Latest

ದಾಂಡೇಲಿ: ಉತ್ತರ ಕನ್ನಡದ ಪ್ರಮುಖ ಆಕರ್ಷಣೆ

ಪ್ರಗತಿವಾಹಿನಿ ವಿಶೇಷ                                                                                 ಸಹ್ಯಾದ್ರಿಯ ಬೆಟ್ಟಗಳ ಸಾಲಲ್ಲಿ ದಾಂಡೇಲಿ, ಅಂಬಿಕಾನಗರ, ಗಣೇಶಗುಡಿ, ಜೋಯಿಡಾ, ಕಾರವಾರ ಈ ಎಲ್ಲ ಪ್ರದೇಶಗಳು ದಟ್ಟ ಅರಣ್ಯ ಪ್ರದೇಶಗಳಿಂದ ಕೂಡಿದ್ದು, ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿವೆ. ಎತ್ತರದ ಹಸಿರು ಬೆಟ್ಟಗಳು, ಕಡಿದಾದ ಇಳಿಜಾರು ಪ್ರದೇಶದಲ್ಲಿ ತೊರೆಗಳಿಂದ ಕೂಡಿದ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಉಳವಿ,ಕವಳ, ಸಿಂಥೇರಿ ರಾಕ್, ಸೈಕ್ಸ್ ಪಾಯಿಂಟ್, ಡಿಗ್ಗಿ, ಅಣಶಿ ಫಾಲ್ಸ್, ಮೌಳಂಗಿ ಪ್ರಸಿದ್ಧ ನೋಡತಕ್ಕ ಸ್ಥಳಗಳು.

ಈ ಅರಣ್ಯದಲ್ಲಿ ಹುಲಿಗಳೊಂದಿಗೆ ಆನೆ, ಕರಡಿ, ಚಿರತೆ, ಕಪ್ಪು ಚಿರತೆ, ಜಿಂಕೆ, ಸಾರಂಗ, ಕಾಡು ಕೋಣಗಳು,ಹಂದಿಗಳು, ನರಿಗಳು, ನಾಯಿಗಳು, ಮಂಗ, ಕೋಡಗ ಲೆಕ್ಕವಿರದಷ್ಟು ಪಕ್ಷಿ ಸಮೂಹ, ಕಾಳಿಂಗ ಸರ್ಪಗಳು ಇತ್ಯಾದಿ ಜೀವಿಗಳು ವಾಸಿಸುತ್ತವೆ. ರಾತ್ರಿ ಹೊತ್ತಿನ ಸಂಚಾರ ತುಸು ಅಪಾಯಕಾರಿ. ವನ್ಯಜೀವಿಗಳು ಅಲ್ಲಲ್ಲಿ ಕಾಣಿಸಿಕೊಂಡ ಉದಾಹರಣೆಗಳಿವೆ. ದಾಳಿಗಳಾದ ವರದಿಗಳೂ ಇವೆ.

ದಾಂಡೇಲಿಯಿಂದ ಚೆನ್ನ ಬಸವಣ್ಣನ ನೆಲೆ ಪ್ರಸಿದ್ಧ ಕ್ಷೇತ್ರ ಉಳವಿಗೆ, ಕಾರವಾರಕ್ಕೆ ಹೋಗುವ ರಸ್ತೆಗಳಿವೆ. ಕಾರವಾರ ರಸ್ತೆಯು ಜೋಯಿಡಾ, ಅಣಶಿ ಮಾರ್ಗವಾಗಿ ಸದಾಶಿವಗಡಕ್ಕೆ ತಲುಪಿ, ಅಲ್ಲಿ ರಾಷ್ಟ್ರೀಯ ಹೆದ್ದಾರಿ NH66 ಸೇರುತ್ತದೆ. ಉಳವಿಯು ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರವಾಗಿದ್ದು, ರಾಜ್ಯವಲ್ಲದೇ ನೆರೆ ಹೊರೆಯ ರಾಜ್ಯಗಳಿಂದಲೂ ಭಕ್ತಾದಿಗಳು, ಜಾತ್ರೆಗೆಂದು ಪಾದಯಾತ್ರೆ, ಎತ್ತಿನ ಬಂಡಿ ಮತ್ತು ವಾಹನಗಳನ್ನು ಬಳಸಿ ಲಕ್ಷ ಲಕ್ಷ ಜನರು ಭೇಟಿ ಕೊಡುತ್ತಾರೆ.

 

ಅಣಶಿಯ ಬಳಿ ರಮ್ಯ ಮನೋಹರವಾದ ಜಲಪಾತವೊಂದು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುತ್ತದೆ. ಅಲ್ಲಲ್ಲಿ ಬೆಟ್ಟಗಳಿಂದಿಳಿದು ಬರುವ ಹಲವಾರು ಜಲಪಾತ ಮತ್ತು ತೊರೆಗಳಿವೆ. ಕೆಲವೊಮ್ಮೆ ಮಳೆಗಾಲದಲ್ಲಿ ಗುಡ್ಡಗಳ ಕುಸಿತದಿಂದಾಗಿ, ರಸ್ತೆಯ ಸಂಪರ್ಕ ಕಡಿತಗೊಂಡು ಸಂಚಾರಕ್ಕೆ ಅಡಚಣೆಯೂ ಆಗುತ್ತದೆ. ರಸ್ತೆಗಳು ಕೆಲವು ಭಾಗಗಳಲ್ಲಿ ಗುಂಡಿಗಳಾಗಿವೆ, ಪದರುಗಳೆದ್ದಿದ್ದೂ ಇದೆ. ಆದರೂ ಓಡಾಡಲು ಪರವಾಗಿಲ್ಲ. ಈ ಭಾಗಗಳಲ್ಲಿ ಹುಲಿ, ಕಪ್ಪು ಚಿರತೆ, ಕರಡಿ, ಕಾಳಿಂಗ ಸರ್ಪಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತವೆ.

ಜೋಯಿಡಾ ಮೊದಲು ಸೂಪಾ ಎಂಬ ಹೆಸರಿನಿಂದ ಪ್ರಚಲಿತದಲ್ಲಿತ್ತು. ಇದು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಜನ ವಸತಿ ಹೊಂದಿರುವ ಪ್ರದೇಶ. ಸೂಪಾದ ಬಳಿ ಕಾಳಿ ನದಿಗೆ ಆಣೆಕಟ್ಟು ಕಟ್ಟಲಾಗಿದೆ. ಇದು ದಾಂಡೇಲಿಯಿಂದ 25 ಕಿ ಮೀ ದೂರದಲ್ಲಿದೆ. ಈ ತಾಲೂಕಿನ ‘ಡಿಗ್ಗಿ’ ಎಂಬಲ್ಲಿ ಕಾಳಿ ನದಿ ಹುಟ್ಟುತ್ತದೆ. ಈ ನದಿಯು ಮೊಸಳೆಗಳಿಂದ ತುಂಬಿದ್ದು, ದಾಂಡೇಲಿ, ಮತ್ತು ನದಿ ಪಾತ್ರದ ಜನರು ವರ್ಷಕ್ಕಿಲ್ಲವೆಂದರೂ ಮೂರು ನಾಲ್ಕು ಜನ ಬಲಿಯಾಗುತ್ತಲೇ ಇರುತ್ತಾರೆ. ಜೋಯಿಡಾದಿಂದ ಕುಂಬಾರವಾಡಕ್ಕೆ ಹೋಗುವ ರಸ್ತೆಯಲ್ಲಿ, ಕುಂಬಾರವಾಡಕ್ಕಿಂತ ಎರೆಡು ಕಿ ಮೀ ಮುಂಚೆ ಬಲಗಡೆಗೆ ಒಂದು ರಸ್ತೆ ಕಾಣಿಸುತ್ತದೆ. ಅಲ್ಲಿಂದ ಸರಿ ಸುಮಾರು 28 ಕಿ ಮೀ ಸಾಗಿದರೆ ‘ಡಿಗ್ಗಿ’ ಸಿಗುತ್ತದೆ. ಅಲ್ಲಿ ಸಿದ್ದಿ (ಆಫ್ರಿಕಾ ಮೂಲದ ನೀಗ್ರೋ ) ಬುಡಕಟ್ಟು ಕುಟುಂಬಗಳು ಸಿಗುತ್ತವೆ. ಒಳಗಡೆ ಹಲವಾರು ಸಮೂಹಗಳಿದ್ದು, ಸರಕಾರಿ ಪ್ರಾಥಮಿಕ ಶಾಲೆಯೂ ಇದೆ. ದಟ್ಟ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಕಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ಇದು ಶ್ಲಾಘನೀಯ ಸಂಗತಿ.
ಇಲ್ಲಿಂದ ಗೋವಾ ಅತೀ ಸಮೀಪದಲ್ಲಿದೆ ಬೋಂಡೇಲಿ ಗ್ರಾಮದಿಂದ ಕೇವಲ 20 ಕಿ ಮೀ ಸಾಗಿದರೆ ಗೋವಾ ರಾಜ್ಯಕ್ಕೆ ತಲುಪುತ್ತೇವೆ.

ಡಿಗ್ಗಿ ಯಲ್ಲಿ ‘ಗೌಳಾ ದೇವಿ’ ಗ್ರಾಮ ದೇವತೆಯ ಉತ್ಸವ ಪ್ರತಿ ವರ್ಷವೂ ಹೋಳಿ ಹುಣ್ಣಿಮೆಯ ದಿನ ಜರುಗುತ್ತದೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಜನರ ಸಂಗಮವಾಗುತ್ತದೆ. ಇದು ಜಾಗೃತ ದೇವತೆ ಎಂದು ನಂಬಿ ಬರುವ ಭಕ್ತರ ಸಂಖ್ಯೆ ಅಧಿಕ. ಸುತ್ತ ಮುತ್ತಲೂ ಬೃಹದಾಕಾರದ ಮರಗಿಡಗಳಿಂದ ಕೂಡಿದ್ದು, ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಕೊಂಚ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಸಂಚಕಾರವಿದೆ. ಇಲ್ಲಿಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಕಾವಲಿರುತ್ತಾರೆ. ಅಕ್ರಮಗಳಿಗೆ ತಡೆ ಹಾಕಿರುವುದು ಸಂತೋಷದ ಸಂಗತಿ. ಕೆಲ ಗ್ರಾಮಗಳ ಸ್ಥಳಾಂತರದ ಕಾರ್ಯವೂ ಜಾರಿಯಲ್ಲಿದೆ. ಈ ಅರಣ್ಯದಲ್ಲಿ ಮಾವು, ಹುಣಸೆ, ಸಾಗುವಾನಿ, ಹೊನ್ನೆ, ಮತ್ತಿ, ಮುತ್ತುಗ, ನೇರಳೆ, ಹಲಸು ಹೀಗೆ ನಾನಾ ಜಾತಿಗೆ ಸೇರಿದ ಅಸಂಖ್ಯಾತ ಗಿಡ ಮರಗಳಿವೆ.

 

ದಾಂಡೇಲಿ ವನ್ಯಜೀವಿ ಅಭಯಾರಣ್ಯ ತಪ್ಪಲಲ್ಲಿರುವ ‘ಸಿಂಥೇರಿ ರಾಕ್’ ಇದು 300 ಅಡಿ ಎತ್ತರದ ಏಕಶಿಲೆಯ ಗ್ರಾನೈಟ್ ಆಗಿದೆ. ಇಲ್ಲಿ ಕನೇರಿ ನದಿಯು ಹರಿಯುವುದು, ಎಲ್ಲರ ಮನಸಿಗೂ ಮುದ ನೀಡುವ ಅದ್ಭುತ ತಾಣ. ಈ ಬಂಡೆಯ ಮೇಲಿನ ಟೊಳ್ಳುಗಳಲ್ಲಿ ಸಾವಿರಾರು ಪಾರಿವಾಳಗಳು ಮೂಲೆಗಳಲ್ಲಿ ಈ ಬಂಡೆಗಳ ಸಂದುಗಳನ್ನೇ ತಮ್ಮ ಮನೆಯಾಗಿ ಮಾಡಿಕೊಂಡಿವೆ. ಮತ್ತು ಜೇನುನೊಣಗಳ ಗೂಡುಗಳನ್ನು ಕಾಣುತ್ತೀರಿ. ಅನುಮತಿಯೊಂದಿಗೆ ಮುನ್ನೆಚ್ಚರಿಕೆಯ ಕ್ರಮಗಳನ್ನನುಸರಿಸಿ,ಸುರಕ್ಷಿತವಾಗಿ ಹೋಗಬಹುದು.

ದಾಂಡೇಲಿಯಿಂದ 15 ಕಿ ಮೀ ಗಳ ಅಂತರದಲ್ಲಿ ಅಂಬಿಕಾನಗರ ಇದೆ. ಇಲ್ಲಿ ಪ್ರಕೃತಿಯು ಹೃನ್ಮನಕ್ಕೆ ಕಚಗುಳಿ ಇಡುವಂತಿದೆ. ಇಲ್ಲಿಯ ಸೈಕ್ಸ್ ಪಾಯಿಂಟ್ ಉದ್ಯಾನದಿಂದ ನೂರಾರು ಅಡಿಗಳ ಕೆಳಗೆ ಕಾಳಿಯು ಮೈದುಂಬಿ ಹರಿಯುವ ಚೆಂದಕ್ಕೆ ಮಾರು ಹೋಗದೇ ಇರಲಾರಿರಿ. ಆದರೆ ಪಾಯಿಂಟ್ ಗೆ ಹೋಗುವ ಮುಂಚೆ ಗೇಟ್ ಬಳಿಯಲ್ಲಿ ಅನುಮತಿ ಪಡೆಯದಿದ್ದಲ್ಲಿ ಒಳಗೆ ಪ್ರವೇಶವಿರದು.

ದಾಂಡೇಲಿಯಿಂದ ಗಣೇಶಗುಡಿಗೆ 19 ಕಿ ಮೀ ಅಂತರವಿದೆ. ಇಲ್ಲಿ ಕಾಳಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಲಾಗಿದೆ. ಇಲ್ಲಿ ನಾನಾ ಬಗೆಯ ಪಕ್ಷಿಗಳಿವೆ. ಅಕ್ಟೋಬರ್‌ ನಿಂದ ಮಾರ್ಚ್ ವರೆಗೆ ನೋಡಲು ಸೂಕ್ತ ಸಮಯವಾಗಿದೆ.

 

ಕವಳ ಇದೊಂದು ಗುಹೆ ಇಲ್ಲಿ ಪ್ರಕೃತಿ ನಿರ್ಮಿತ ಶಿವ ಲಿಂಗ ಅದ್ಭುತ ! ವರ್ಷಕ್ಕೆ ಒಂದೇ ಬಾರಿ ಇಲ್ಲಿ ಪ್ರವೇಶವಿದೆ. ಅದು ಶಿವ ರಾತ್ರಿಯ ದಿನ ಮಾತ್ರ. ನಂತರದ ದಿನಗಳಲ್ಲಿ ಗುಹೆಯ ಬಳಿ ಯಾರಿಗೂ ಪ್ರವೇಶವಿಲ್ಲ. ಇದು ಹುಲಿ, ಚಿರತೆಗಳ ತಾಣ. ಸಾವಿರ ಮೆಟ್ಟಿಲುಗಳನ್ನು ಇಳಿದು ತಲುಪಬಹುದಾದ ಗುಹೆ ತಲುಪಲು ಸಶಕ್ತರಿರಬೇಕು. ಆರೋಗ್ಯ ಸಮಸ್ಯೆ ಇದ್ದವರು ಬಿಡುವುದು ಸೂಕ್ತ. ಶಿವರಾತ್ರಿಯಲ್ಲಿ ಇದನ್ನು ನೋಡಲು ಲಕ್ಷೋಪಲಕ್ಷ ಜನ ನೆರೆಯ ರಾಜ್ಯಗಳಿಂದಲೂ ಆಗಮಿಸುತ್ತಾರೆ. ಶಿವಲಿಂಗ ಅಡಿಕೆ ವೀಳ್ಯದೆಲೆಯ ಆಕಾರವನ್ನು ಹೋಲುತ್ತದೆ. ಹಾಗಾಗೀ ಕನ್ನಡದ ಪದ ಕವಳ ಎಂಬುದಾಗಿ ಬಂದಿದೆ ಎಂಬುದು ಸ್ಥಳೀಯರ ವರ್ಣನೆ.

ಲೇಖನ : ರವಿ ಕರಣಂ.

ಚಿತ್ರ ಕೃಪೆ : Google websites.

ಕರ್ನಾಟಕ – ಮಹಾರಾಷ್ಟ್ರ ಉನ್ನತ ಮಟ್ಟದ ಸಭೆ ಆರಂಭ: ಉಭಯ ರಾಜ್ಯಗಳಲ್ಲಿ ಕುತೂಹಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button