Latest

ಮೀಸಲಾತಿ ಪ್ರಕಟಿಸಿದ ರೀತಿಗೆ ಡಿ.ಕೆ.ಶಿವಕುಮಾರ್ ಕಿಡಿ ಕಿಡಿ

ಪ್ರಗತಿವಾಹಿನಿ ಸುದ್ದಿ, ವಿಜಯಪುರ: “ರಾಜ್ಯದ ಜನರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯ ಯಾವ ಕಾಲದಲ್ಲೂ ಆಗಿರಲಿಲ್ಲ.  ಸರಕಾರ ಮೀಸಲಾತಿ ಪ್ರಕಟಿಸಿದ ರೀತಿ ಸಹನೀಯವಲ್ಲ,” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರು ನಮ್ಮನ್ನು ಶಾಲಾ ಮಕ್ಕಳೆಂದು ಭಾವಿಸಿದ್ದಾರೆ. ಅವರ ಕ್ರಮದಿಂದ ಯಾರಿಗೆ ಅನುಕೂಲ? ಇರುವ ಮೀಸಲಾತಿ ವರ್ಗ ತೆಗೆದುಹಾಕಲು ಹೇಗೆ ಸಾಧ್ಯ? ಇದು ಅಸಾಧ್ಯ. ಶೇ. 10 ರಷ್ಟು ಮೀಸಲಾತಿ ತೆಗೆದರೆ ಅವರ ಭವಿಷ್ಯ ಏನಾಗಬೇಕು? ಯಾವುದೇ ಕ್ರಮವನ್ನು ಸಂವಿಧಾನ ಬದ್ಧ, ಕಾನೂನು ಬದ್ಧವಾಗಿ ತೆಗೆದುಕೊಳ್ಳಬೇಕು. ಈ ಕ್ರಮದಿಂದ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ನಾಯಕರನ್ನು ಬಿಟ್ಟು ಆಯಾ ಸಮುದಾಯದ ಮುಖಂಡರಿಂದ ಹೇಳಿಕೆ ಕೊಡಿಸಲಿ,” ಎಂದರು.

“ಸಿಎಂ ಯಾಕೆ ಈ ವಿಚಾರವನ್ನು ಖುದ್ದಾಗಿ ಘೋಷಣೆ ಮಾಡಿಲ್ಲ? 3 ತಿಂಗಳ ನಂತರ ಚುನಾವಣೆ ಬಂದಾಗ ಮೀಸಲಾತಿ ಪ್ರಮಾಣ ಎಷ್ಟು ಎಂದು ತೀರ್ಮಾನ ಮಾಡುತ್ತಾರೆಯೇ? ಇದು ಮೋಸ ಮಾಡುವ ತಂತ್ರ. ಯಾವ ಸಮಾಜಕ್ಕೂ ಅವರು ನ್ಯಾಯ ಒದಗಿಸಿಕೊಟ್ಟಿಲ್ಲ. ನಾವು ‘ಸಮಬಾಳು, ಸಮಪಾಲು’ ಎಂಬ ನೀತಿ ಮೇಲೆ ಕೇಳುತ್ತಿದ್ದೇವೆ. ಒಕ್ಕಲಿಗರು ಶೇ.12 ರಷ್ಟು ಮೀಸಲಾತಿ ಕೇಳಿದ್ದು ಅದನ್ನು ಘೋಷಣೆ ಮಾಡಲಿ. ಪಂಚಮಸಾಲಿ ಸಮಾಜ ಆಗ್ರಹಿಸಿರುವ ಬೇಡಿಕೆ ಘೋಷಿಸಲಿ,” ಎಂದರು.

“ಪರಿಶಿಷ್ಟರಿಗೆ ನೀಡಲಾಗಿರುವ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕಿತ್ತು. ಇದುವರೆಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಹೋಗಿಲ್ಲ. ಇಲ್ಲಿ ಕೇವಲ ಆದೇಶ ಮಾಡಿದರೆ ಆಗುತ್ತದೆಯೇ? ಎಲ್ಲದಕ್ಕೂ ಕಾನೂನು ತೊಡಕು ಇದೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳಬಾರದು ಎಂದು ಆಡುತ್ತಿರುವ ನಾಟಕ. ಈ ಬಗ್ಗೆ ಎಲ್ಲಾ ನಾಯಕರ ಜತೆ ಚರ್ಚೆ ಮಾಡಿ ನಾಳೆ ಅಥವಾ ನಾಡಿದ್ದು ತಿಳಿಸುತ್ತೇವೆ,” ಎಂದು ಹೇಳಿದರು.

ಎಲ್ಲರಿಗೂ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂಬ ನಿರಾಣಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿಯಲ್ಲಿ ಯತ್ನಾಳ್ ಅವರಿಗೆ ಈ ವಿಚಾರದಲ್ಲಿ ತಗಾದೆ ಎತ್ತಿದರೆ ಪಕ್ಷದಿಂದ ಕಿತ್ತು ಹಾಕುವ ಬೆದರಿಕೆ ಹಾಕಿದ್ದಾರೆ. ಯತ್ನಾಳ್ ಅವರು ಈಗ ಈ ವಿಚಾರದಲ್ಲಿ ಹೇಳಿಕೆ ನೀಡಲಿ. ಬೆಂಬಲ ನೀಡಬೇಕು ಇಲ್ಲ ವಿರೋಧ ವ್ಯಕ್ತಪಡಿಸಬೇಕು. ಬಾಯಿ ಮುಚ್ಚಿಕೊಂಡಿರುವುದು ಏಕೆ? ಅಷ್ಟೆಲ್ಲ ಮಾತನಾಡುತ್ತಿದ್ದವರು ಈಗ ಯಾಕೆ ಮಾತನಾಡುತ್ತಿಲ್ಲ. ಸಿಎಂ ಖುದ್ದಾಗಿ ಈ ಬಗ್ಗೆ ನಿರ್ಧಾರ ಪ್ರಕಟಿಸಿಲ್ಲ ಏಕೆ? ಇವರು ಕೊಡುವ ಚಾಕಲೇಟ್ ಒಪ್ಪಲು ಸಾಧ್ಯವಿಲ್ಲ. ಇವರದು ಬರೀ ಮೋಸ. ಎಲ್ಲ ಸಮಾಜಗಳಿಗೂ ಬ್ರಹ್ಮಾಂಡ ಮೋಸ ಮಾಡಿದ್ದಾರೆ,” ಎಂದು ಆರೋಪಿಸಿದರು.

ಅಮಿತ್ ಶಾ ಅವರ ರಾಜ್ಯ ಪ್ರವಾಸ ಹಾಗೂ ಯೋಜನೆ ಘೋಷಣೆ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆಯೇ ಎಂದು ಕೇಳಿದಾಗ, “ಅಧಿಕಾರ ಇದ್ದಾಗ ಕೆಲಸ ಮಾಡದವರು ಅಧಿಕಾರ ಹೋಗುವ ಸಮಯದಲ್ಲಿ ಯೋಜನೆ ಘೋಷಣೆ ಮಾಡಿದರೆ ಪ್ರಯೋಜನವೇನು? ಉಳಿದಿರುವ 100 ದಿನಗಳಲ್ಲಿ ಯಾವ ಯೋಜನೆ ಜಾರಿ ಆಗುತ್ತದೆ? ಇದು ಕೇವಲ ಕಾಗದದ ಮೇಲೆ ಉಳಿಯುವ ಯೋಜನೆ ಅಷ್ಟೇ. ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 550 ಅನ್ನು ಜಾರಿ ಮಾಡಿಲ್ಲ. ನಮ್ಮ ಪಕ್ಷ ಕೊಟ್ಟಿದ್ದ 169 ಯೋಜನೆಗಳ ಪೈಕಿ 168 ಯೋಜನೆಗಳನ್ನು ಜಾರಿ ಮಾಡಿದ್ದೇವೆ” ಎಂದು ತಿಳಿಸಿದರು.

ಕ್ಯಾಲೆಂಡರ್ ಬದಲಾದರೆ ಸಾಲದು, ಕಾಯಕಗಳು ಬದಲಾಗಲಿ

https://pragati.taskdun.com/its-not-enough-if-the-calendar-changes-let-the-works-change/

ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ

https://pragati.taskdun.com/hindu-intercast-married-couple-convention/

ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಭಕ್ತಸಾಗರ

https://pragati.taskdun.com/thousends-of-devotees-came-to-siddeshwar-swamijis-darshan/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button