ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಂಬಿಕೆಗೆ ಮತ್ತೊಂದು ಸಮಾಜ ಎಂದರೆ ತಿಗಳರ ಸಮಾಜ, ಸೂರ್ಯ ಹಾಗೂ ಅಗ್ನಿಯಿಂದ ಉದ್ಭವಿಸಿದ ಸಮಾಜ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತಿಗಳರ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಸಮಾಜದ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಿ ಇಲ್ಲಿಗೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಕೂಡ ಅಷ್ಟೇ ಮುಖ್ಯ. ಈ ದೇಶದಲ್ಲಿ ಹಿಂದೂ, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು ಸೇರಿದಂತೆ ಎಲ್ಲಾ ಧರ್ಮದವರು ತಮ್ಮ ಆಚರಣೆ ನಂಬಿಕೊಂಡು ಬಂದಿದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂದರು.
ದ್ರೌಪದಿ ಮತ್ತು ಧರ್ಮರಾಯಸ್ವಾಮಿ ಇವರ ಆರಾಧ್ಯ ದೈವ. ನಮ್ಮ ಹಿಂದುತ್ವ ಉಳಿದುಕೊಂಡಿರುವುದೇ ಧರ್ಮರಾಯನ ಧರ್ಮತ್ವದಿಂದ. ನಾನು ಸದನದಲ್ಲಿ ಭಾಷಣ ಮಾಡುತ್ತಾ ಒಬ್ಬ ಮನುಷ್ಯ ಯಶಸ್ಸು ಕಾಣಬೇಕಾದರೆ, ಧರ್ಮರಾಯನ ಧರ್ಮತ್ವ ಇರಬೇಕು, ದಾನಶೂರ ಕರ್ಣದ ಧಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣ ತಂತ್ರ ಇರಬೇಕು ಎಂದು ಹೇಳಿದ್ದೆ.
ನಾವು ಮಾತು ಕೊಡುವುದು ಮುಖ್ಯವಲ್ಲ. ಕೊಟ್ಟ ಮಾತು ಉಳಿಸಿಕೊಂಡು ಹೋಗುವುದು ಮುಖ್ಯ. ತಿಗಳರ ಸಮಾಜ ಪಾಂಡವರ ವಂಶಸ್ಥರು ಎಂದು ಹೆಸರು ಬಂದಿದೆ. ಇದು ನಮ್ಮ ಧರ್ಮ ಹಾಗೂ ಸಂಸ್ಕೃತಿಯಲ್ಲಿ ಈ ಸಮಾಜಕ್ಕೆ ಸಿಕ್ಕಿರುವ ಗುರುತು. ಈ ಭಕ್ತ ಹಾಗೂ ಭಗವಂತನ ನಡುವೆ ಸಂಬಂಧ ನಡೆಯುವ ಸ್ಥಳ ದೇವಾಲಯ. ನಮಗೂ ಹಾಗೂ ಭಗವಂತನ ಮೂರ್ತಿಯ ನಡುವೆ ಸಂಪರ್ಕವಾಗುವುದು ಪುಷ್ಪ ಹಾಗೂ ತುಳಸಿಯಿಂದ. ಇದನ್ನು ಬೆಳೆಯುವವರು ಈ ಸಮಾಜದವರು ಎಂದರು.
ನಾನು ಈ ಸಮಾಜದ ಜತೆ ಬೆಳೆದವನು. ಡಾ. ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ, ಪೊಲೀಸ್ ಅಧಿಕಾರಿಗಳು ದಟ್ಟ ಕಾಡಿನಲ್ಲಿ ಹೋಗಲು ಹಿಂಜರಿಯುತ್ತಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ನಮ್ಮ ತಾಲೂಕಿನಲ್ಲಿ ಶಿಕಾರಿ ಮಾಡುತ್ತಿದ್ದ ತಿಗಳ ಸಮುದಾಯದ ಸ್ನೇಹಿತರನ್ನು ಗುರುತಿನ ಚೀಟಿ ಕೊಟ್ಟು ಕಾರ್ಯಾಚರಣೆಗೆ ಕಳುಹಿಸಿದ್ದರು. ಈ ಸಮುದಾಯದವರು ಧೈರ್ಯವಂತರು ಹಾಗೂ ನಂಬಿಕಸ್ಥರು ಎಂಬುದಕ್ಕೆ ಇದು ಸಾಕ್ಷಿ.
ನೀವು ಎಂದಿಗೂ ಹಿಂದುಳಿದ ಸಮಾಜ ಎಂದು ಭಾವಿಸಬೇಡಿ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಸಿದ್ದಗಂಗಯ್ಯ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಯಿತು. ದೇವರಾಜ ಅರಸು ಅವರ ಕಾಲದಲ್ಲಿ ಈ ಸಮಾಜದವರಿಗ ಭೂಮಿ ನೀಡಲಾಯಿತು. ನಮ್ಮ ಮಾಜಿ ಮೇಯರ್ ಹಾಗೂ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರು ಕೃಷ್ಣ ಅವರ ಕಾಲದಲ್ಲೇ ಎಂಎಲ್ ಸಿ ಆಗಬೇಕಿತ್ತು. ಅವರ ಹೆಸರು ಅಂತಿಮವಾದ ನಂತರ ಅಧಿಕಾರಿಯೊಬ್ಬರು ಅವರ ಬಗ್ಗೆ ಕೃಷ್ಣ ಅವರಿಗೆ ಸುಳ್ಳು ಮಾಹಿತಿ ನೀಡಿದ ಕಾರಣ ಆಗ ಅವರಿಗೆ ಪರಿಷತ್ ಸ್ಥಾನ ತಪ್ಪಿತ್ತು. ಆಗ ನಾನು ಕೃಷ್ಣ ಅವರ ಜತೆ ಜಗಳವಾಡಿದ್ದೆ. ನಂತರ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿದ್ದು, ಅವರು ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಇನ್ನು ನಮ್ಮ ಮಾಜಿ ಮೇಯರ್ ಸಿ.ಎಂ ನಾಗರಾಜ್ ಅವರಿಗೆ ರಾಜಾಜಿನಗರ ಟಿಕೆಟ್ ಅಂತಿಮವಾಗಿತ್ತು. ಇಲ್ಲಿ ನಾವು ಜಾತಿ ಆಧಾರದ ಮೇಲೆ ನೋಡಬಾರದು ಕ್ರಿಯಾಶೀಲ ನಾಯಕರನ್ನು ಹಾಕಬೇಕು ಎಂದು ನರೇಂದ್ರ ಬಾಬು ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಈ ಚರಿತ್ರೆ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನರೇಂದ್ರ ಬಾಬು ಅವರು ನನಗೆ ಹೇಳಿಯೇ ಪಕ್ಷದಿಂದ ದೂರ ಹೋಗಿದ್ದಾರೆ. ಆ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ. ಆದರೆ ಈ ಸಮಾಜವನ್ನು ಬಿಜೆಪಿಯಾಗಲಿ, ದಳದವರಾಗಲಿ ಗುರುತಿಸಿದ್ದಾರಾ? ಇಲ್ಲ ಎಂದರು.
ಈ ಸಮಾಜದವರಿಗೆ ಏನಾದರೂ ಮಾಡಬೇಕು ಎಂದು ನಮ್ಮ ನಾಯಕರೆಲ್ಲರೂ ಹೇಳುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲರ ಜತೆ ಮಾತನಾಡಿ ನಮ್ಮ ಪ್ರಣಾಳಿಕೆಯಲ್ಲಿ ತಿಗಳರ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವ ಕಾರ್ಯಕ್ರಮವನ್ನು ಸೇರಿಸಲಾಗುವುದು.
ಬೆಂಗಳೂರು ಕರಗ ನಮಗೆ ಬಹಳ ಮುಖ್ಯ. ಈ ಹಬ್ಬಕ್ಕೆ ಹಣ ನೀಡಲು ಬಹಳ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಕೇಳಿದೆ. ನೀವು ಈ ವಿಚಾರವಾಗಿ ಒಂದು ಅರ್ಜಿ ತಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅವರಿಗೆ ನೀಡಿ. ನಮ್ಮ ಪ್ರಣಾಳಿಕೆಯಲ್ಲಿ ಕರಗವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಬಿಬಿಎಂಪಿ ಅಥವಾ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಹಣ ನೀಡುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ಶಿವಕುಮಾರ ಭರವಸೆ ನೀಡಿದರು.
ನಮ್ಮ ಪಕ್ಷ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ಹಾಗೂ ಬಡ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ಅದೇರೀತಿ ತಿಗಳರ ಸಮುದಾಯದ ಅಭಿವೃದ್ಧಿ ನಿಗಮ ಖಚಿತ ಎಂದು ಹೇಳಲು ಬಯಸುತ್ತೇನೆ.
ಹೋರಾಟ ಮಾಡುವವನು ಗೆದ್ದೇ ಗೆಲ್ಲುತ್ತಾನೆ. ಆತ ಸೋಲು ಹಾಗೂ ಸಾವಿಗೆ ಹೆದರುವುದಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದು, ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ನಾವು ಸಾಗುತ್ತಿದ್ದೇವೆ. ಇಂದು ಬಿಜೆಪಿ ಹಾಗೂ ಜನತಾ ದಳ ತೊರೆದು ಅನೇಕ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೀರಿ. ನಿಮ್ಮೆಲ್ಲರಿಗೂ ನಾನು ಸ್ವಾಗತಿಸುತ್ತೇನೆ.
ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಬೆಂಗಳೂರಿನಲ್ಲಿ 20 ಕ್ಷೇತ್ರ, ರಾಜ್ಯದಲ್ಲಿ 140 ಕ್ಷೇತ್ರಗಳಲ್ಲಿ ಗೆಲ್ಲುವ ವರದಿ ಬಂದಿವೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಒಂದು ಜನಪರ ಯೋಜನೆ ಮಾಡಲಿಲ್ಲ. ಈ ಸರ್ಕಾರಕ್ಕೆ 40% ಸರ್ಕಾರ ಎಂದು ಹೆಸರು ಕೊಟ್ಟವರು ಯಾರು? ಬೊಮ್ಮಾಯಿ ಅವರು ಇದಕ್ಕೆ ಸಾಕ್ಷಿ ಕೇಳುತ್ತಿದ್ದರು. ಮಾಡಾಳು ವಿರುಪಾಕ್ಷಪ್ಪ ಸಾಕ್ಷಿ ಕೊಟ್ಟಿದ್ದಾರೆ. ನೀವೆಲ್ಲರೂ ಬೆಂಗಳೂರು ಬೆಳೆಸಿ ಒಂದು ಕೀರ್ತಿ ತಂದಿದ್ದೀರಿ. ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಹಾಗೂ ಬೆಂಗಳೂರಿಗೆ ಅಪಕೀರ್ತಿ ತಂದಿದ್ದಾರೆ ಎಂದು ಆರೋಪಿಸಿದರು.
ಮೂಲಭೂತವಾಗಿ ನೀವು ರೈತರು. ರೈತ ನೀಡುವ ಅನ್ನ, ಗುರು ಕಲಿಸುವ ಅಕ್ಷರ, ತಾಯಿ ನೀಡುವ ಆಶೀರ್ವಾದ, ಮತದಾರ ತೋರುವ ಪ್ರೀತಿ ನಾವು ಮರೆಯಲು ಸಾಧ್ಯವಿಲ್ಲ. ನಮಗೆ ಈ ಸಮಾಜದ ಮೇಲೆ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷ ಸದಾ ನಿಮ್ಮ ಜತೆ ಇರಲಿದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಾ ಬಂದಿದ್ದೇವೆ. ನಿಮ್ಮ ಸಮಾಜದವರೆಲ್ಲಾ ಸೇರಿ ಇಂತಹ ಕ್ಷೇತ್ರದಲ್ಲಿ ಇವರನ್ನು ನಿಲ್ಲಿಸಿದರೆ ಗೆಲ್ಲಿಸುತ್ತೀರಿ ಎಂಬ ಖಚಿತತೆ ಕೊಡಿ ನಾನು ಬೆಂಬಲ ನೀಡುತ್ತೇನೆ. ನರೇಂದ್ರ ಬಾಬುವಿಗೆ ನಾನು ಆಹ್ವಾನ ನೀಡಿದೆ ಆದರೆ ಬಿಜೆಪಿಯಲ್ಲಿರುವುದಾಗಿ ಹೇಳಿದರು. ಅವರು ಅಲ್ಲೇ ಇರಲಿ. ನಿಮಗೆ ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಶಕ್ತಿ ತುಂಬುವುದು ಕಾಂಗ್ರೆಸ್ ನಂಬಿಕೆ.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದೇ ರೀತಿ ಜನರ ಕಲ್ಯಾಣಕ್ಕೆ ಉಳುವವನಿಗೆ ಭೂಮಿಯ ಒಡೆಯ ಎಂದು ಭೂಮಿ ಕೊಟ್ಟಿದ್ದು, ಪಿಂಚಣಿ, ನರೇಗಾ, ಅನ್ನಭಾಗ್ಯ, ಕ್ಷೀರ ಭಾಗ್ಯ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದಳದವರು ಅಥವಾ ಬಿಜೆಪಿಯವರು ನೀವು ನೆನಪು ಮಾಡಿಕೊಳ್ಳುವಂತಹ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ? ಬಿಜೆಪಿ ನುಡಿದಂತೆ ನಡೆಯಲಿಲ್ಲ. ಅವರದ್ದು ಕೇವಲ ಖಾಲಿ ಬುರುಡೆ ಮಾತುಗಳು. ನೀವು 2023ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ನಿಮ್ಮ ಋಣ ತೀರಿಸಲು ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ