ಪ್ರಗತಿವಾಹಿನಿ ಸುದ್ದಿ; ಉಡುಪಿ: ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಆಹ್ವಾನ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮದ್ದೂರು ಕ್ಷೇತ್ರದಿಂದ ಆಹ್ವಾನ ಬಂದಿದ್ದು ನಿಜ. ಮದ್ದೂರಿನಿಂದ ಸ್ಪರ್ಧಿಸುವಂತೆ ಜನ ಕೇಳಿದ್ದಾರೆ. ಮಂಡ್ಯ, ಮದ್ದೂರು ಕಾರ್ಯಕರ್ತರು ನನ್ನೊಂದಿಗೆ ಮಾತನಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ನಾನು ಅವಕಾಶ ನೀಡಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನೆರೆ ಬಂದು ಜನರು ಸಂಕಷ್ಟಕ್ಕೀಡಾದಾಗ ಪ್ರಧಾನಿ ಮೋದಿ ಒಂದು ದಿನ ರಾಜ್ಯಕ್ಕೆ ಬರಲಿಲ್ಲ. ರಾಜ್ಯದಲ್ಲಿ 25 ಸಂಸದರಿದ್ದಾರೆ. ಅವರನ್ನು ಕರೆಸಿ ಒಂದೇ ಒಂದು ದಿನ ಸಭೆ ಮಾಡಿ ಜನರ ಕಷ್ಟ ಆಲಿಸಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿ ಪದೇ ಪದೇ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಮುಖ ಕರ್ನಾಟಕಕ್ಕೆ ಯಾಕೆ ಬೇಕು? ಇಲ್ಲಿ ಆಡಳಿತ ನಡೆಸಿದವರ ಮುಖ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂಬುದು ಪ್ರಧಾನಿ ಮೋದಿಯವರಿಗೂ ಖಾತ್ರಿಯಾಗಿದೆ. ಎಲ್ಲಾ ವರದಿಗಳು ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಹೇಳುತ್ತಿವೆ. ಕರ್ನಾಟಕದಲ್ಲಿ 65ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿಗೆ ಬೀಳಲ್ಲ. ಈ ಬಗ್ಗೆ ನಮ್ಮ ಪಕ್ಷದ ಆಂತರಿಕ ವರದಿಗಳು ತಿಳಿಸಿವೆ.
ಬಿಜೆಪಿ ನಾಯಕರು ಧರ್ಮ ಹಾಗೂ ಭಾವನೆಗಳನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ ನಾವು ಜನರ ಬದುಕು, ಭವಿಷ್ಯದ ಬಗ್ಗೆ ಯೋಚಿಸುತ್ತ ಜನರ ಹೊಟ್ಟೆಪಾಡಿನ ಬಗ್ಗೆ ತಿಳಿಸುತ್ತಿದ್ದೇವೆ. ನಮ್ಮದು ಹೊಟ್ಟೆಪಾಡಿನ ರಾಜಕಾರಣ, ಅವರದ್ದು ಧ್ವೇಷದ ರಾಜಕಾರಣ ಎಂದು ಗುಡುಗಿದರು.
*ಕೊಟ್ಟ ಮಾತು ತಪ್ಪಿದರೆ ರಾಜಕೀಯ ನಿವೃತ್ತಿ ಘೋಷಣೆ; ಸಂಚಲನ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ*
https://pragati.taskdun.com/siddaramaihannounce10-kg-free-ricepolitical-retairment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ