Belagavi NewsBelgaum NewsKannada NewsKarnataka NewsLatest

*ಪ್ರಸ್ತುತ ವರ್ಷದಲ್ಲಿ ಡಿಸಿಸಿ ಬ್ಯಾಂಕ್ ಗೆ 56.25 ಕೋಟಿ ರೂ. ಲಾಭ: ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ರೈತರು ಹಾಗೂ ಗ್ರಾಹಕರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನಿಟ್ಟು ಅಧಿಕ ಪ್ರಮಾಣದಲ್ಲಿ ಠೇವು ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಠೇವು ಬ್ಯಾಂಕಿಗೆ ಬಂದಿದೆ. ನಮ್ಮ ಹೊಸ ಆಡಳಿತವನ್ನು ಒಪ್ಪಿಕೊಂಡು ಗ್ರಾಹಕರು ವಿಶ್ವಾಸದಿಂದ ವ್ಯವಹಾರ ನಡೆಸುತ್ತಿದ್ದಾರೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಬ್ಯಾಂಕಿನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಪ್ರಸ್ತುತ ವರ್ಷದಲ್ಲಿ ಬ್ಯಾಂಕ್  56.25 ಕೋಟಿ ರೂ. ಲಾಭ ಗಳಿಸಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ತಿಳಿಸಿದರು‌.

ಗುರುವಾರದಂದು ಬ್ಯಾಂಕಿನ ಸಭಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಮತ್ತು ಗ್ರಾಹಕರ ಸ್ನೇಹಿಯಾಗಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 6703.36 ಕೋಟಿ ರೂಪಾಯಿ ಠೇವು ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 616.30 ಕೋಟಿ ರೂಪಾಯಿ ಹೆಚ್ಚು ಠೇವಣಿ ಹಣ ಸಂಗ್ರಹಿಸುವ ಮೂಲಕ ಮಹತ್ತರ ಸಾಧನೆಗೈದಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 4,77,464 ಜನ ರೈತರಿಗೆ 3818.79 ಕೋಟಿ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲವನ್ನು  ವಿತರಿಸಲಾಗಿದೆ. ಜಿಲ್ಲೆಯ ಒಟ್ಟು 444 ಜನ ರೈತರಿಗೆ 24.54 ಕೋಟಿ ರೂ. ಟ್ರ್ಯಾಕ್ಟರ್ ಸಾಲ ಹಾಗೂ ಪೈಪಲೈನ್ ಸಾಲ ವಿತರಿಸಲಾಗಿದೆ. 165 ಸಂಘಗಳಿಗೆ 22.89 ಕೋಟಿ ರೂ. ಗೋಡಾವಿನ ಸಾಲ ವಿತರಿಸಲಾಗಿದೆ. ಪ್ರತಿ ಮೆ.ಟನ್ ಗೆ 770 ರೂ. ವಿನಾಯತಿ ನೀಡಲಾಗುತ್ತಿದೆ ಎಂದು ಹೇಳಿದರು.

Home add -Advt

2025-26ನೇ ಸಾಲಿನ ಪ್ರಸಕ್ತ ಸಾಲಿನಲ್ಲಿ 8 ನೂತನ ಶಾಖೆಗಳನ್ನು ಪ್ರಾರಂಭಿಸಿದ್ದು, ಒಟ್ಟು 112 ಶಾಖೆಗಳು ಕೋರ್ ಬ್ಯಾಂಕಿಂಗ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿಯೇ ಪ್ರಪ್ರಥಮ ಜಿಲ್ಲೆಯ ಎಲ್ಲ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳ ಸಿಬ್ಬಂದಿಗಳಿಗೆ ಒಂದು ಲಕ್ಷ ರೂ. ಆರೋಗ್ಯ ವಿಮೆ, 5 ಲಕ್ಷ ರೂ. ಜೀವವಿಮೆ, 10 ಲಕ್ಷ ರೂ. ಅಪಘಾತ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.

ಜಿಲ್ಲೆಯ 3,64,204 ಜನ ರೈತ ಸದಸ್ಯರನ್ನು 2026-27ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯಲ್ಲಿ ಅಳವಡಿಸಲಾಗಿದೆ. ಪಿಕೆಪಿಎಸ್ ಸಂಘ ಗ್ರಾಮೀಣ ನಾಲ್ವರು ಸದಸ್ಯರ ಕುಟುಂಬಕ್ಕೆ 500 ರೂ. ವಂತಿಗೆ ಹಾಗೂ 4 ರ ಕ್ಕಿಂತ ಹೆಚ್ಚು ಪ್ರತಿ ಸದಸ್ಯರಿಗೆ 100 ಪಾವತಿಸುವುದು. 

ಎಸ್ ಸಿ/ ಎಸ್ ಟಿ ಸದಸ್ಯರಿಗೆ ಉಚಿತವಿದೆ. ಗರಿಷ್ಠ ನಾಲ್ಕು ಸದಸ್ಯರ ಕುಟುಂಬಕ್ಕೆ ಒಂದು ಸಾವಿರ ರೂ ವರೆಗೆ ಹಾಗೂ 4ಕ್ಕಿಂತ ಹೆಚ್ಚು ಪ್ರತಿ ಸದಸ್ಯರಿಗೆ 200 ರೂ. ವರೆಗೆ ಪಾವತಿಸಲಾಗುವುದು ಎಂದು ಹೇಳಿದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನಬಾರ್ಡ್ ಬ್ಯಾಂಕ್ ಮಾರ್ಗಸೂಚಿಗಳಿಗನುಗುಣವಾಗಿ ಸೈಬರ್ ಸುರಕ್ಷತಾ ಪ್ರೇಮ್ ವರ್ಕ್ ಬ್ಯಾಂಕಿನಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ 918 ಸ್ವ ಸಹಾಯ ಗುಂಪುಗಳಿಗೆ 36.18 ಕೋಟಿ ರೂ. ಸಾಲ ವಿತರಿಸಲಾಗಿದೆ. 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರ, 5 ಲಕ್ಷ ರೂ. ದಿಂದ 10 ಲಕ್ಷ ರೂ. ವರೆಗೆ ಶೇ. 4ರಷ್ಟು ಬಡ್ಡಿ ದರ ಇದೆ. ಕೃಷಿಯೇತರ ಸಾಲಗಳಾದ ದ್ವಿಚಕ್ರ ವಾಹನ, ಕಾರು, ಜೆ.ಸಿ.ಬಿ, ಟ್ರಕ್, ವಾಣಿಜ್ಯ ಬಾಡಿಗೆ ವಾಹನ, ಹೌಸಿಂಗ್ ಸಾಲ, ಮಾರ್ಟಗೇಜ್ ಸಾಲ, ವೈಯಕ್ತಿಕ ಸಾಲಗಳನ್ನು 160.28 ಕೋಟಿ ರೂ. ವಿತರಿಸಲಾಗಿದೆ. 173.36 ಕೋಟಿ ರೂ. ಬಂಗಾರ ಅಡುವಿನ ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ಎಲ್ಲ ಶಾಖೆಗಳಲ್ಲೂ ಎಟಿಎಂ ಸೌಲಭ್ಯ

ಬ್ಯಾಂಕಿನ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ತ್ವರಿತ ವ್ಯವಹಾರಕ್ಕಾಗಿ ಐಎಂಪಿಎಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಶೀಘ್ರದಲ್ಲಿ ಯುಪಿಐ ಸೇವೆ ಆರಂಭವಾಗಲಿದೆ. ಬ್ಯಾಂಕಿನ  ಪ್ರಧಾನ ಕಚೇರಿಯಲ್ಲಿ ಎಟಿಎಂ ಮಷಿನ್ ಸೌಲಭ್ಯ ಇದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ತಾಲೂಕು ಹಾಗೂ ಶಾಖೆಗಳಲ್ಲಿ ಎಟಿಎಂ ಯಂತ್ರ ಅಳವಡಿಸಲಾಗುತ್ತದೆ ಎಂದು ಜೊಲ್ಲೆಯವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಬೆಳಗಾವಿಯ ಖ್ಯಾತ ಉದ್ಯಮಿ ಜೆ.ಎನ್.ಶೆಟ್ಟಿ ಅವರು ಜಮೀನಿನ ಕಾಗದ ಪತ್ರಗಳನ್ನು ಇಟ್ಟು ಸಾಲ ಪಡೆದಿದ್ದಾರೆ.  ಶೆಟ್ಟಿ ಅವರು ಈ‌ ಜಾಗ ಖರೀದಿಸುವ ಮೊದಲು ಮುಜಾವರ ಎಂಬ ಕುಟುಂಬಕ್ಕೆ ಸೇರಿದ ಜಾಗ ಇದಾಗಿದೆ. ಮುಜಾವರ ಕಡೆಯಿಂದ ಶೆಟ್ಟಿ ಖರೀದಿ ಮಾಡಿದ್ದಾರೆ. ಈ ಜಾಗ ಎಸ್ ಪಿ ಅವರಿಗೆ ಸಂಬಂಧಿಸಿದ್ದಲ್ಲ. 1926ರಂದು ಪೊಲೀಸರು ಈ ಜಾಗದಲ್ಲಿ ಪ್ರವೇಶ ಮಾಡಿ ಗೋಲಿಬಾರ್ ಕಡೆಗೆ ಮಾತ್ರ ಇದೆ. ಈ ದಾಖಲೆಗಳನ್ನು ಪರಿಶೀಲಿಸುವಂತೆ ಹೈಕೋರ್ಟ್ ಆದೇಶ ಮಾಡಿದೆ. ಮಾಲೀಕರ ಹೆಸರಿನಲ್ಲಿಯೇ ಪಹಣಿ ಪತ್ರಗಳಿವೆ ಎಂದು  ಸ್ಪಷ್ಟಪಡಿಸಿದರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬ್ಯಾಂಕಿನ ಠೇವು ಸುಮಾರು 1622 ಕೋಟಿ ರೂಪಾಯಿ ಹೆಚ್ಚಳಗೊಂಡಿದೆ. ವಿರೋಧಿಗಳು ಬ್ಯಾಂಕಿನ ಕುರಿತು ಎಷ್ಟೇ ಅಪಪ್ರಚಾರ ನಡೆಸಿದರೂ ಬ್ಯಾಂಕಿನ ಶೇರುದಾರರು ಅವರ ವದಂತಿಗಳಿಗೆ ತಲೆ ಕೆಡಿಸಿಕೊಳ್ಳದೇ ನಮ್ಮ ಮೇಲೆ ವಿಶ್ವಾಸವಿಟ್ಟು, ಡಿಪಾಸಿಟ್ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆಯವರ ನೇತೃತ್ವದಲ್ಲಿ ಸುಮಾರು 10 ಸಾವಿರ ಕೋಟಿ ರೂಪಾಯಿ ಗಳವರೆಗೆ ಠೇವು ಸಂಗ್ರಹಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಬ್ಯಾಂಕಿಗೆ ರೈತರು ಮತ್ತು ಗ್ರಾಹಕರು ಆಧಾರವಾಗಿದ್ದಾರೆ ಎಂದು ಅರಭಾವಿ ಶಾಸಕರೂ ಆಗಿರುವ ಮತ್ತು ಬ್ಯಾಂಕಿನ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗೋಡೆ, ನೀಲಕಂಠ ಕಪ್ಪಲಗುದ್ದಿ, ವಿರುಪಾಕ್ಷ ಮಾಮನಿ,  ನಾನಾಸಾಹೇಬ ಪಾಟೀಲ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button