ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಈ ಕಾರ್ಯಕ್ರಮ ಯಾದಗಿರಿಗೆ ಶಕ್ತಿ ನೀಡುವ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಬಾಬು ಜಗಜೀವನ್ ರಾಮ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿದ್ದಾರು. ಇಂತಹ ಮಹನೀಯರು ಅಲಂಕರಿಸಿದ ಸ್ಥಾನಕ್ಕೆ ನಿಮ್ಮ ಮಣ್ಣಿನ ಮಗ, ಧೀಮಂತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಅಧಿಕಾರಕ್ಕೆ ಬಹುರುವುದು, ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎಂಬುದಕ್ಕಿಂತ, ಅಧಿಕಾರ ಇದ್ದಾಗ ಜನರ ಬದುಕಿನಲ್ಲಿ ಯಾವ ಬದಲಾವಣೆ ತಂದಿದ್ದಾರೆ ಎಂಬುದು ಮುಖ್ಯ. ಇತ್ತೀಚೆಗೆ ಮೋದಿ ಅವರು ಈ ಭಾಗಕ್ಕೆ ಬಂದು, ಈ ಭಾಗ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ. ಮೋದಿ ಅವರಿಗೆ ಒಂದು ಮಾತು ಹೇಳಬಯಸುತ್ತೇನೆ. ಹೈದರಾಬಾದ್ ಕರ್ನಾಟಕದ ಈ ಭಾಗ ಬಿಸಿಲು ನಾಡಾಗಿದ್ದು, ಬಡ ಪ್ರದೇಶವಾಗಿದೆ. ನೀವು ಅಧಿಕಾರದಲ್ಲಿದ್ದೀರಿ. ನಿಮ್ಮ ಅಧಿಕಾರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮ ಕೊಟ್ಟಿದ್ದರೆ ನೀವು ಏನು ಹೇಳಿದರೂ ಕೇಳುತ್ತೇವೆ ಎಂದರು.
ಧರಂ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಜನರಿಗೆ ಶಿಕ್ಷಣ, ಆಹಾರ, ಉದ್ಯೋಗ, ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಚರ್ಚೆ ಮಾಡಿ ಈ ಭಾಗಕ್ಕೆ 371 ಜೆ ಮೂಲಕ ಸಂವಿಧಾನಕ್ಕೆ ತಿಂದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆಗ ಉಪಪ್ರಧಾನಿಯಾಗಿದ್ದ ಆಡ್ವಾಣಿ ಅವರು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಪತ್ರ ಬರೆದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೋರಾಟ ಮುಂದುವರಿಸಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಎಲ್ಲ ವಿರೋಧ ಪಕ್ಷಗಳ ಜತೆ ಮಾತನಾಡಿ, 371ಜೆ ತಿದ್ದುಪಡಿ ಮಾಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟರು. ಬಿಜೆಪಿ ಸರ್ಕಾರ ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ಮಾಡಿದ್ದಾರಾ?
ಕಾಂಗ್ರೆಸ್ ಸರ್ಕಾರ ಬಡವರು, ರೈತರ ಬದುಕು ನೀಡಲು ಕಾರ್ಯಕ್ರಮ ರೂಪಿಸಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಕೆರೆ ತುಂಬಿಸುವ, ಕುಡಿಯುವ ನೀರು, ಇಎಸ್ಐ, ಮೆಡಿಕಲ್ ಕಾಲೇಜುಗಳನ್ನು ಮೋದಿ, ಯಡಿಯೂರಪ್ಪ ಅಥವಾ ಬೊಮ್ಮಾಯಿ ಅವರು ಮಾಡಿದ್ದರಾ? ಎಂದು ಪ್ರಶ್ನಿಸಿದರು.
ಪಿಎಸ್ಐ ನೇಮಕಾತಿ ಸೇರಿದಂತೆ ಎಲ್ಲಾ ಇಲಾಖೆ ಹುದ್ದೆಗಳು ಹಾಗೂ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಈ ಎಲ್ಲ ಅಕ್ರಮಗಳಿಗೆ ಮುಖ್ಯಮಂತ್ರಿಗಳು, ಮಂತ್ರಿಗಳು ಇಲಾಖೆ ಅಧಿಕಾರಿಗಳ ಸಂಪೂರ್ಣ ಬೆಂಬಲ ನೀಡಲಾಗಿದೆ. ಪರಿಣಾಮ ಐಪಿಎಸ್ ಅಧಿಕಾರಿಯಿಂದ ಕೆಲವು ಅಭ್ಯರ್ಥಿವರೆಗೂ ನೂರಾರು ಮಂದಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾರೆ. ಇದಕ್ಕೆಲ್ಲ ಕಾರಣ ಯಾರು? ಬಿಜೆಪಿ ಸರ್ಕಾರ.
ಈ ಸರ್ಕಾರ ಯುವಕರ ಉದ್ಯೋಗದಿಂದ, ಸರ್ಕಾರದ ಕಾಮಗಾರಿ ಗುತ್ತಿಗೆವರೆಗೂ ಪ್ರತಿಯೊಂದರಲ್ಲೂ ಲಂಚ, ಭ್ರಷ್ಟಾಚಾರ ಮಾಡುತ್ತಿದೆ. ಅವರದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್, ಸಚಿವರಾಗಿದ್ದ ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದ. ಜಿಲ್ಲಾ ಮಂತ್ರಿಯೇ ಆತ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದರೂ ಆತನ ಕೆಲಸಕ್ಕೆ ಬಿಲ್ ಪಾವತಿ ಆಗಿಲ್ಲ.
ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಅವರು 2 ಲಕ್ಷ ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷರು. ಅವರು ಈ ಸರ್ಕಾರದ ಆಡಳಿತದಲ್ಲಿ 40% ಕಮಿಷನ್ ನೀಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಪ್ರಧಾನಮಂತ್ರಿಗಳಿಗೆ ದೂರು ನೀಡಿದ್ದರು. ಆದರೆ ಅವರ ದೂರಿಗೆ ಪ್ರಧಾನಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ, ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರು ಬಂದು ಇದಕ್ಕೆ ಉತ್ತರ ನೀಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ಇಲ್ಲಿಗೆ ಬಂದು ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಏನು ಮಾಡದೆಯೇ ಇಲ್ಲಿನ ಕಾಲೇಜು, ಆಸ್ಪತ್ರೆ, ರಸ್ತೆಗಳು, ವಿದ್ಯುತ್ ಪೂರೈಕೆ ಈ ಭಾಗದ ಜನರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತಿತ್ತೇ? ಎಂದು ಕೇಳಿದ್ದಾರೆ.
ಈ ಭಾಗದ ಜನರಿಗೆ ಸಂವಿಧಾನದ ಮೂಲಕ ಶಕ್ತಿ ನೀಡಿದ್ದು ಯಾರು? ಕಾಂಗ್ರೆಸ್ ಪಕ್ಷ. ಮೀಸಲಾತಿ ಕೊಟ್ಟಿದ್ದು ಯಾರು? ರಾಜಕೀಯ, ಶೈಕ್ಷಣಿಕವಾಗಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೊಡುಗೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಮೋದಿ ಅವರು ಜನ್ ಧನ್ ಅಕೌಂಟ್ ಖಾತೆ ತೆರೆಸಿ ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು, ಆ ಹಣ ಬಂತಾ? ಮುಂದೆ ಬಿಜೆಪಿಯವರು ನಿಮ್ಮ ಬಳಿಗೆ ಬಂದಾಗ, ಕಪ್ಪು ಹಣ ತಂದು ನಿಮ್ಮ ಖಾತಿಗೆ ಹಾಕುತ್ತೇನೆ ಎಂದಿದಲ್ಲಪ್ಪಾ, ಎಲ್ಲಿ ಎಂದು ಕೇಳಬೇಕು.
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಮೋದಿ ಅವರೇ ಎಲ್ಲಿ ಆದಾಯ ಡಬಲ್ ಆಗಿದೆ? ಆದಾಯ ಪಾತಾಳಕ್ಕೆ ಹೋಗಿದ್ದು, ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು, ಕೊಟ್ಟರಾ? ನಿಮಗೆ ಯಾರಿಗಾದರೂ ಕೆಲಸ ಸಿಕ್ಕಿತಾ? ಇಲ್ಲ. ನಮ್ಮದು ಬಸವಣ್ಣ, ಕುವೆಂಪು, ಶಿಶುನಾಳ ಶರೀಫರು, ಕನಕದಾಸರ ನಾಡು. ನಾವು ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯ ಅವರ ಸರ್ಕಾರ ಬರುವ ಮುನ್ನ ರಾಜ್ಯದ ಜನರಿಗೆ 165 ವಚನಗಳನ್ನು ನೀಡಿದ್ದು, ಆ ಪೈಕಿ 159 ವಚನಗಳನ್ನು ಪೂರ್ಣಗೊಳಿಸಿ, ಹೆಚ್ಚುವರಿಯಾಗಿ 30 ಕಾರ್ಯಕ್ರಮವನ್ನು ನೀಡಿದ್ದೆವು. ಅಧಿಕಾರಕ್ಕೆ ಬಂದರೆ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದೆವು. ಅಧಿಕಾರಕ್ಕೆ ಬಂದ ದಿನವೇ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿದರು. ನಂತರ 5 ಕೆ.ಜಿಯಿಂದ 7 ಕೆ.ಜಿ ಅಕ್ಕಿ ನೀಡಿದೆವು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆಹಾರ ಭದ್ರತೆ ಕಾಯ್ದೆ ತರಲಿಲ್ಲವೇ? ಆರೋಗ್ಯ, ಶಿಕ್ಷಣ, ಮಹಿಳೆಯರ ಸಬಲೀಕರಣ, ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ, ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಇದೆಲ್ಲವೂ ಕಾಂಗ್ರೆಸ್ ಕೊಡುಗೆ ಎಂದು ಹೇಳಿದರು.
ಪಾವಗಡದಲ್ಲಿ ಒಬ್ಬ ರೈತನ ಜಮೀನನ್ನು ವಶಪಡಿಸಿಕೊಳ್ಳದೇ, ಅವರಿಗೆ ಪ್ರತಿ ವರ್ಷ 25 ಸಾವಿರ ಬಾಡಿಗೆ ಬರುವಂತೆ ಮಾಡಿ, 14 ಸಾವಿರ ಎಕರೆ ಭೂಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇವೆ, ಇದು ಕಾಂಗ್ರೆಸ್ ಸರ್ಕಾರದ ಸಾಧನೆ. ನಾವು ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಅಭಾವವಿತ್ತು. ನಾನು ಇಂಧನ ಸಚಿವನಾಗಿ ಅಧಿಕಾರದಿಂದ ಕೆಳಗಿಳಿಯುವಾಗ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡುವಂತೆ ಮಾಡಿದ್ದೇವೆ.
ಬಿಜೆಪಿ ಕೊಡುಗೆ ಏನು? ಜಾತಿ ಜಾತಿಗಳ ನಡುವೆ ದ್ವೇಷವೆಂಬ ವಿಷ, ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿದರು. ಅವರು ಹಿಂದುಗಳು ಮಾತ್ರ ಮುಂದು ಎನ್ನುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ದಲಿತ, ಲಿಂಗಾಯತ, ಒಕ್ಕಲಿಗ ಎಲ್ಲರೂ ಒಂದು ಎನ್ನುತ್ತದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.
ಈ ಭಾಗದ ಮಕ್ಕಳಿಗಾಗಿ ಈ ಪ್ರದೇಶದಲ್ಲಿ 100 ಕಾಲೇಜುಗಳ ಸ್ಥಾಪನೆ ಮಾಡುವುದಾಗಿ ಮಾತು ನೀಡಿದ್ದೇವೆ. ಈ ಭಾಗದ ನಾಯಕರೆಲ್ಲರೂ ಸೇರಿ ಜನರಿಗೆ ಏನು ಮಾಡಬೇಕು, ಕಷ್ಟದಲ್ಲಿರುವ ಜನರಿಗೆ ಹೇಗೆ ಸಹಾಯ ಮಾಡಬೇಕು ಚರ್ಚೆ ಮಾಡಿ, ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿದ ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳಿಗೆ 1500ರಂತೆ ವರ್ಷಕ್ಕೆ 18 ಸಾವಿರದಷ್ಟು ಹಣವನ್ನು ಪ್ರತಿ ಕುಟುಂಬ ಉಳಿಸಬಹುದಾಗಿದೆ.
ಇನ್ನು ಎರಡನೇ ಗ್ಯಾರೆಂಟಿ ಯೋಜನೆಯಾಗಿ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯದ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಆ ಮೂಲಕ ವರ್ಷಕ್ಕೆ 24 ಸಾವಿರ ನೆರವು ನೀಡಲಾಗುವುದು. ಹೀಗೆ ಈ ಎರಡೂ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರದಷ್ಟು ಆರ್ಥಿಕ ಹೊರೆಯನ್ನು ತಗ್ಗಿಸಲು ಕಾಂಗ್ರೆಸ್ ಈ ಕಾರ್ಯಕ್ರಮ ರೂಪಿಸಿದೆ. ಐದು ವರ್ಷಗಳಲ್ಲಿ 2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಇನ್ನು ಸಿದ್ದರಾಮಯ್ಯ ಅವರು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಕಾಂಗ್ರೆಸ್ ಈ ಕಾರ್ಯಕ್ರಮ ನೀಡುತ್ತಿದೆ.
ಈ ರೀತಿ ಉಚಿತ ಯೋಜನೆ ನೀಡಿದರೆ ಯಾರು ಕೆಲಸಕ್ಕೆ ಬರುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಅದಕ್ಕೆ ಸಿದ್ದರಾಮಯ್ಯನವರು ಅವರ ಬದಲು ನೀವು ಹೇಗಿ ಕೆಲಸಕ್ಕೆ ಎಂದು ಸಿದ್ದರಾಮಯ್ಯನವರು ಉತ್ತರ ನೀಡಿದ್ದರು. ನಮಗೆ ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮಗೆ ನಂಬಿಕೆ ಇದೆ. ಈ ಭಾಗದ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ನೀವೆಲ್ಲರೂ ಅವರನ್ನು ಗೆಲ್ಲಿಸಬೇಕು. ಟಿಕೆಟ್ ಸಿಗದವರಿಗೆ ಪಕ್ಷ ಮುಂದಿನ ದಿನಗಳಲ್ಲಿ ಎಂಎಲ್ಸಿ, ವಿವಿಧ ನಿಗಮ ಮಂಡಳಿ ಮುಖ್ಯಸ್ಥರನ್ನಾಗಿ ಮಾಡಿ ಅಧಿಕಾರ ನೀಡಲಾಗುವುದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಈ ವಿಚಾರವಾಗಿ ನೀವೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು.
ಬಿಜೆಪಿ ಸರ್ಕಾರದ ಕಳೆದ ಮೂರು ವರ್ಷಗಳ ದುರಾಡಳಿತ, ಅಕ್ರಮ, ಹಗರಣ, ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಪಾಪದ ಪುರಾಣ ಎಂಬ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಇದನ್ನು ನೀವೆಲ್ಲರು ಪ್ರತಿ ಮನೆಗೆ ತಲುಪಿಸಿ ಜನರಲ್ಲಿ ಅರಿವು ಮೂಡಿಸಬೇಕು. ನಾನು ಹಾಗೂ ಸಿದ್ದರಾಮಯ್ಯನವರು ನಿಮ್ಮ ತಾಲೂಕುಗಳಿಗೆ ಆಗಮಿಸುತ್ತೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾವೆಲ್ಲರೂ ಸೇರಿ ಪಕ್ಷವನ್ನು ಗೆಲ್ಲಿಸಿ ಗೌರವ ಸೂಚಿಸೋಣ ಎಂದರು.
ಬೆಳಗಾವಿಯಲ್ಲಿ ನೇರಾ ನೇರ ಚುನಾವಣಾ ರಣಕಹಳೆ ಮೊಳಗಿಸಿದ BJP ಚಾಣಾಕ್ಯ; ಭಾಷಣಕ್ಕೆ ಲೋಕಲ್ ಟಚ್ ನೀಡಿದ ಅಮಿತ್ ಶಾ
https://pragati.taskdun.com/belagaviamith-shahbjp-janasankalpa-yatre/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ