*ಕರುಳು ಹಿಂಡುವ ದೃಶ್ಯ: ಮನೆ ಮೇಲೆ ಕುಸಿದು ಬಿದ್ದ ಗುಡ್ಡ: ಅವಶೇಷಗಳಡಿ ಸಿಲುಕಿರುವ ಮಹಿಳೆ ಇಬ್ಬರು ಪುಟ್ಟ ಮಕ್ಕಳು ಹೊರ ಬರಲಾಗದೇ ಪರದಾಟ!*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧರಾಕಾರವಾಗಿ ಸುರಿಯುತ್ತಿರುವ ಮಳೆ ಅವಾಂತರಕ್ಕೆ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಮಹಿಳೆ ಹಾಗೂ ಇಬ್ಬರು ಪುಟ್ಟ ಮಕ್ಕಳು ಅವಶೆಷಗಳಡಿ ಸಿಲುಕಿ ನರಳಾಡುತ್ತಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಈ ಘಟನೆ ನಡೆದಿದೆ. ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮನೆಯ ಪಕ್ಕದಲ್ಲಿದ್ದ ಬೃಹತ್ ಗುಡ್ದ ಮನೆ ಮೇಲೆ ಕುಸಿದಿದೆ. ಅವಶೇಷಗಳ ಅಡಿಯಲ್ಲಿ ತಾಯಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಸಿಲುಕಿದ್ದು ತಾಯಿಯ ತೋಳಿನಲ್ಲಿಯೇ ಮಗು ಸಿಲುಕಿಕೊಂಡಿದೆ. ತಾಯಿ ಮಗು ಹೊರಬರಲಾಗದೇ ಪರದಾಡುತ್ತಿರುವ ದೃಶ್ಯ ಕರುಳು ಹಿಂದುವಂತಿದೆ. ಇನ್ನೊಂದು ಮಗು ಕೂಡ ಮಣ್ಣಿನಡಿ ಸಿಲುಕಿಕೊಂಡಿದೆ. ಮನೆಯಲ್ಲಿದ್ದ ಇನ್ನೋರ್ವ ಮಹಿಳೆ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಮಣ್ಣಿನಡಿ ಸಿಲುಕಿದ್ದರೂ ಹೇಗೋ ಹೊರಗೆ ಬಂದು ಬಚಾವಾಗಿದ್ದಾರೆ.
ಈ ಭಾಗದಲ್ಲಿ ರಸ್ತೆ ವ್ಯವಸ್ಥೆ ಕೂಡ ಇಲ್ಲ ಹಾಗಾಗಿ, ರಕ್ಷಣಾ ತಂಡಗಳಾಗಲಿ, ಜೆಸಿಬಿಯಾಗಲಿ ಮನೆಯಬಳಿ ಹೋಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ವಿಳಮ್ಬವಾಗಿದೆ. ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಗುಡ್ದ ಕುಸಿದು ಬಿದ್ದಿದ್ದು, ಮಣ್ಣಿನಡಿ ಸಿಲುಕಿರುವ ಮಹಿಳೆ, ಮಕ್ಕಳನ್ನು ರಕ್ಷಿಸಲು ಹರಸಾಹಸ ಪಡಲಾಗುತ್ತಿದೆ.