ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಮ್ಮ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನು ಬಂಧಿಸಲಿ. ಇದು ಗಂಭೀರ ಅಪರಾಧವಾಗಿದೆ. ಚುನಾವಣಾ ಆಯೋಗವು ಈ ವಿಚಾರವನ್ನು ಡಿವಿಸಿಗೆ (ವಿಭಾಗೀಯ ಅಧಿಕಾರಿ) ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ. ನಾಳೆ ನಾವು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಗೌರವ್ ಗುಪ್ತಾ ಅವರು ಏಕಾಏಕಿ ಹಿಂಪಡೆದಿದ್ದಾರೆ. ಆದರೆ ಈಗಾಗಲೇ ಈ ಸಂಸ್ಥೆಯ ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಕೆಲವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳುತ್ತಿರುವ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದೆ. ಈ ಸಂಸ್ಥೆಯ ಕಾರ್ಯವ್ಯಾಪ್ತಿ ಏನಿದೆ ಎಂದು ನಮ್ಮ ಬಳಿ ಮಾಹಿತಿ ಇದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮಾಹಿತಿ ಕಲೆ ಹಾಕಿದ್ದೇನೆ. ಅವರು ಜನ ಪ್ರತಿನಿಧಿಗಳ ಬಳಿ ಹೋಗಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಪ್ರತಿ ವಾರ್ಡ್ ನಲ್ಲಿ ಕಾರ್ಪೊರೇಟರ್ ಬಳಿ 1 ಕೋಟಿ ಹಣ ಕೇಳಿದ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ನಾವು ಕೂಡ ನಮ್ಮದೇ ಆದ ತನಿಖೆ ಮಾಡಿದ್ದೇವೆ ಎಂದರು.
ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಉಡಾಫೆಯಾಗಿ ಮಾತನಾಡಬಾರದು. ಮುಖ್ಯಮಂತ್ರಿಗಳು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರು ಈ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರಬೇಕು. ಯಾವ ಕ್ಷೇತ್ರಗಳಲ್ಲಿ ಎಷ್ಟು ವಾರ್ಡ್ ಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ, ಖಾಲಿ ಮನೆ, ನಿವೇಶನಗಳನ್ನು ಗುರುತಿಸಿ ಅವುಗಳ ದುರ್ಬಳಕೆಗೆ ಹೇಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಗೊತ್ತಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ, ಈ ಸಂಸ್ಥೆಗೆ ಅನುಮತಿ ಆದೇಶ ನೀಡಿದ್ದಾರೆ. ಆದರೂ ಆಯೋಗದವರು ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ನಾವು ಪೊಲೀಸ್ ಕಮಿಷನರ್ ಅವರಿಗೆ ಕೊಟ್ಟಿರುವ ದೂರಿನ ಮಾಹಿತಿಯನ್ನು ಇ ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇವೆ. ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ನಾನು, ಸಿದ್ದರಾಮಯ್ಯ ಹಾಗೂ ಇತರ ನಾಯಕರು ಭೇಟಿ ಮಾಡಲಿದ್ದೇವೆ ಎಂದರು.
ಈ ಸಂಸ್ಥೆಗಳ ನಿರ್ದೇಶಕ ರವಿಕುಮಾರ್ ಬಿಟ್ಟು ಬಿಎಲ್ಒ ಆಗಿ ಸಮೀಕ್ಷೆ ಮಾಡಿದ ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಇದನ್ನೇ ನಾವು ಹೇಳುತ್ತಿರುವುದು. ಆ ಗುರುತಿನ ಚೀಟಿ ಮಾಡಿದವರು ಯಾರು? ಈ ಗುರುತಿನ ಚೀಟಿ ವಿತರಣೆ ಮಾಡಿರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧಿಕಾರಗಳ ವಿರುದ್ಧವೂ ಎಫ್ಐಆರ್ ಆಗಬೇಕು.
ಸರ್ಕಾರಿ ಹುದ್ದೆಯನ್ನು ಬೇರೆಯವರಿಗೆ ನೀಡಲು ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿ ಹಾಗೂ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವದ ಅವಧಿಯಲ್ಲಿ ನಾನು, ಅಥವಾ ಕುಮಾರಸ್ವಾಮಿ ಅಥವಾ ಬೆಂಗಳೂರಿನ ಯಾವುದೇ ಸಚಿವರು, ಶಾಸಕರು ಈ ಕೆಲಸ ಮಾಡಿದ್ದರೆ ನಮ್ಮ ವಿರುದ್ಧವೂ ಕ್ರಮ ಕೈಗೊಳ್ಳಲಿ. ಈ ವಿಚಾರದಿಂದಲೂ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಮುಖ್ಯಮಂತ್ರಿಗಳು ಇದರ ಗಂಭೀರತೆ ಅರಿಯಬೇಕು. ಮತದಾನದ ಹಕ್ಕು ಮೂಲಭೂತ ಹಕ್ಕಾಗಿದ್ದು, ಅದನ್ನು ಕಸಿಯುವ ಅಕ್ರಮ ಮಾಡಲಾಗಿದೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಇಂತಹ ಅಕ್ರಮಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾರರಿಗೆ ಮಾಡಿರುವ ಅಪಮಾನ.
ಈ ಸಮಯದಲ್ಲಿ ನಾನು ಜೆಡಿಎಸ್, ಕಮ್ಯುನಿಸ್ಟ್, ರೈತ ಸಂಘ ಹಾಗೂ ನಮ್ಮ ಪಕ್ಷದವರಿಗೆ ನಿಮ್ಮ ಮೂಲಕ, ನೀವೆಲ್ಲರೂ ನಿಮ್ಮ ಬೂತ್ ಗಳಿಗೆ ಹೋಗಿ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ. ಅನೇಕರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಧಿಕಾರಿಗಳು, ಬಿಎಲ್ ಒಗಳ ಮೂಲಕ ಈ ರೀತಿ ಅಕ್ರಮ ಮಾಡಲಾಗುತ್ತಿದೆ ಎಂದು ಸಂದೇಶ ನೀಡಲು ಬಯಸುತ್ತೇನೆ.
ನಮ್ಮ ಪಕ್ಷದವರಿಗೆ ಪ್ರತಿ ಬೂತ್ ನಲ್ಲಿ ಏಜೆಂಟರನ್ನು ನೇಮಿಸಲು ಹಕ್ಕು ನೀಡಲಾಗಿದೆ. ನೀವು ಬಿಎಲ್ಎಗಳ ಮೂಲಕ ಮಾಹಿತಿ ನೀಡಿ ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿ ಎಂದು ಹೇಳಬಯಸುತ್ತೇನೆ. 26 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, 14 ಲಕ್ಷ ಹೆಸರನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಅವರೇ ಹೇಳಿದ್ದಾರೆ. ಯಾರ ಹೆಸರು ಕೈ ಬಿಟ್ಟು, ಯಾರ ಹೆಸರು ಸೇರಿಸಿದ್ದಾರೆ? ಪ್ರತಿ ಕ್ಷೇತ್ರದಲ್ಲೂ ಹೀಗೆ ಮಾಡಲಾಗಿದೆ. ಹೀಗಾಗಿ ಕಾರ್ಯಕರ್ತರು ಬಹಳ ಜಾಗರೂಕರಾಗಿ ಈ ಬಗ್ಗೆ ಗಮನ ಹರಿಸಬೇಕು. ಪ್ರತಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಇರುವ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು, ಅಕ್ರಮವಾಗಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ’ ಎಂದು ತಿಳಿಸಿದರು.
ನಿಮ್ಮ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡುವಾಗ ಈ ಸಂಸ್ಥೆಗಳ ಹಿನ್ನಲೆ ಪರಿಶೀಲನೆ ಮಾಡಲಿಲ್ಲವೇ ಎಂದು ಕೇಳಿದಾಗ, ‘ಇಂತಹ ತಪ್ಪನ್ನು ಯಾರೇ ಮಾಡಿದರೂ ತಪ್ಪೇ. ಅದು ಶಿವಕುಮಾರ್ ಆಗಲಿ, ಬೇರೆಯವರೇ ಆಗಲಿ. ಈ ವಿಚಾರವಾಗಿ ತನಿಖೆ ಮಾಡಿ. ಒಬ್ಬರು ತಪ್ಪು ಮಾಡಿದರು ಎಂದು ನೀನು ಅದೇ ತಪ್ಪು ಮಾಡುತ್ತೇನೆ ಎಂದು ಹೇಳುವುದು ಎಷ್ಟು ಸರಿ? ಮತದಾನದ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ನಿಮಗೆ ಅಧಿಕಾರ ಇದೆ ಎಂದು ಆ ಹಕ್ಕು ಕಸಿಯುವುದು ಎಷ್ಟು ಸರಿ?’ ಎಂದು ಕೇಳಿದರು.
ಇವಿಎಂ ಹ್ಯಾಕ್ ಮಾಡುವವರು ಇದನ್ನು ಮಾಡದೇ ಇರುತ್ತಾರಾ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿ ಅಥವಾ ಬಿಡಲಿ. ನಾನು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ, ಜವಾಬ್ದಾರಿಯುತ ಮತದಾರನಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಂದಿನ 24 ಗಂಟೆಗಳ ಒಳಗಾಗಿ ಅಂದರೆ ನಾಳೆ ಮಧ್ಯಾಹ್ನ 12 ಗಂಟೆ ಒಳಗೆ ಈ ನಕಲಿ ಬಿಎಲ್ಒ ಗುರುತಿನ ಚೀಟಿ ವಿತರಣೆ ಮಾಡಿದವರು, ಮತದಾರರ ಮಾಹಿತಿ ಕಲೆಹಾಕಿ ಅಕ್ರಮ ಎಸಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು.
ಇಲ್ಲದಿದ್ದರೆ ಚುನಾವಣಾ ಆಯೋಗವೇ ಇದರಲ್ಲಿ ಭಾಗಿಯಗಿದೆ. ಈ ವಿಚಾರವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ದೆಹಲಿ ಚುನಾವಣಾ ಆಯೋಗದವರೆಗೂ ತೆಗೆದುಕೊಂಡು ಹೋಗುತ್ತೇವೆ. ರಾಜ್ಯ ಚುನಾವಣಾ ಆಯೋಗ ಈ ವಿಚಾರದ ತನಿಖೆಯನ್ನು ಡಿವಿಸಿಗೆ ನೀಡಿದ್ದಾರೆ. ಈ ಡಿವಿಸಿಯನ್ನು ಮುಖ್ಯಮಂತ್ರಿಗಳು ನೇಮಿಸಿದ್ದಾರೆ. ನಾವು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುತ್ತಿರುವಾಗ ಅವರ ಕೈಕೆಳಗಿನ ಅಧಿಕಾರಿಗಳು ತನಿಖೆ ಮಾಡಲು ಸಾಧ್ಯವೇ? ಈ ಪ್ರಕರಣ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡುತ್ತೇವೆ.
ಆಕ್ಸಿಜನ್ ದುರಂತ ಪ್ರಕರಣದಲ್ಲಿ ನ್ಯಾಯಾಲಯ ಹೇಗೆ ಜವಾಬ್ದಾರಿ ತೆಗೆದುಕೊಂಡು ರಾಜ್ಯದ ಮಾನ ಕಾಪಾಡಿತೋ ಅದೇ ರೀತಿ ಈ ವಿಚಾರದಲ್ಲೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರ ನೇತೃತ್ವದಲ್ಲಿ ಎಲ್ಲ ಮತದಾರರಿಗೆ ತಮ್ಮ ಹಕ್ಕು ಸಿಗುವಂತೆ ಮಾಡಬೇಕು. ಇಂತಹ ನೀಚ ಹಾಗೂ ಭ್ರಷ್ಟ ಸರ್ಕಾರ ಹಾಗೂ ಅಧಿಕಾರಿಗಳ ಬಂಧನವಾಗಬೇಕು’ ಎಂದು ಆಗ್ರಹಿಸಿದರು.
ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬೇರೆ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ದೊಡ್ಡ ಪಟ್ಟಿ ಇದೆ. ಇದನ್ನು ನಾನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರು ಪಕ್ಷವನ್ನು ಸೇರುವ ದಿನ ಅವರ ಹೆಸರು ನಿಮಗೆ ತಿಳಿಯುತ್ತದೆ’ ಎಂದು ಸ್ಪಷ್ಟಪಡಿಸಿದರು.
ಬಡಪಾಯಿ ಏಜೆಂಟನನ್ನು ಬಲಿಪಶು ಮಾಡಿ ತಾವು ಪಾರಾಗುವ ಸಂಚು; ಸಿಎಂ ವಿರುದ್ಧ ಕಿಡಿ ಕಾರಿದ ಸಿದ್ದರಾಮಯ್ಯ
https://pragati.taskdun.com/operation-votersiddaramaiahcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ