ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಲಸೆ ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆಗೆ ಕಾಂಗ್ರೆಸ್ ನೀಡಿದ ಚೆಕ್ ನಕಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡುರಾವ್ ಸಹಿ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ. ಚೆಕ್ ಮೇಲೆ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ. ಇವರಿಗೆ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲ. ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ ಎಂದು ಟಾಂಗ್ ನೀಡಿದರು.
ದಿನೇಶ್ ಗುಂಡುರಾವ್ ಅಧ್ಯಕ್ಷರಾಗಿದ್ದಾಗ ದೇಣಿಗೆ ನೀಡಿರಲಿಲ್ಲ. ಈಗ ಡಿಕೆ ಶಿವಕುಮಾರ್ ಅಧ್ಯಕ್ಷ ಆಗುತ್ತಿದ್ದಂತೆ ಏಕಾಏಕಿ ದುಡ್ಡು ಬಂದಿದೆ. ಅದು ನಮಗೆ ಆಶ್ಚರ್ಯ ತಂದಿದೆ. ಹೀಗಾಗಿ ಅವರು ನೀಡಿದ ಚೆಕ್‍ನ್ನು ನಾವು ಹುಷಾರಾಗಿ ನೋಡುತ್ತಿದ್ದೇವೆ. ಅವರ ಒಂದು ಕೋಟಿ ಚೆಕ್ ಅನ್ನು ನಾವು ತಗೆದುಕೊಂಡಿಲ್ಲ. ನಾವು ನೂರಾರು ಕೋಟಿ ಈಗಾಗಲೇ ಖರ್ಚು ಮಾಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರು ನಿನ್ನೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು, ನಿನ್ನೆ ಸುಮಾರು 5 ಸಾವಿರ ಮಂದಿ ಮಧ್ಯದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರಿಗಾದರೂ ಸೋಂಕು ಇದ್ದರೆ ಅನ್ನೋ ಪರಿಜ್ಞಾನವೂ ಅವರಿಗೆ ಇರಲಿಲ್ಲ. ಹೀಗಿರುವಾಗ ಬೇರೆಯವರಿಗೆ ಹೇಳುವ ನೈತಿಕತೆ ಅವರಿಗಿಲ್ಲ. ಹೀಗಾಗಿ ಅವರಿಗೂ ತಪಾಸಣೆಯಾಗಬೇಕು ಎಂದರು.
ಕಾಂಗ್ರೆಸ್ ನಾಯಕರಿಗೂ ಕ್ವಾರೆಂಟೈನ್ ಮಾಡೋ ಚಾನ್ಸ್ ಬರಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ಸಿಎಂ ಜೊತೆ ಚರ್ಚಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ