ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಜಾಮೀನಿಗಾಗಿ ಒದ್ದಾಟ ನಡೆಸಿದ್ದಾರೆ. ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೂಡಲಾಗುತ್ತಿದೆ.
ಈ ನಡುವೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದು, ಡಿಸ್ಕ್ ಸಮಸ್ಯೆಯಿದೆ, ಸರ್ಜರಿ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಚಿಕಿತ್ಸೆ ಹಾಗೂ ಸರ್ಜರಿಗಾಗಿ ಜಾಮೀನು ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ನಿನ್ನೆ ನಡೆಸಿದ್ದ ಹೈಕೋರ್ಟ್, ಇಂದು ಮಧ್ಯಾಹ್ನಕ್ಕೆ ಅರ್ಜಿ ವಿಚಾರಣೆ ಮುಂದೂಡಿತ್ತು. ಇಂದು ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲ ನಾಗೇಶ್ ಅವರು, ದರ್ಶನ್ ಗೆ ಡಿಸ್ಕ್ ಸಮಸ್ಯೆಯಿದ್ದು, ಸರ್ಜರಿ ಮಾಡಿಸಬೇಕು ಎಂದು ವೈದ್ಯಕೀಯ ವರದಿ ಬಂದಿದೆ. ಸರ್ಜರಿ ಮಾಡಿಸದಿದ್ದರೆ ಅವರ ಒಂದು ಕಾಲಿಗೆ ಪಾರ್ಶ್ವವಾಯುವಾಗಬಹುದು. ಜೀವನಪರ್ಯಂತ ಸಮಸ್ಯೆ ಎದಿರಿಸಬೇಕಾಗಬಹುದು. ಹಾಗಾಗಿ ತಕ್ಷಣ ಅವರಿಗೆ ಸರ್ಜರಿ ಅಗತ್ಯವಿದೆ ಜಾಮೀನು ಮಂಜೂರು ಮಾಡುವಂತೆ ಕೋರಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾ.ವಿಶ್ವಜಿತ್ ಶೆಟ್ಟಿ, ಆರೋಪಿ ಯಾವ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಬೇಕೆಂದುಕೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ದರ್ಶನ್ ಪರ ವಕೀಲ ನಾಗೇಶ್, ಮೈಸೂರು ಅಪೋಲೋ ಆಸ್ಪತ್ರೆ ಎಂದಿದ್ದಾರೆ. ಇದಕ್ಕೆ ನ್ಯಾಯಾಧೀಶರು, ಈಗಾಗಲೇ ನಿಮ್ಮದೇ ಆಸ್ಪತ್ರೆ ವೈದರಿಂದ ವರದಿ ಪಡೆದಿದ್ದೀರಿ. ಹಾಗಾಗಿ ಬೇರೆ ಆಸ್ಪತ್ರೆ ವೈದ್ಯರಿಂದ ಸೆಕೆಂಡ್ ಒಪಿನಿಯನ್ ಪಡೆಯಬಹುದಲ್ಲಾ? ಎಂದಿದ್ದಾರೆ. ಅದಕ್ಕೆ ವಕೀಲ ನಾಗೇಶ್ ಸೆಕೆಂಡ್ ಒಪಿನಿಯನ್ ಯಾಕೆ ಪಡೆದುಕೊಳ್ಳಬೇಕು? ವೈದರು ಸರ್ಜರಿ ಆಗಬೇಕು ಎಂದಿದ್ದಾರೆ ಎಂದು ವಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾ. ವಿಶ್ವಜಿತ್ ಶೆಟ್ಟಿ, ಬೇರೆ ಸರ್ಕಾರಿ ಆಸ್ಪತ್ರೆಯಿಂದ ಮತ್ತೊಂದು ಒಪಿನಿಯನ್ ಪಡೆಯಬಹುದು. ಅಥವಾ ಯಾವ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಬೇಕು ಎಂದುಕೊಂಡಿದ್ದಾರೆ ಅದೇ ಆಸ್ಪತ್ರೆ ವೈದ್ಯರಿಂದ ಸೆಕೆಂಡ್ ಒಪಿನಿಯನ್ ಪಡೆಯುವುದು ಉತ್ತಮ. ಅಲ್ಲದೇ ಈಗಾಗಲೇ ವರದಿ ನೀಡಿದ ವೈದರು ಆರೋಪಿಗೆ ಸರ್ಜರಿ ಆಗಬೇಕು ಎಂದಿದ್ದಾರೆ ಹೊರತು ತಕ್ಷಣ ಆಗಬೇಕು ಎಂದಾಗಲಿ, ಇಂತಿಷ್ಟು ಅವಧಿಯಲ್ಲಿ ಸರ್ಜರಿ ಆಗದಿದ್ದರೆ ಅಪಾಯ ಎಂದಾಗಲಿ ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ದರ್ಶನ್ ಜಾಮೀನು ಅರ್ಜಿಯ ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಟ ದರ್ಶನ್ ಗೆ ನಾಳೆ ಜಾಮೀನು ಸಿಗಲಿದೆಯೇ? ಅಥವಾ ಜೈಲು ವಾಸವೇ ಮುಂದುವರೆಯಲಿದೆಯೇ? ಕಾದುನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ