Latest

ಕಾಶ್ಮೀರಿ ಫೈಲ್ಸ್ ಗೆ ನೀಡಿದ‌ ಪ್ರೋತ್ಸಾಹವನ್ನು ದಂಡಿ ಚಿತ್ರಕ್ಕೂ ನೀಡಿ: ನಿರ್ದೇಶಕ ವಿಶಾಲ್ ರಾಜ್

 

*ಕಾಶ್ಮೀರಿ ಫೈಲ್ಸ್ ನಂತೆ ದಂಡಿ ಚಿತ್ರಕ್ಕೂ ಪ್ರೋತ್ಸಾಹ ಕೊಡಿ – ವಿಶಾಲ್ ರಾಜ್ ಮನವಿ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಏ.8ರಂದು ಬಿಡುಗಡೆ ಆಗಲಿರುವ ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಒಳಗೊಂಡ ದಂಡಿ ಚಲನಚಿತ್ರಕ್ಕೂ ಕಾಶ್ಮೀರಿ ಫೈಲ್ಸ್ ಗೆ ನೀಡಿದ‌ ಪ್ರೋತ್ಸಾಹವನ್ನು ನೀಡುವಂತೆ ಚಿತ್ರದ ನಿರ್ದೇಶಕ‌ ವಿಶಾಲ್ ರಾಜ್ ಮನವಿ ಮಾಡಿಕೊಂಡಿದ್ದಾರೆ.

ಶಿರಸಿಯ ಸಾಮ್ರಾಟದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ, ದಂಡಿ ಸಿನಿಮಾ ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರ ಕಥೆ ಒಳಗೊಂಡಿದೆ. ಗುಜರಾತ್ ನಲ್ಲಿ ನಡೆದ ಹೋರಾಟಗಳು ಅಂದಿನ ಕಾಲದಲ್ಲಿ ಒಂದೇ ಸಮಯಕ್ಕೆ ಇಲ್ಲೂ ನಡೆದಿವೆ ಎಂಬುದೇ ಅಚ್ಚರಿ. ಚಾರಿತ್ರಕವಾದ ದಂಡಿಯ‌ ಈ ಚರಿತ್ರೆ ಇಡೀ ಕರಾವಳಿ ಕರ್ನಾಟಕದ ಸುತ್ತಲಿ‌ನ ಉಪ್ಪಿನ ಸತ್ಯಾಗ್ರಹದ ಚರಿತ್ರೆಯೇ ಆಗಿದೆ. ಜಿಲ್ಲೆಯ ಅಗೇರ, ಮೊಗೇರ, ಹಾಲಕ್ಕಿ, ಗೌಡ ಸಾರಸ್ವತ, ಹವ್ಯಕ, ದೇಶಾವರಿ‌ ಬ್ರಾಹ್ಮಣ ಸಮುದಾಯಗಳು, ನಾಡವರು, ಖಾರ್ವಿ, ಕುಣಬಿ ಸಮುದಾಯಗಳು ತಮ್ಮ ಹೋರಾಟದ ರೀತಿಯನ್ನು ಚಳುವಳಿಯ ಆಶಯದಂತೆ ರೂಪಿಸಿಕೊಂಡ‌ ಕಥನದ ಕಾದಂಬರಿಯ ಎಳೆಯೇ ದಂಡಿ ಚಿತ್ರವಾಗಿದೆ ಎಂದರು.
ಉತ್ತರ ಕನ್ನಡದ ಹೊನ್ನಾವರ ಸೇರಿಂದಂತೆ ಸಂಪೂರ್ಣ ಉತ್ತರ ಕನ್ನಡದಲ್ಲಿ ಈ ಚಿತ್ರ ಚಿತ್ರೀಕರಣಗೊಂಡಿದೆ. 132ಕ್ಕೂ ಅಧಿಕ ಕಲಾವಿದರು ಇದ್ದು, ಬಹುತೇಕವಾಗಿ ಜಿಲ್ಲೆಯ ಕಲಾವಿದರೇ ಆಗಿದ್ದು ಎರಡು ತಾಸಿನ ಎಂಟು‌ ನಿಮಿಷದ ಚಿತ್ರವಾಗಿದೆ ಎಂದರು.

ರಾಗಂ ಕಾದಂಬರಿ ಆಧರಿತ ಚಿತ್ರವನ್ನು ಉಷಾರಾಣಿ ‌ಎಸ್.ಪಿ ನಿರ್ಮಾಣ ಮಾಡಿದ್ದು, ಯುವಾನ್ ದೇವ್ ನಾಯಕನಾಗಿ, ಶಾಲಿನಿ ಭಟ್ಟ‌ ನಾಯಕಿಯಾಗಿ ದಂಡಿಯ ಜವಬ್ದಾರಿ ನಿರ್ವಹಿಸಿದ್ದಾರೆ. ಹಿರಿಯ ಕಲಾವಿದರಾದ ತಾರಾ‌ ಅನುರಾಧ, ಸುಚೇಂದ್ರ ‌ಪ್ರಸಾದ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ಈಗಾಗಲೇ ಈ ಚಿತ್ರವು ಬೆಂಗಳೂರಿನಲ್ಲಿ ಫಿಲ್ಮ್ ಫೆಸ್ಟ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಅವರಿಗೂ ಚಿತ್ರ ತೋರಿಸುವ ಆಸೆ ಇದೆ. ಹಿಂದೆ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ತೋರಿಸಲು ಪ್ರತ್ಯೇಕ ಚಿತ್ರಮಂದಿರಗಳೂ ಇದ್ದವು. ಯಾವುದೇ ಚಿತ್ರಕ್ಕೆ ಪ್ರಶಸ್ತಿ ಬಂದರೆ ಜನರಿಗೆ ಅದನ್ನು ತಲುಪಿಸಲು ಚಿತ್ರಮಂದಿರ ಅಗತ್ಯವಿದೆ. ಇಂಥ ಸಿನೇಮಾಕ್ಕೆ ಥಿಯೇಟರ್ ಸಿಕ್ಕರೆ ಹತ್ತು ನಿರ್ಮಾಪಕರು, ನಿರ್ದೇಶಕರು ಹುಟ್ಟಿಕೊಳ್ಳುತ್ತಾರೆ. ಇದ್ಯಾವುದೂ ಇಲ್ಲದೇ ಐತಿಹಾಸಿಕ, ಕಲಾ ಚಿತ್ರಗಳನ್ನು ಜನರಿಗೆ ತಲುಪಿಸುವದು ಹೇಗೆ? ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ನಿರ್ದೇಶಕ ವಿಶಾಲ್ ರಾಜ್ ಹೇಳಿದರು.

ನಿರ್ಮಾಪಕಿ ಉಷಾರಾಣಿ,‌ ನಟ ಯುವಾನ್ ದೇವ, ಶಾಲಿನಿ ಭಟ್ಟ, ವೆಂಕಟೇಶ ಮೇಸ್ತ, ಭವಾನಿ ಶಂಕರ ಇತರರು ಇದ್ದರು.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button