ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-ರಾಜ್ಯದಲ್ಲಿ ಪ್ರವಾಹ ಅಪ್ಪಳಿಸಿ 2 ತಿಂಗಳಾಗಿದೆ. ಕೇಂದ್ರದಿಂದ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರಕಾರವಿರುವುದರಿಂದ ಹೆಚ್ಚಿನ ಪರಿಹಾರ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಭ್ರಮನಿಸನವಾಗಿದೆ.
ರಾಜ್ಯ ಸರಕಾರದ ಬಳಿ ಪರಿಹಾರ ಕಾರ್ಯಕ್ಕೆ ದುಡ್ಡಿಲ್ಲ. ಇದರಿಂದಾಗಿ ಮುಖ್ಯಮಂತ್ರಿ ಕಂಗಾಲಾಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಪದೇ ಪದೆ ಪ್ರವಾಸ ಕೈಗೊಂಡರೂ ಪರಿಹಾರಕ್ಕೆ ಭರವಸೆ ನೀಡಿದಂತೆ ಹಣನೀಡಲಾಗದೆ ಕಂಗೆಟ್ಟಿದ್ದಾರೆ.
ಈ ಮಧ್ಯೆ ಬೇರೆ ಬೇರೆ ಇಲಾಖೆಗಳ ಹಣವನ್ನು ಡೈವರ್ಟ್ ಮಾಡುವ ಮೂಲಕ ಪರಿಸ್ಥಿತಿ ನಿಭಾಯಿಸಲು ಸರಕಾರ ಹೆಣಗಾಡುತ್ತಿದೆ. ಜಿಲ್ಲಾಡಳಿತಗಳೂ ಸರಕಾರದ ಮರ್ಯಾದೆ ಉಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿವೆ.
ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ 4ನೇ ಬಾರಿಗೆ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆ. ಮುಖ್ಯಮಂತ್ರಿ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರವಾಹ ಪರಿಹಾರದ ವಿವರ ನೀಡಿದ್ದಾರೆ. ಮುಖ್ಯಮಂತ್ರಿಗಳು ಎದುರಿಸಬಹುದಾದ ಮುಜುಗರ ತಪ್ಪಿಸಲು ಪ್ರಯತ್ನ ನಡೆಸಿದ್ದಾರೆ.
ಜಿಲ್ಲಾಧಿಕಾರಿ ನೀಡಿದ ಪ್ರಕಟಣೆ ಹೀಗಿದೆ
ಅಗಸ್ಟ 2019 ಮತ್ತು ಸಪ್ಟೆಂಬರ 2019ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಪ್ರವಾಹದಿಂದ 872 ಗ್ರಾಮಗಳಲ್ಲಿ ಬಾಧಿತವಾಗಿರುತ್ತವೆ. 1,12,702 ಕುಟುಂಬಗಳು ಬಾಧಿತವಾಗಿವೆ.
ಬೆಳಗಾವಿ ಜಿಲ್ಲೆಗೆ ಅತಿವೃಷ್ಟಿ/ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ರೂ.167.00 ಕೋಟಿ, ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಿಸಲು ರೂ.500.00 ಕೋಟಿ ಹಾಗೂ ಮೂಲಭೂತ ಸೌಕರ್ಯಗಳ ದುರಸ್ತಿ ಕುರಿತು ರೂ.200.00 ಕೋಟಿ ಹೀಗೆ ಒಟ್ಟು ರೂ.867.00 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾಗೂ ಪ್ರವಾಹದಿಂದ ಬಟ್ಟೆ ಹಾಗೂ ಗೃಹಬಳಕೆ ವಸ್ತುಗಳು ಹಾನಿಯಾದ ಒಟ್ಟು 1.12 ಲಕ್ಷ ಕುಟುಂಬಗಳ ಪೈಕಿ 1.12 ಲಕ್ಷ ಕುಟುಂಬಗಳಿಗೆ ತಲಾ ರೂ. 10 ಸಾವಿರದಂತೆ ಪರಿಹಾರ ಧನವನ್ನು ವಿತರಿಸಲಾಗಿದೆ.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾಗೂ ಪ್ರವಾಹದಿಂದಾಗಿ ಭಾದಿತರಾದ ಸಂತ್ರಸ್ತರಿಗೆ 10 ಕೆ.ಜಿ ಅಕ್ಕಿ, 01 ಕೆಜಿ ತೊಗರಿ ಬೇಳೆ, 01 ಕೆ.ಜಿ ಸಕ್ಕರೆ, 01 ಕೆ.ಜಿ ಉಪ್ಪು, 01 ಲೀಟರ್ ಪಾಮ್ ಎಣ್ಣೆ, 05 ಲೀಟರ್ ಸೀಮೆ ಎಣ್ಣೆ ಒಳಗೊಂಡ ವಿಶೇಷ ಆಹಾರ ಕಿಟ್‍ಗಳನ್ನು 1,08,268 ಕುಟುಂಬಗಳಿಗೆ ವಿತರಿಸಲಾಗಿದೆ.
ಕಾರ್ಯಾದೇಶ ನೀಡಲಾಗಿದೆ
ಜಿಲ್ಲೆಯಲ್ಲಿ ಒಟ್ಟು 69381 ಮನೆಗಳು ಹಾನಿಗೊಳಗಾಗಿರುತ್ತವೆ. ಅವುಗಳಲ್ಲಿ ದಾಖಲೆ ಸರಿ ಇರುವ 57432 ಮನೆಗಳ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿದೆ. ತಂತ್ರಾಂಶದಲ್ಲಿ ದಾಖಲಿಸಿದ ಮನೆಗಳ ಪೈಕಿ ದಾಖಲೆ ಸರಿ ಇರುವ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಮೊದಲ ಕಂತಾಗಿ 1 ಲಕ್ಷ ರೂಗಳನ್ನು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ ಮೊದಲ ಕಂತಾಗಿ 25,000 ರೂ ಮತ್ತು ಅಲ್ಪಸ್ವಲ್ಪ ಹಾನಿಗೊಳಗಾದ ಮನೆಗಳಿಗೆ ಪೂರ್ಣ ಪರಿಹಾರವಾಗಿ 25,000 ರೂಗಳಂತೆ ಒಟ್ಟು 25072 ಮನೆಗಳಿಗೆ 78.87 ಕೋಟಿ ರೂಗಳ ಪರಿಹಾರ ಧನವನ್ನು ಫಲಾನುಭವಿಗಳ ಬ್ಯಾಂಕ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಈ ಎಲ್ಲ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ತಿಗಾಗಿ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ.
ಇನ್ನುಳಿದ ಫಲಾನುಭವಿಗಳ ದಾಖಲೆ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದು, ದಾಖಲೆ ಸರಿಯಿರುವ ಫಲಾನುಭವಿಗಳಿಗೆ ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಹಾನಿಗೊಳಗಾದ ಮನೆಗಳ ಮೇಲಿನ ಎಲ್ಲ ಮಾಹಿತಿ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ಇವರ ವೆಬ್‍ಸೈಟ್ ವಿಳಾಸ: ashraya.karnataka.gov.in ನಲ್ಲಿ ಲಭ್ಯವಿರುತ್ತದೆ.
ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ
ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳಬೇಕು. ಎ ಮತ್ತು ಬಿ ವರ್ಗದ ಮನೆಗಳ ಮಾಲೀಕರು ತಮ್ಮ ಖಾತೆಗಳಿಗೆ ಪರಿಹಾರ ಧನ ಜಮೆಯಾದವರಿಗೆ ಈಗಾಗಲೇ ರಾಜೀವ ಗಾಂಧಿ ವಸತಿ ನಿಗಮದಿಂದ ಕಾರ್ಯಾದೇಶ ಗ್ರಾಮ ಪಂಚಾಯತಿ ಪಿಡಿಓರವರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಲಾಗಿನ್‍ನಲ್ಲಿ ಸೃಜನೆ ಆಗಿರುತ್ತದೆ. ಅದರಂತೆ ಎ, ಬಿ ವರ್ಗೀಕರಣದಲ್ಲಿನ ಹಾನಿಗೊಳಗಾದ ಮನೆಗಳ ಫಲಾನುಭವಿಗಳು ಮನೆಯ ನಿರ್ಮಾಣ/ ದುರಸ್ತಿ ಕಾಮಗಾರಿಯನ್ನು ಪ್ರಾರಂಭಿಸಬೇಕು. ಮೊದಲನೆ ಹಂತ ಪೂರ್ಣಗೊಳಿಸಿ, ಈ ಕುರಿತು ಭಾವಚಿತ್ರಗಳನ್ನು ಅಪಲೋಡ ಮಾಡಿದಲ್ಲಿ ಮುಂದಿನ ಕಂತಿನ ಅನುದಾನ ಬಿಡುಗಡೆಯಾಗುತ್ತದೆ.
ಅತಿವೃಷ್ಟಿ/ಪ್ರವಾಹದಿಂದ ಕೃಷಿ ಜಮೀನುಗಳಲ್ಲಿ ಹೊದಿಕೆಯಾದ ಮರಳು/ಹೂಳನ್ನು ನಿರ್ಜಲೀಕರಣ, ಭೂ ಕುಸಿತದಿಂದ ಆದ ಭೂಮಿ ನಷ್ಟದ ಕುರಿತು ಹಾಗೂ ಬೆಳೆ ಹಾನಿಯ ಜಂಟಿ ಸಮೀಕ್ಷಾ ಕಾರ್ಯವು ಪೂರ್ಣಗೊಂಡಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ 6.99 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ 2.21 ಲಕ್ಷ ಹೆಕ್ಷೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗೆ ಹಾನಿಯಾಗಿರುತ್ತದೆ. ಈ ಹಾನಿಯ ಜಂಟಿ ಸಮೀಕ್ಷೆ ಪೂರ್ಣಗೊಂಡಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ