Kannada NewsKarnataka NewsLatestPolitics

*ಶಾಸಕರು, ಬ್ಲಾಕ್ ಕಾಂಗ್ರೆಸ್ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: “ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ ಸಹಿಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಹರಿಯಾಣದಲ್ಲಿ ನಡೆದಿರುವ ಮತಗಳ್ಳತನ ವಿಚಾರವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿ ಮಾಡುತ್ತೇವೆ. ಈಗಾಗಲೇ ಲಕ್ಷಾಂತರ ಸಹಿಸಂಗ್ರಹ ಮಾಡಿದ್ದೇವೆ. ಅದನ್ನು ನ.9 ರಂದು ದೆಹಲಿಗೆ ತೆಗೆದುಕೊಂಡು ಬರುತ್ತೇವೆ. ಬ್ಲಾಕ್ ಅಧ್ಯಕ್ಷರ ಜೊತೆ ಚರ್ಚೆ ಮಾಡಲಿದ್ದೇನೆ. ಈ ಅಭಿಯಾನದಲ್ಲಿ ಯಾರು ಕೆಲಸ ಮಾಡಿಲ್ಲವೋ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಸಹಿಸಂಗ್ರಹ ಅಭಿಯಾನದಲ್ಲಿ ಸರಿಯಾಗಿ ಜವಾಬ್ದಾರಿ ನಿಭಾಯಿಸದವರನ್ನು ಅವರ ಹುದ್ದೆಯಿಂದ ಕಿತ್ತೊಗೆಯಿರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ಮಾಡುವೆ, ಶಾಸಕರಿಗೂ ತಿಳಿಸುವೆ. ಮತಗಳ್ಳತನ ರಾಷ್ಟ್ರ ಮಟ್ಟದ ಗಂಭೀರ ವಿಚಾರವಾಗಿದ್ದು, ನಮ್ಮ ರಾಜ್ಯದಲ್ಲಿ ಈಗಾಗಲೇ 70-80 ಲಕ್ಷ ಸಹಿ ಸಂಗ್ರಹ ಮಾಡಲಾಗಿದೆ. ಕೆಲವು ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ನವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ನಾನು ನನ್ನ ವರದಿ ನೀಡುತ್ತೇನೆ. ಬ್ಲಾಕ್ ಅಧ್ಯಕ್ಷರನ್ನು ವಜಾಗೊಳಿಸಲು ನನಗೆ ಅಧಿಕಾರವಿದೆ. ಶಾಸಕರ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ. ಎಐಸಿಸಿ ನಾಯಕರು ಸೂಚನೆ ನೀಡುತ್ತಾರೆ” ಎಂದರು.

ಕರ್ನಾಟಕ, ಮಹಾರಾಷ್ಟ್ರ ನಂತರ ಈಗ ಹರಿಯಾಣದಲ್ಲಿ ಮತಗಳ್ಳತನ ಆರೋಪ ಬಂದಿದ್ದು, ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಯಾಕೆ ಎಂದು ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೇವರು. ನಾವು ಈ ವಿಚಾರವನ್ನು ಜನರಿಗೆ ತಿಳಿಸುತ್ತಿದ್ದು, ಅವರು ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡಲಿದ್ದಾರೆ. ದೇಶದಲ್ಲಿ ಏನಾಗುತ್ತಿದೆ ಎಂದು ಜನರಿಗೆ ಮನದಟ್ಟು ಮಾಡುತ್ತಿದ್ದೇವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏನಾಗಿದೆ ಎಂದು ನಮಗೆ ಗೊತ್ತಿದೆ. ನಾವು ಅಲ್ಲಿ ಸೋತಾಗಿದೆ. ಈಗ ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಬೇಡ. ಈಗ ಬೇರೆ ಕ್ಷೇತ್ರಗಳಲ್ಲಿನ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಅವರೇ ಸಾಕ್ಷಿ ಸಮೇತ ಜನರ ಮುಂದೆ ಇಡುತ್ತಿದ್ದಾರೆ” ಎಂದು ತಿಳಿಸಿದರು.

Home add -Advt

ನಾವು ಆರ್ ಎಸ್ಎಸ್ ನಿಯಂತ್ರಿಸುವುದಾಗಿ ಹೇಳಿಲ್ಲ:

ಆರ್ ಎಸ್ಎಸ್ ನಿಯಂತ್ರಣದ ಬಗ್ಗೆ ಕೇಳಿದಾಗ, “ನಾವು ಆರ್ ಎಸ್ಎಸ್ ನಿಯಂತ್ರಿಸುತ್ತೇವೆ ಎಂದು ಎಲ್ಲಿ ಹೇಳಿದ್ದೇವೆ? ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂದು ಹೇಳಿದ್ದೇವೆ. ಇದು ಎಲ್ಲರಿಗೂ ಅನ್ವಯವಾಗಲಿದ್ದು, ನಾವು ಆರ್ ಎಸ್ಎಸ್ ಸುದ್ದಿ ಎಲ್ಲಿ ಪ್ರಸ್ತಾಪಿಸಿದ್ದೇವೆ? ಈ ವಿಚಾರ ಸಾರ್ವಜನಿಕ ಚರ್ಚೆಯಲ್ಲಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಪತ್ರದ ಆದೇಶದಂತೆ ಯಾರೇ ಕಾರ್ಯಕ್ರಮ ಮಾಡಬೇಕಾದರೂ ಅನುಮತಿ ಪಡೆಯಬೇಕು ಎಂದು ಸರ್ಕಾರ ಸೂಚಿಸಿದೆ. ಆರ್ ಎಸ್ಎಸ್ ಕಾರ್ಯಕ್ರಮ ಮಾಡಬಾರದು ಎಂದು ನಾವು ಎಲ್ಲಿ ಹೇಳಿದ್ದೇವೆ?” ಎಂದು ತಿಳಿಸಿದರು.

ಹೈಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆಯೇ ಎಂದು ಕೇಳಿದಾಗ, “ಸರ್ಕಾರಕ್ಕೆ ಹಿನ್ನಡೆ ಎಂದೇನೂ ಇಲ್ಲ. ನಮ್ಮ ಕಾನೂನು ತಂಡದ ಜತೆ ಕೂತು ಚರ್ಚೆ ಮಾಡುತ್ತೇವೆ. ನಾವು ನ್ಯಾಯಾಲಯಕ್ಕೆ ಗೌರವ ನೀಡುತ್ತೇವೆ” ಎಂದರು.

“ಕಾವೇರಿ (ಮೇಕೆದಾಟು ಯೋಜನೆ) ವಿಚಾರವಾಗಿ ಪ್ರತ್ಯೇಕ ಪೀಠ ರಚಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ದಿನಾಂಕ ನಿಗದಿ ಮಾಡಲಿದ್ದು, ರಾಜ್ಯಕ್ಕೆ ನ್ಯಾಯ ಸಿಗಲಿ ಎಂದು ಪ್ರಾರ್ಥನೆ ಮಾಡೋಣ” ಎಂದರು.

Related Articles

Back to top button