ಪ್ರಗತಿವಾಹಿನಿ ಸುದ್ದಿ: ಸಿಎಂ ಹುದ್ದೆ ಬದಲಾವಣೆ, ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿ ವಿಚಾರವಾಗಿ ಭಾರಿ ಚರ್ಚೆ ಆರಂಭವಾಗಿದ್ದು, ಸಚಿವರು, ಶಾಸಕರು ತಮ್ಮದೇ ಅಭಿಪ್ರಾಯಗಳನ್ನು ಹೇಳುವ ಮೂಲಕ ಸರ್ಕಾರಕ್ಕೆ ಮುಜುಗರವನ್ನುಂಟುಮಾಡುತ್ತಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಸಚಿವರು, ಶಾಸಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಹುದ್ದೆ ಬಗ್ಗೆ, ಡಿಸಿಎಂ ಹುದ್ದೆ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಸಚಿವರು, ಶಾಸಕರು ತಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಅದೇ ನೀವು ಪಕ್ಷಕ್ಕೆ ಮಾಡುವ ಒಳ್ಳೆಯ ಕೆಲಸ. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಎಚ್ಚರಿಕೆ ಕೊಡುತ್ತಿದ್ದೇನೆ. ಇದೇ ರೀತಿ ಚರ್ಚೆ ಮಾತುಗಳು ಮುಂದುವರಿದರೆ ನೋಟಿಸ್ ನೀಡಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಸ್ವಾಮೀಜಿಯವರು ನನ್ನ ಮೇಲಿನ ಅಭಿಮಾನದಿಂದ ಹೇಳಿರಬಹುದು. ಹಾಗಂತ ಅದೇ ವಿಚಾರವಾಗಿ ಚರ್ಚೆಗಳು ಬೇಡ. ಯಾರೂ ಕೂಡ ಸಿಎಂ ಬದಲಾವಣೆ ಬಗ್ಗೆ, ಡಿಸಿಎಂ ಹುದ್ದೆ ಬಗ್ಗೆ ಮಾತನಾಡುವಂತಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು, ಹೈಕಮಾಂಡ್ ನಾಯಕರಿದ್ದಾರೆ. ಸಚಿವರು, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಕೆಲಸದ ಬಗ್ಗೆ ಗಮನ ಕೊಡಲಿ ಎಂದು ಖಡಕ್ ಆಗಿ ಹೇಳಿದ್ದಾರೆ.
ಸ್ವಾಮೀಜಿಗಳು ರಾಜಕಾರಣದ ಸುದ್ದಿಗೆ ಬರಬೇಡಿ
ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಪದೇ, ಪದೇ ಸ್ವಾಮೀಜಿಗಳ ಮಧ್ಯಪ್ರವೇಶದ ಬಗ್ಗೆ ಕೇಳಿದಾಗ “ಯಾವ ಸ್ವಾಮೀಜಿಗಳು ಮಾತನಾಡಿಲ್ಲ, ಇವತ್ತೇ ಮಾತನಾಡಿದ್ದು ಅವರು. ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುತ್ತೇನೆ, ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ” ಎಂದು.
ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳಿಗೆ ಹೇಳಿಕೊಟ್ಟು ಹೇಳಿಕೆ ನೀಡಿಸಲಾಗಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪರಮೇಶ್ವರ್ ಅವರ ಸಂಭಾಷಣೆ ಬಗ್ಗೆ ಕೇಳಿದಾಗ “ಇದರ ಬಗ್ಗೆ ನನಗೇನೂ ಗೊತ್ತಿಲ್ಲ” ಎಂದರು.
ರಾಜ್ಯದ ಅಭಿವೃದ್ಧಿ ಹಾಗೂ ಹಿತ ರಕ್ಷಣೆಗೆ ಸಹಕಾರ ನೀಡಲು ಸಂಸದರ ಭರವಸೆ; ಇಂದು ಪ್ರಧಾನಿಗಳ ಭೇಟಿ
“ರಾಜ್ಯದ ಅಭಿವೃದ್ಧಿ, ಹಿತ ರಕ್ಷಣೆ, ರಾಜ್ಯದ ಅಭಿವೃದ್ಧಿ, ಬಾಕಿ ಇರುವ
ಯೋಜನೆಗಳು, ಅನುದಾನದಲ್ಲಿ ನ್ಯಾಯ ಒದಗಿಸುವ, ರಾಜ್ಯದ ಬೇಡಿಕೆಗಳ ವಿಚಾರವಾಗಿ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಹಾಗೂ ಸಚಿವರ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಎರಡು ಗಂಟೆಗಳ ಕಾಲ ನಮ್ಮ ಚರ್ಚೆಯಲ್ಲಿ ಭಾಗವಹಿಸಿದ್ದರು. ನಂತರ ಎಲ್ಲರು ಒಟ್ಟಿಗೆ ಊಟ ಮಾಡಿದೆವು” ಎಂದರು.
ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಯಿತು. ಹೆದ್ದಾರಿ ಕಾಮಗಾರಿಗಳಿಗೆ ಎಲ್ಲೆಲ್ಲಿ ಅಡಚಣೆಯಿದೆ ಆ ಭಾಗದ ಶಾಸಕರ ಜೊತೆ ಮಾತನಾಡಲಾಗುವುದು. ಅನೇಕ ಕಡೆ ದೇವಸ್ಥಾನಗಳಿವೆ. ಅವುಗಳನ್ನು ಮುಟ್ಟಬೇಡಿ ಎಂದು ಹೇಳುತ್ತಾರೆ. ಹೀಗೆ ಅನೇಕ ಸಮಸ್ಯೆಗಳಿವೆ, ಈ ಎಲ್ಲದರ ಬಗ್ಗೆ ಅಧಿಕಾರಿಗಳನ್ನು ಕರೆದು ಮಾತನಾಡಲಾಗುವುದು. ಅಲ್ಲೆಲ್ಲಾ ಮಾರ್ಗ ಬದಲಾವಣೆ ಮಾಡಲು ಆಗುತ್ತದೆಯೇ ಹಾಗೂ ರೈತರ ವಿರೋಧ ಇರುವ ಕಡೆ ಏನು ಮಾಡುವುದು ಎಂದು ಚರ್ಚೆ ನಡೆಸಲಾಯಿತು. ಇಂದು ಸಂಜೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗುವುದು” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ