ಅನ್ನ ಸಂತರ್ಪಣೆಗೆ ಮತ್ತೊಂದು ಹೆಸರೇ ಬಂಡಿಗಣಿ ಶ್ರೀಮಠ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಎಲ್ಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾಗಿದ್ದು, ಹಸಿದ ಹೊಟ್ಟೆಗೆ ಸತತ ಅನ್ನ ನೀಡುತ್ತಿರುವ ಬಂಡಿಗಣಿ ಶ್ರೀಗಳ ಕಾರ್ಯ ಪ್ರಶಂಸನೀಯವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಅರಭಾವಿ ಸತ್ತಿಗೇರಿ ತೋಟದಲ್ಲಿ ಶುಕ್ರವಾರ ರಾತ್ರಿ ದಾಸೋಹ ರತ್ನ ದಾನೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಿದ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಡಿಗಣಿ ಮಠದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸೇವೆ ಇಡೀ ನಾಡಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಪ್ರತಿ ವರ್ಷದಲ್ಲಿ 282 ಧಾರ್ಮಿಕ ಸ್ಥಳಗಳಲ್ಲಿ ಶ್ರೀಗಳು ಅನ್ನ ಸಂತರ್ಪಣೆ ಮಾಡುತ್ತಾರೆ. ಕರ್ನಾಟಕವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಅಸಂಖ್ಯ ಭಕ್ತ ಸಮೂಹವನ್ನು ಹೊಂದಿರುವ ಬಂಡಿಗಣಿ ಶ್ರೀಗಳು ಇಡೀ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ದೇಶದಲ್ಲಿ ಸಾಕಷ್ಟು ಜನ ಸಿರಿವಂತರಿದ್ದರೂ ಬೇರೆಯವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆ ಬರುವುದಿಲ್ಲ. ಅಂತಹದ್ದರಲ್ಲಿ ಬಂಡಿಗಣಿ ಶ್ರೀಗಳು ವರ್ಷದ 365 ದಿನಗಳಲ್ಲಿ 282 ದಿನಗಳ ಕಾಲ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಸ್ವತಃ ತಾವೇ ಮುಂದಾಳತ್ವವಹಿಸಿ ಸಾವಿರಾರು ಭಕ್ತ ಸಮೂಹಕ್ಕೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ರಾಜ್ಯವಲ್ಲದೇ ನೆರೆಯ ಸುತ್ತಮುತ್ತ ರಾಜ್ಯಗಳಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀಮಠದ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು ಎಂದು ಅವರು ಹೇಳಿದರು.
12 ವರ್ಷಗಳ ಹಿಂದೆ ಶ್ರೀಮಠದ ಸಂಪರ್ಕಕ್ಕೆ ಬಂದಿರುವ ತಮಗೆ ಶ್ರೀಗಳ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅಸಂಖ್ಯೆ ಭಕ್ತರನ್ನು ಹೊಂದಿರುವ ಶ್ರೀಮಠಕ್ಕೆ ಹೋಗುವ ಸಂಕಲ್ಪ ಮಾಡಿದ್ದೇನೆ. ಇಷ್ಟರಲ್ಲಿಯೇ ಬಂಡಿಗಣಿ ಮಠಕ್ಕೆ ತೆರಳಿ ದಾಸೋಹ ಚಕ್ರವರ್ತಿ ದಾನೇಶ್ವರ ಸ್ವಾಮೀಜಿಗಳ ದರ್ಶನ ಪಡೆಯುವುದಾಗಿ ಹೇಳಿದರು.
ದೇವರು ಎಲ್ಲರಿಗೂ ಎಲ್ಲ ಭಾಗ್ಯವನ್ನು ನೀಡುತ್ತಾನೆ. ಮೊದಲಿನಿಂದಲೂ ದೇವರನ್ನು ಪೂಜ್ಯ ಭಾವನೆಯಿಂದ ನೋಡುತ್ತ ಪೂಜಿಸಿ ಆರಾಧಿಸುತ್ತಿರುವ ನಾವು ಧಾರ್ಮಿಕ ಕಳಕಳಿಯನ್ನು ಅಳವಡಿಸಿಕೊಂಡಿದ್ದೇವೆ. ನಮ್ಮಿಂದ ಒಳ್ಳೆಯ ಕೆಲಸ ನಡೆಯಬೇಕು. ಮಾಡಿದರೆ ಒಳ್ಳೆಯದನ್ನೇ ಬಗೆಯಬೇಕು. ಒಂದು ವೇಳೆ ಕೆಟ್ಟ ಕೆಲಸ ಮಾಡುವ ಪ್ರಸಂಗ ಬಂದರೆ ಅದರಿಂದ ದೂರ ಉಳಿಯಬೇಕೇ ಹೊರತು ಎಂದಿಗೂ ಯಾರಿಗೂ ಕೆಟ್ಟದ್ದನ್ನು ಮಾಡಬಾರದು. ಬಂಡಿಗಣಿ ಶ್ರೀಗಳು ಸಕಲರಿಗೂ ಒಳ್ಳೆಯದನ್ನು ಮಾಡುತ್ತ ಹಸಿದವರಿಗೆ ಅನ್ನ ನೀಡುತ್ತ ದಾಸೋಹ ಚಕ್ರವರ್ತಿ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಗಳ ಆದರ್ಶ ತತ್ವವನ್ನು ನಾವೆಲ್ಲರೂ ಪಾಲಿಸಬೇಕಿದೆ. ಜೊತೆಗೆ ಶಿಕ್ಷಣಕ್ಕೂ ಸಹ ಹೆಚ್ಚಿನ ಒತ್ತು ನೀಡಬೇಕಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಪಾಲಕ-ಪೋಷಕರು ಮುಂದೆ ಬರಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದ ನೇತೃತ್ವವನ್ನು ಬಸವಗೋಪಾಲ ನೀಲಮಾಣಿಕ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿಗಳು ವಹಿಸಿದ್ದರು. ನಂತರ ನೆರೆದ ಅಪಾರ ಭಕ್ತ ಸಮೂಹಕ್ಕೆ ಆಶೀರ್ವಚನ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿದರು. ವೇದಿಕೆಯಲ್ಲಿ ಕಪರಟ್ಟಿಯ ವೇದಮೂರ್ತಿ ಬಸವರಾಜ ಹಿರೇಮಠ, ಅಲ್ಲಪ್ಪ ಗಣೇಶವಾಡಿ, ಹಿಡಕಲ್ ಡ್ಯಾಂ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಪ್ರಭಾಶುಗರ ನಿರ್ದೇಶಕ ಶಿವಲಿಂಗ ಪೂಜೇರಿ, ಭೀಮಶಿ ಹುಕ್ಕೇರಿ, ಯಲ್ಲಪ್ಪ ಸತ್ತಿಗೇರಿ, ಗೂಳಪ್ಪ ಮಾನೆಪ್ಪಗೋಳ, ಈರಪ್ಪ ಮದಿಹಳ್ಳಿ, ಭೀಮಶಿ ಸಣ್ಣಲಗಮನ್ನವರ, ಹಣಮಂತ ಸೊಲ್ಲಾಪುರೆ, ಅಡಿವೆಪ್ಪ ಬಿಲಕುಂದಿ, ಭೀಮಶಿ ಮಾಳೇದವರ, ಮಾನಿಂಗ ಮೂಡಲಗಿ, ದುಂಡಪ್ಪ ಬೆಳವಿ, ದುಂಡಪ್ಪ ಸತ್ತಿಗೇರಿ, ಮಹಾನಿಂಗ ಜೋಣಿ, ಭೀಮಶಿ ಅಂತರಗಟ್ಟಿ, ಭೀಮಶಿ ಬಂಗಾರಿ, ಅಪ್ಪಯ್ಯ ಒಬ್ಬಟಗಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೆರೆದ ಅಪಾರ ಭಕ್ತ ಸಮೂಹದಿಂದ ಬಂಡಿಗಣಿ ಶ್ರೀಗಳಿಗೆ ಬೃಹತ್ ಗಾತ್ರದ ಹೂವಿನ ಹಾರ, ಪುಷ್ಪಾರ್ಪಣೆ ಜರುಗಿತು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಬಂಡಿಗಣಿ ಶ್ರೀಗಳನ್ನು ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.
ಶ್ರೀ ಮಹಾಲಕ್ಷ್ಮಿ ನೂತನ ದೇವಸ್ಥಾನ ಉದ್ಘಾಟಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ