Kannada NewsKarnataka NewsLatest

ರಮೇಶ್ ಜಾರಕಿಹೊಳಿ ಜೊತೆ ಜಿಲ್ಲಾಧಿಕಾರಿ ಚರ್ಚೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಜಿಲ್ಲಾಧಿಕಾರಿಗಳು, ಶನಿವಾರ (ಮೇ 15) ಗೋಕಾಕಗೆ ತೆರಳಿ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಶಾಸಕರಾದ ರಮೇಶ್ ಜಾರಕಿಹೊಳಿ ಅವರ‌ ಜತೆ ಚರ್ಚೆ ನಡೆಸಿದರು.
ಕೋವಿಡ್ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಒದಗಿಸುವ ಕುರಿತು ಶಾಸಕರ ಸಮ್ಮುಖದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರ ಜತೆಯೂ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಕೋವಿಡ್ ಪರಿಣಾಮಕಾರಿಯಾಗಿ ನಿರ್ವಹಿಸುವ ಬಗ್ಗೆ ಸಲಹೆಗಳನ್ನು ಪಡೆದುಕೊಂಡರು.
ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ಆಕ್ಸಿಜನ್, ರೆಮಿಡಿಸಿವಿರ್ ಸಮರ್ಪಕವಾಗಿ ಪೂರೈಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಸೂಚನೆಯನ್ನು ನೀಡಿದರು.
ಇದಾದ‌ ಬಳಿಕ ಸ್ಥಳೀಯ ಅಧಿಕಾರಿಗಳ ಜತೆ ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಸೋಂಕಿತರನ್ನು ಆದಷ್ಟು ಬೇಗನೇ‌ ಪತ್ತೆ ಮಾಡಿ ಸಂಬಂಧಿಸಿದ ತಾಲ್ಲೂಕು ಆಸ್ಪತ್ರೆ ಅಥವಾ ಕೋವಿಡ್ ಕೇರ್ ಕೇಂದ್ರಗಳಲ್ಲಿ ಆರೈಕೆಗೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಸೋಂಕು ಹರಡಲು ಕಾರಣರಾಗುತ್ತಿರುವ ಸೋಂಕಿತರು ಮತ್ತು ಅವರ ಪ್ರಾಥಮಿಕ ಸಂಪರ್ಕಿತರನ್ನು ತ್ವರಿತವಾಗಿ ಗುರುತಿಸಬೇಕು. ಹೀಗೆ ಗುರುತಿಸಲಾದ ಸೋಂಕಿತರು, ಲಕ್ಷಣರಹಿತ ಸೋಂಕಿತರಿಗೆ ಅವರ ಆರೋಗ್ಯ ಸ್ಥಿತಿಗತಿ ಮತ್ತು ಅಗತ್ಯತೆ ಆಧರಿಸಿ ಚಿಕಿತ್ಸೆಗೆ ಕ್ರಮಕೈಗೊಳ್ಳಬೇಕು.
ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡುಬಂದರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯಸಭಾ ಸದಸ್ಯ‌ ಈರಣ್ಣ ಕಡಾಡಿ ಹಾಗೂ ಸಂಸದರಾದ ಮಂಗಲಾ ಅಂಗಡಿ ಅವರು, ಸರಕಾರದ ಮಾರ್ಗಸೂಚಿ ಪ್ರಕಾರ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ‌ ಒದಗಿಸಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕು ಆಸ್ಪತ್ರೆಗೆ ‌ಭೇಟಿ:
ಇದೇ ವೇಳೆ ಗೋಕಾಕ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯಸಭಾ ಸದಸ್ಯ‌ ಈರಣ್ಣ ಕಡಾಡಿ, ಸಂಸದರಾದ ಮಂಗಲಾ ಅಂಗಡಿ ಮತ್ತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಂಡರು.
ಆಕ್ಸಿಜನ್, ರೆಮಿಡಿಸಿವಿರ್ ‌ಲಭ್ಯತೆ ಹಾಗೂ ಬೆಡ್ ಗಳ ಕುರಿತು ಸ್ಥಳೀಯ ವೈದ್ಯಾಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಏನೇ ಸಮಸ್ಯೆಗಳಿದ್ದರೆ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು.
ನಂತರ ಗೋಕಾಕ ತಹಶಿಲ್ದಾರ ಕಚೇರಿಯಲ್ಲಿ ಆರಂಭಿಸಲಾಗಿರುವ ವಾರ್ ರೂಮ್ ಗೆ‌ ಭೇಟಿ ನೀಡಿ, ಕಾರ್ಯನಿರ್ವಹಣೆ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button