ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ನಾವು ಶಕ್ತಿ ತುಂಬಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನಾಯಕರು, ಅಧಿಕಾರಕ್ಕೆ ಬಂದ ತಕ್ಷಣ ಎಸಿಬಿ ಕಿತ್ತುಹಾಕಿ ಲೋಕಾಯುಕ್ತರ ನೇಮಕ ಮಾಡಲಿಲ್ಲ ಯಾಕೆ? ಈ ವಿಚಾರವಾಗಿ ಹೈಕೋರ್ಟ್ ನಿರ್ದೇಶನ ನೀಡಿದ ನಂತರ ಎಸಿಬಿ ಸಂಸ್ಥೆ ರದ್ದುಗೊಳಿಸಿ ಲೋಕಾಯುಕ್ತರ ನೇಮಕ ಮಾಡಿದ್ದಾರೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಕ್ರಮ ಕೈಗೊಂಡು ಈಗ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ಜನರಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ವ್ಯಂಗ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ಬಗ್ಗೆ ಏನೆಲ್ಲಾ ವ್ಯಂಗ್ಯ ಮಾಡುತ್ತಾರೋ ಮಾಡಲಿ. ಬಂದ್ ವಿಚಾರವಾಗಿಯಾದರೂ ವ್ಯಂಗ್ಯ ಮಾಡಲಿ, 200 ಯುನಿಟ್ ಉಚಿತ ವಿದ್ಯುತ್, 2000 ರೂ. ನೀಡುವ ಬಗ್ಗೆಯಾದರೂ ವ್ಯಂಗ್ಯ ಮಾಡಲಿ. ನಾವು ಅಧಿಕಾರಕ್ಕೆ ಬಂದ ನಂತರ ಇದೆಲ್ಲವನ್ನು ಮಾಡಿ ತೋರಿಸಿ ಅವರಿಗೆ ಉತ್ತರ ನೀಡುತ್ತೇವೆ ಎಂದು ಹೇಳಿದರು.
200 ಯುನಿಟ್ ಉಚಿತ ವಿದ್ಯುತ್ ನೀಡಲು ಹೇಗೆ ಸಾಧ್ಯ ಎಂದು ಕೇಳುವ ಅವರು ಯಾವ ಲೆಕ್ಕಾಚಾರದಲ್ಲಿ ರೈತರಿಗೆ 7 ಗಂಟೆಯಿಂದ 10 ಗಂಟೆವರೆಗೂ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು? ನಿಮ್ಮ ಸರ್ಕಾರ ಇದ್ದರೂ ಅದನ್ನು ಯಾಕೆ ಜಾರಿ ಮಾಡಲಿಲ್ಲ? ರೈತರ 1 ಲಕ್ಷ ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅದನ್ನು ಯಾಕೆ ಮಾಡಲಿಲ್ಲ? ಈಗ 75 ಯುನಿಟ್ ನೀಡುವುದಾಗಿ ಹೇಳಿದ್ದಾರೆ. ನಾವು 2 ಸಾವಿರ ನೀಡುತ್ತೇವೆ ಎಂದಾಗ ಅವರು 500 ರೂ. ನೀಡುವುದಾಗಿ ಹೇಳಿ ನಂತರ 1 ಸಾವಿರ ನೀಡುತ್ತೇವೆ ಎಂದು ಘೋಷಣೆ ಮಾಡಿರುವುದೇಕೆ? ಜ.16 ರಂದು ಸರ್ಕಾರ ಗೃಹಿಣಿ ಶಕ್ತಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದರು. ಹೀಗೆ ಮುಖ್ಯಮಂತ್ರಿಗಳು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಸುಳ್ಳಿನ ಸರದಾರರಾಗುತ್ತಿದ್ದಾರೆ’ ಎಂದು ತಿಳಿಸಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವ ಬಗ್ಗೆ ವಕೀಲರ ಸಂಘ ಸುಪ್ರೀಂ ಕೋರ್ಟ್ ಮುಖ್ಯನಾಯಮೂರ್ತಿಗಳಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ನ್ಯಾಯಾಲಯದ ವಿಚಾರವಾಗಿ ಮಾತನಾಡುವುದಿಲ್ಲ. ನ್ಯಾಯಾಲಯ ಯಾವ ದೃಷ್ಟಿಕೋನದಲ್ಲಿ ಜಾಮೀನು ನೀಡಿದೆಯೋ ನನಗೆ ಗೊತ್ತಿಲ್ಲ. ನಾನು ಅದನ್ನು ಪ್ರಶ್ನಿಸುವುದಿಲ್ಲ’ ಎಂದರು.
ಸ್ಕ್ರೀನಿಂಗ್ ಕಮಿಟಿ ಸಭೆ ಬಗ್ಗೆ ಕೇಳಿದಾಗ, ‘ಬಹುತೇಕ ಶೇ.75 ರಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, ಇಂದು ಉಳಿದ ಕ್ಷೇತ್ರಗಳ ಪಟ್ಟಿ ಅಂತಿಮಗೊಳಿಸಲಾಗುವುದು. ನಂತರ ರಾಷ್ಟ್ರೀಯ ಮಟ್ಟದ ಸಭೆ ನಡೆಯಲಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಖಾತರಿ ಇದೆ. ಬಿಜೆಪಿ 65ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುವುದಿಲ್ಲ ಎಂಬ ಖಾತರಿಯೂ ಇದೆ. ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿ ನಾನು ಮಾತನಾಡಲ್ಲ. ಅವರು ಏನೇ ಮಾಡಿದರು 65ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುವುದಿಲ್ಲ. ಅವರು 40 ಕ್ಷೇತ್ರಕ್ಕೆ ಕುಸಿದರೂ ಅಚ್ಚರಿ ಇಲ್ಲ. ಜನ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀವು ಯಾರನ್ನೇ ಕೇಳಿದರೂ ಬಿಜೆಪಿಯಿಂದ ಅನುಕೂಲ ಆಗಿಲ್ಲ ಎಂದೇ ಹೇಳುತ್ತಿದ್ದಾರೆ’ ಎಂದರು.
ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸೋಮಣ್ಣ ಈ ಬಗ್ಗೆನಮ್ಮ ಬಳಿ ಮಾತನಾಡಿಲ್ಲ. ಅವರು ಪಕ್ಷ ಸೇರುವ ವಿಚಾರ ಚರ್ಚೆಯಾಗಿಲ್ಲ. ಇವೆಲ್ಲವೂ ಕೇವಲ ಊಹಾಪೋಹಗಳೇ ಹೊರತು ಯಾವುದೂ ನಿಜವಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ