅವರು ಪಂಚವಾರ್ಷಿಕ ಯೋಜನೆ ಮೂಲಕ ಭಾರತವನ್ನು ಅಭಿವೃದ್ಧಿ ಮಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಾರೆ. ಸರ್ವರಿಗೂ ಸಮಬಾಳು, ಸಮಪಾಲು ನೀಡಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದಕ್ಕೆ ಸ್ಮರಿಸುತ್ತಾರೆ. ಇಂದಿರಾ ಗಾಂಧಿ ಅವರನ್ನು ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ, ಬ್ಯಾಂಕ್ ರಾಷ್ಟ್ರೀಕರಣ, ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ಸ್ಮರಿಸುತ್ತಾರೆ. ಲಾಲ್ ಬಹದ್ದೂ ಶಾಸ್ತ್ರಿ ಅವರನ್ನು ಜೈ ಜವಾನ್ ಜೈ ಕಿಸಾನ್ ಎಂಬ ಶಕ್ತಿ ತುಂಬಿದ್ದಕ್ಕೆ ಸ್ಮರಿಸುತ್ತಾರೆ. ರಾಜೀವ್ ಗಾಂಧಿ ಅವರು ಟೆಲಿಕಾಂ ಕ್ರಾಂತಿ, ಕಂಪ್ಯೂಟರ್ ಕ್ರಾಂತಿ, ಮತದಾನದ ಹಕ್ಕು ನೀಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಕ್ಕೆ ಸ್ಮರಿಸುತ್ತಾರೆ. ಸೋನಿಯಾ ಗಾಂಧಿ ಅವರು ಎರಡು ಬಾರಿ ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿದರು. ಮನಮೋಹನ್ ಸಿಂಗ್ ಅವರನ್ನು ಆಹಾರ ಭದ್ರತೆ ಕಾಯ್ದೆ, ಶಿಕ್ಷಣ ಹಕ್ಕು, ಉದ್ಯೋಗ ಖಾತ್ರಿ ಯೋಜನೆ ಕೊಟ್ಟಿದ್ದಕ್ಕೆ ಸ್ಮರಿಸುತ್ತೇವೆ. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಮಕ್ಕಳಿಗೆ ಬಿಸಿಯೂಟ, ಸ್ತ್ರೀ ಶಕ್ತಿ ಸಂಘ, ದೇವರಾಜ ಅರಸು ಅವರು ಉಳುವವನಿಗೆ ಭೂಮಿ ಕೊಟ್ಟರು ಎಂದರು.
ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿ ಸರ್ಕಾರ ಇಂತಹ ಯಾವುದಾದರು ಒಂದು ಕಾರ್ಯಕ್ರಮ ಕೊಟ್ಟಿದೆಯಾ ಎಂದು ಕೇಳಿ. ಬಿಜೆಪಿ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿ 550 ಅನ್ನು ಈಡೇರಿಸಲಿಲ್ಲ. ಕಳೆದ ಬಜೆಟ್ ನಲ್ಲಿ ಘೋಷಿಸಿದ ಅನುದಾನದಲ್ಲಿ ಶೇ.50 ರಷ್ಟು ಖರ್ಚು ಮಾಡಲಿಲ್ಲ. ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದರು, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು, ಈ ಭರವಸೆಗಳನ್ನು ಈಡೇರಿಸಿದ್ದಾರಾ? ಅವರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಸಮಯದಲ್ಲಿ ಈ ಸರ್ಕಾರ ನಿಮಗೆ ನೆರವು ನೀಡಿತಾ? ಪ್ರಧಾನಿಗಳು ದೀಪ ಹಚ್ಚಿ, ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆಯಿರಿ. ಮಹಭಾರತ 18 ದಿನದಲ್ಲಿ ಮುಗಿಯಿತು, 21 ದಿನದಲ್ಲಿ ಕೋವಿಡ್ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದ್ದರು. 2 ವರ್ಷ ನರಳಿದರೂ ಜನರನ್ನು ಅವರು ರಕ್ಷಿಸಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಆರೋಗ್ಯ ಸಚಿವ ಕೇವಲ 3 ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದ. ನಾವು ನಾಯಕರೆಲ್ಲ ಹೋಗಿ ಪರಿಶೀಲನೆ ಮಾಡಿದೆವು. ಜಿಲ್ಲಾ ಮಂತ್ರಿ ಸುರೇಶ್ ಕುಮಾರ್, ಆರೋಗ್ಯ ಮಂತ್ರಿ ಸುಧಾಕರ್ ಒಂದು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಇವರು ಮನುಷ್ಯರಾ?
ಕೇಂದ್ರ ಸಚಿವ ಸುರೇಶ್ ಅಂಗಡಿ ಕೋವಿಡ್ ಗೆ ಸತ್ತರು. ಅವರ ಮೃತದೇಹವನ್ನು ತವರಿಗೆ ತರಲು ಇವರಿಗೆ ಆಗಲಿಲ್ಲ. ದೆಹಲಿಯಲ್ಲಿ ಜೆಸಿಬಿಯಲ್ಲಿ ನೂಕಿ ಅಂತ್ಯಸಂಸ್ಕಾರ ಮಾಡಿದರು. ಇದು ಬಿಜೆಪಿ ಸಂಸ್ಕೃತಿ. ಈ ರಾಜ್ಯದಲ್ಲಿರುವ ಸರ್ಕಾರ ಕಳಂಕಿತ ಸರ್ಕಾರ. ಉತ್ತಮ ಆಡಳಿತ ನೀಡಿದ್ದರೂ ಜನ ನಮ್ಮನ್ನು ಬೆಂಬಲಿಸಲಿಲ್ಲ. ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿದೆವು. ನಾನು 40 ವರ್ಷ ಅವರ ಕುಟುಂಬದ ವಿರುದ್ಧ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದರೂ, ಈ ರಾಜ್ಯಕ್ಕಾಗಿ ಮೈತ್ರಿಸರ್ಕಾರದಲ್ಲಿ ಅವರಿಗೆ ಬೆಂಬಲ ನೀಡಿ ಕೆಲಸ ಮಾಡಿದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಮಗೆ ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಕೆಲಸ ಮಾಡಿದೆವು. ಕುಮಾರಸ್ವಾಮಿ ಅವರು ಸರ್ಕಾರ ಉಳಿಸಿಕೊಳ್ಳಲಿಲ್ಲ. ಇಂತಹ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಯಾರು? ಕುಮಾರಣ್ಣ ಹಾಗೂ ದೇವೇಗೌಡರನ್ನು ಟೀಕಿಸಲು ಇಲ್ಲಿಗೆ ಬಂದಿಲ್ಲ ಎಂದು ಗುಡುಗಿದರು. ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯನ್ನಾಗಿ ಮಾಡಿದೆ. ನಾನು ನಿಮ್ಮ ಮಗನಾಗಿ ಸೇವೆ ಮಾಡಲು ಸಿದ್ಧನಾಗಿದ್ದೇನೆ. ನನ್ನ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಕಷ್ಟಕಾಲದಲ್ಲಿ ನನಗೆ ಪಕ್ಷದ ಜವಾಬ್ದಾರಿ ಸಿಕ್ಕಿತು. ಎಲ್ಲ ನಾಯಕರು ಸೇರಿ ನನಗೆ ಜವಾಬ್ದಾರಿ ಕೊಟ್ಟಿದ್ದು, ನನ್ನ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯುತ್ತಿದೆ. ನಿಮ್ಮ ಬದುಕು ಹಸನಾಗಬೇಕು. ನಿಮ್ಮ ನೋವು, ಕಷ್ಟವನ್ನು ನಾವು ಆಲಿಸುತ್ತೇವೆ. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ. ಇನ್ನು ಮುಂದೆ 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ, ಜೂನ್ ತಿಂಗಳಿಂದ ಈ ಯೋಜನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ನಾವು ಯೋಜನೆ ಜಾರಿ ಮಾಡದಿದ್ದರೆ, ನುಡಿದಂತೆ ನಡೆಯದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ಅವರು ಮತ್ತೆ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ. ಸಿದ್ದರಾಮಯ್ಯ ಅವರು ಬಸವ ಜಯಂತಿ ದಿನ ಅಧಿಕಾರ ಸ್ವೀಕಾರ ಮಾಡಿದರು. ಬಸವಣ್ಣ ನುಡಿದಂತೆ ನಡೆಯಬೇಕು ಎಂದು ಹೇಳಿದ್ದಾರೆ. ನಾವು ಉಚಿತವಾಗಿ 5 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿ ಅದನ್ನು ಒಂದೇ ದಿನದಲ್ಲಿ ಜಾರಿ ಮಾಡಿದೆವು. ನಂತರ ಅದನನ್ನು 7 ಕೆ.ಜಿಗೆ ಹೆಚ್ಚಿಸಿದೆವು. ಮುಂದೆ ಸರ್ಕಾರ ಬಂದಾಗ 10 ಕೆ.ಜಿ ನೀಡುತ್ತೇವೆ.
ಬಿಜೆಪಿಯವರು ಈ ಯೋಜನೆಗೆ ಹಣ ಎಲ್ಲಿಂದ ತರುತ್ತಾರೆ ಎಂದು ಕೇಳುತ್ತಿದ್ದಾರೆ. ಬಿಜೆಪಿಯವರು 40% ಕಮಿಷನ್ ಮೂಲಕ ಮಾಡುತ್ತಿರುವ ಲೂಟಿ ನಿಲ್ಲಿಸಿದರೆ ಈ ಎಲ್ಲ ಯೋಜನೆಗಳಿಗೂ ಹಣ ಸಿಗುತ್ತದೆ. ಈ ಸರ್ಕಾರ 100 ಕೋಟಿ ಕಾಮಗಾರಿಯ ಮೊತ್ತವನ್ನು 200 ಕೋಟಿಗೆ ಮಾಡುತ್ತಿದ್ದಾರೆ. ಈ ಸರ್ಕಾರ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ದೂರು ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ್ ಈಶ್ವರಪ್ಪನಿಗೆ ಲಂಚ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡ. ಒಬ್ಬ ಸಚಿವ ಲಂಚಕ್ಕೆ, ಮತ್ತೊಬ್ಬ ಮಂಚಕ್ಕೆ ಅಧಿಕಾರ ಕಳೆದುಕೊಂಡ. ಈ ಸರ್ಕಾರ ಬೇಕಾ? ಇದಕ್ಕಾಗಿ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು.
ಇಲ್ಲಿ ಯಾರೇ ನಿಂತರು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಅಭ್ಯರ್ಥಿ. ನಮ್ಮನ್ನು ವಿಧಾನಸೌಧದಲ್ಲಿ ಕೂರಿಸಲು ಇಲ್ಲಿರುವ ಒಬ್ಬೊಬ್ಬರು ನಾಲ್ಕು ಮತಗಳನ್ನು ಹಾಕಿಸಿ ನಿಮ್ಮ ಅಭಿಮಾನ ತೋರಿಸಬೇಕು. ನೀವು ಮತ ಹಾಕಿದಾಗ ಬರುವ ಸದ್ದು ಮೋದಿ ಅವರಿಗೆ ಕೇಳಿಸಬೇಕು ಎಂದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಹೀಗಾಗಿ ಕಾಂಗ್ರೆಸ್ ಪಕ್ಷದ ಹಸ್ತಕ್ಕೆ ಮತ ಹಾಕಿ ಶಕ್ತಿ ತುಂಬಬೇಕು. ಬಿಜೆಪಿ ಭ್ರಷ್ಟ ಸರ್ಕಾರ ತೆಗೆಯಬೇಕು. ನಾನು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ರಕ್ಷಣೆ ನೀಡಲಿಲ್ವೇ? ನಾನು ಅವರಿಗೆ ದ್ರೋಹ ಬಗೆದಿದ್ದೀನಾ? ನನಗೂ ಒಂದು ಅವಕಾಶ ನೀಡಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಜನರಿಗೆಗಾ ಭೂಮಿ, ನಿವೇಶನ, ಮನೆ, ಉದ್ಯೋಗ, ಆಹಾರ, ಆರೋಗ್ಯ ಎಲ್ಲವನ್ನು ನೀಡಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
*ಬೈಕ್ ಸವಾರರಿಬ್ಬರ ಗುಂಡಿಟ್ಟು ಹತ್ಯೆ*
https://pragati.taskdun.com/shoot-deadtwo-peoplebike-riderbalehonnuru/