ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಹಿಂಡಲಗಾ ಗ್ರಾಮ ಪಂಚಾಯತಿಯಲ್ಲಿ ಬೇರೆ ಭಾಷೆಯಲ್ಲಿ ರಸೀದಿ ನೀಡುವ ಜತೆಗೆ ಆಡಳಿತದಲ್ಲಿ ಕನ್ನಡ ಅನುಷ್ಠಾನವನ್ನು ನಿರ್ಲಕ್ಷಿಸಿರುವ ಬಗ್ಗೆ ಪರಿಶೀಲಿಸಿ ತಕ್ಷಣವೇ ಸಂಬಂಧಪಟ್ಟ ಪಂಚಾಯತ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಜು.೧೧) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂಡಲಗಾ ಪಂಚಾಯತಿಯಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸುತ್ತಿಲ್ಲ ಎಂದು ಕನ್ನಡ ಜಾಗೃತಿ ಸಮಿತಿಯ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎ.ಎಂ.ಪಾಟೀಲ ಅವರು, ಈಗಾಗಲೇ ಸಂಬಂಧಿಸಿದ ಪಂಚಾಯತ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದರು.
ಗ್ರಾಮ ಪಂಚಾಯತಿ ನೀಡಿರುವ ರಸೀದಿ ಅನ್ಯ ಭಾಷೆಯಲ್ಲಿ ನೀಡಿರುವುದು ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವಲ್ಲಿನ ವೈಫಲ್ಯತೆ ಎತ್ತಿ ತೋರಿಸುತ್ತದೆ. ಕಳೆದ ಬಾರಿಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಆಗಿರುವುದರಿಂದ ಕೂಡಲೇ ಪಿಡಿಓ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕನ್ನಡ ನಿರ್ಲಕ್ಷಿಸಿದರೆ ಸೂಕ್ತ ಕ್ರಮ:
ಕನ್ನಡ ಅನುಷ್ಠಾನದಲ್ಲಿ ಯಾವುದೇ ಇಲಾಖೆ ನಿರ್ಲಕ್ಷ್ಯ ತೋರಿಸಿದರೆ ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸುವ ಬಗ್ಗೆ ಪ್ರತಿ ಸಭೆಯಲ್ಲೂ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ಒತ್ತಾಯಿಸಿದರು.
ಜಾಹೀರಾತು ಫಲಕಗಳಲ್ಲಿ ನಿಯಮಾವಳಿ ಪ್ರಕಾರ ಇಂತಿಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆ ಮಾಡುವ ಕುರಿತು ಸಂಬಂಧಪಟ್ಟ ಜಾಹೀರಾತುದಾರರಿಗೆ ನೋಟಿಸ್ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.
ಅಂಗಡಿ-ಮುಂಗಟ್ಟುಗಳ ಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಅನ್ಯ ಭಾಷೆಗೆ ಪ್ರಾಧಾನ್ಯತೆ ನೀಡಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬ್ಯಾಂಕ್ ವ್ಯವಹಾರ-ಕನ್ನಡ ಕಡ್ಡಾಯ:
ಬ್ಯಾಂಕುಗಳ ರಶೀದಿಯಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು. ಅದೇ ರೀತಿ ಬ್ಯಾಂಕಿನ ಕರಾರುಪತ್ರಗಳನ್ನು ಕೂಡ ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು ಕ್ರಮ ವಹಿಸಬೇಕು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ರಶೀದಿ, ಕರಾರು ಪತ್ರಗಳನ್ನು ಕನ್ನಡದಲ್ಲಿ ಮುದ್ರಿಸಲು ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿ, ಒಂದು ತಿಂಗಳಿನಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆ, ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳನ್ನು ಕರೆಸುವ ಅಗತ್ಯವಿದೆ. ಅದೇ ರೀತಿ ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಕೆಲವು ನಗರಸಭೆ, ಪುರಸಭೆ ಸೇರಿಂದತೆ ಕೆಲ ಸ್ಥಳೀಯ ಸಂಸ್ಥೆಗಳು ಮರಾಠಿ ಭಾಷೆಯಲ್ಲಿ ಫಲಕಗಳನ್ನು ಅಳವಡಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಈ ಬಗ್ಗೆ ಒಂದು ಸಭೆ ನಡೆಸಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಕನ್ನಡ ಫಲಕ ಬಳಕೆಗೆ ನಿರ್ದೇಶನ ನೀಡುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅದೇ ರೀತಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ತಮ್ಮ ಕಚೇರಿಯ ಆಡಳಿತ ವೆಚ್ಚದಲ್ಲಿ ಅಳವಡಿಸುವಂತೆ ಕೂಡ ತಿಳಿಸಿದರು.
ಗಡಿ ತಾಲ್ಲೂಕುಗಳಲ್ಲಿರುವ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ತಕ್ಷಣ ನಿಯೋಜಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೋಷಾರೋಪಣೆ ಪಟ್ಟಿ ಕನ್ನಡದಲ್ಲಿ-ಲೋಕೇಶ್ ಕುಮಾರ್:
ಪೊಲೀಸ್ ಇಲಾಖೆಯಲ್ಲಿ ಕೆಲವು ಅನಿವಾರ್ಯ ಪ್ರಸಂಗ ಹೊರತುಪಡಿಸಿದರೆ ಬಹುತೇಕ ಆಡಳಿತ ವ್ಯವಹಾರ ಕನ್ಮಡದಲ್ಲಿಯೇ ನಡೆಯುತ್ತಿದೆ. ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಹಾಗೂ ದೋಷಾರೋಪಣೆ ಪಟ್ಟಿಯನ್ನು ಕೂಡ ಕನ್ನಡದಲ್ಲಿಯೇ ಸಲ್ಲಿಸಲಾಗುತ್ತಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್ ತಿಳಿಸಿದರು.
ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡದಲ್ಲಿಯೇ ಆಡಳಿತ ವ್ಯವಹಾರ ನಡೆಸುವುದು ನಮ್ಮ ಆದ್ಯತೆಯಾಗಿದೆ ಎಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ, ಶಿವಾನಂದ ಭಜಂತ್ರಿ, ರವಿ ಸೋಮಲಿಂಗಣ್ಣವರ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ