ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಆದಾಯ ತೆರಿಗೆ ಇಲಾಖೆ ದೈನಿಕ ಭಾಸ್ಕರ್ ಪತ್ರಿಕಾ ಕಚೇರಿ ಮೇಲೆ ಈಚೆಗೆ ನಡೆಸಿರುವ ದಾಳಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರು ವರ್ಷಗಳಿಂದ ಅದು ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನುವ ಅಂಶ ಬಯಲಾಗಿದೆ.
ಆದಾಯ ತೆರಿಗೆ ಇಲಾಖೆ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸುಮಾರು 700 ಕೋಟಿ ರೂ. ಮೊತ್ತದ ತೆರಿಗೆಯನ್ನು ಪಾವತಿಸಿಲ್ಲ ಎಂದು ಹೇಳಿದೆ.
ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿ ಮೇಲಿನ ದಾಳಿ ವೇಳೆಯಲ್ಲಿ, ಹಲವಾರು ನಿಯಮಗಳ ಉಲ್ಲಂಘನೆ ಮಾಡಿರುವುದು ಗೊತ್ತಾಗಿದೆ ಮತ್ತು ಹಲವಾರು ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ತಿಳಿಸಿದೆ. ಪ್ರಮೋಟರ್ಸ್ ಮತ್ತು ಉದ್ಯೋಗಿಗಳ ಹೆಸರಲ್ಲಿ 26 ಲಾಕರ್ ಗಳು ಪತ್ತೆಯಾಗಿವೆ. 2,200 ಕೋಟಿ ರೂ.ಗಳಿಗಿಂತ ಹೆಚ್ಚು ವ್ಯವಹಾರ ನಡೆದಿರುವುದು ಗೊತ್ತಾಗಿದೆ. ತನಿಖೆ ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಇಲಾಖೆ ತಿಳಿಸಿದೆ.
ಅನೇಕ ಕಂಪನಿಗಳನ್ನು ಉದ್ಯೋಗಿಗಳ ಹೆಸರಿನಲ್ಲಿ ನಡೆಸುತ್ತಿದೆ. ಅನೇಕ ಸಿಬ್ಬಂದಿಗಳ ಹೆಸರನ್ನು ಪಾಲುದಾರರು ಮತ್ತು ನಿರ್ದೇಶಕರಾಗಿ ಉಪಯೋಗಿಸಲಾಗಿದೆ.ಅಂತಹ ಕಂಪನಿಗಳ ಬಗ್ಗೆ ಅರಿವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಐಟಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತಮ ನಂಬಿಕೆಯಿಂದ ತಮ್ಮ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಸಹಿಯನ್ನು ಉದ್ಯೋಗದಾತರಿಗೆ ನೀಡಿದ್ದರು. ಅವರಲ್ಲಿ ಕೆಲವರು ಸಂಬಂಧಿಕರಿದ್ದಾರೆ. ಅವರು ಸ್ವಇಚ್ಚೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಪತ್ರಿಕೆಗಳಿಗೆ ಸಹಿ ಹಾಕಿದ್ದರು. ಆದರೆ ಕಂಪೆನಿಗಳ ವ್ಯವಹಾರ ಚಟುವಟಿಕೆಗಳ ಬಗ್ಗೆ ಯಾವುದೇ ಜ್ಞಾನ ಅಥವಾ ನಿಯಂತ್ರಣವನ್ನು ಹೊಂದಿರಲಿಲ್ಲ ಎಂದು ಐಟಿ ಹೇಳಿದೆ.
ಸುಮಾರು 6.3 ಕೋಟಿ ಓದುಗರನ್ನು ದೈನಿಕ್ ಭಾಸ್ಕರ್ ಗ್ರುಪ್ ಪತ್ರಿಕೆಗಳು ಹೊಂದಿವೆ. ಪತ್ರಿಕಾ ಕಚೇರಿ ಮೇಲೆ ದಾಳಿ ನಡೆದಿರುವ ಬಗ್ಗೆ ಸಂಪಾದಕರ ಸಂಘ ಕಳವಳ ವ್ಯಕ್ತಪಡಿಸಿ, ಈ ಬಗ್ಗೆ ದೂರು ಸಲ್ಲಿಸಲು ನಿರ್ಧರಿಸಿದ್ದವು. ದ್ವೇಷದಿಂದ ಈ ದಾಳಿ ನಡೆದಿದೆ ಎಂದೂ ದೂರಲಾಗಿತ್ತು.
ಆದರೆ ಇದೀಗ ಭಾರಿ ಪ್ರಮಾಣದ ವಂಚನೆ ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿರುವುದರಿಂದ ಪ್ರಕರಣ ಮುಂದಿನ ದಿನಗಳಲ್ಲಿ ಯಾವರೀತಿಯ ತಿರುವು ಪಡೆಯಲಿದೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ