Kannada NewsKarnataka News

ಡಿ.ಬಿ.ಇನಾಮದಾರ ಕಳಂಕರಹಿತ ರಾಜಕಾರಣಿಯಾಗಿದ್ದರು – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೆಳಗಾವಿ ಜಿಲ್ಲೆ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿ ಡಿ.ಬಿ.ಇನಾಮದಾರ ಕಳಂಕರಹಿತವಾಗಿ ರಾಜಕಾರಣವನ್ನು ಹೇಗೆ ಮಾಡಬಹುದೆನ್ನುವುದನ್ನು ತೋರಿಸಿ ನಮಗೆಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಸೋಮವಾರ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯದ ಪರವಾಗಿ ಅವರು ಮಾತನಾಡುತ್ತಿದ್ದರು. ಇನಾಮದಾರ ತಮ್ಮದೇ ಶೈಲಿಯಲ್ಲಿ ರಾಜಕಾರಣ ಮಾಡಿದ್ದಾರೆ. ಜಿಲ್ಲೆಗೆ ಅನೇಕ ಯೋಜನೆಗಳನ್ನು ತರಲು ಪ್ರಯತ್ನಿಸಿ, ರಾಜಕಾರಣವನ್ನು ಕಳಂಕರಹಿತವಾಗಿ ಮಾಡಿ ಮತ್ತು ಸಾಮಾಜಿಕ ಕಳಕಳಿ ಹೊಂದಿ ನಮಗೆಲ್ಲ ರಾಜಕಾರಣವನ್ನು ಯಾವ ರೀತಿ ಮಾಡಬೇಕೆಂದು ತೋರಿಸಿ ಹೋಗಿದ್ದಾರೆ ಎಂದು ಸ್ಮರಿಸಿದರು.

6 -7 ಬಾರಿ ಶಾಸಕರಾಗಿ, ಸಚಿವರಾಗಿ, ಯಾರಿಗೂ ಕಷ್ಟ ಕೊಡದೆ, ವಿರೋಧ ಪಕ್ಷದಲ್ಲಿರಲಿ, ಆಡಳಿತ ಪಕ್ಷದಲ್ಲಿರಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ ರಾಜಕಾರಣ ಮಾಡಿದರು. ಮಲಪ್ರಭ ಸಕ್ಕರೆ ಕಾರ್ಖಾನೆ ಮುಚ್ಚುವ ಸಂದರ್ಭದಲ್ಲಿದ್ದಾಗ ಪುನಶ್ಚೇತನ ಮಾಡಿ ರೈತರಿಗೆ ನೆರವಾದರು. ನಮ್ಮ ಭಾಗದಲ್ಲಿ ಅವರನ್ನು ಎಲ್ಲರೂ ಧಣಿ ಎಂದು ಕರೆಯುತ್ತಿದ್ದರು. ಯಾರೂ ಹೆಸರು ಹೇಳಿ ಕರೆಯುತ್ತಿರಲಿಲ್ಲ. ಕಿತ್ತೂರು ಚನ್ನಮ್ಮ ಸೈನಿಕ ಶಾಲೆಯ ಅಧ್ಯಕ್ಷರಾಗಿ ಶಾಲೆಯನ್ನು ಮುಂದೆ ತರಲು ಸಾಕಷ್ಟು ಶ್ರಮಿಸಿದ್ದರು. ಅವರನ್ನು ಕಳೆದುಕೊಂಡು ಬೆಳಗಾವಿ ಜಿಲ್ಲೆಯ ರಾಜಕಾರಣ ಬಡವಾಗಿದೆ. ಅಂತವರು ರಾಜಕಾರಣದಲ್ಲಿ ಇರಬೇಕಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅನುಯಾಯಿಗಳಿಗೆ, ಕುಟುಂಬದ ಸದಸ್ಯರಿಗೆ ಭಗವಂತ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಬ್ಬಾಳಕರ್ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button