ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯದಲ್ಲಿ ಇಂದು ನಿರ್ಮಾಣವಾಗಿರುವ ಆತಂಕದ ವಾತಾವರಣ, ಸಮಾಜಘಾತುಕ ಶಕ್ತಿಗಳ ಹೆಚ್ಚಳಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರಗಳೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕುವ ಬದಲು ಪ್ರೋತ್ಸಾಹ ಕೊಟ್ಟಿದ್ದಾರೆ. ಅವರ ಮೇಲಿನ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರೆಲ್ಲ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ ಎಂದು ಗುಡುಗಿದರು.
ಬಿಜೆಪಿ ಸರ್ಕಾರ ಎಲ್ಲವನ್ನೂ ನಿಯಂತ್ರಣ ಮಾಡುವ ಪ್ರಯತ್ನ ಮಾಡಿದೆ. ಅದೆಷ್ಟೋ ಘಟನೆಗಳು ನಡೆಯುವ ಮುನ್ನವೇ ತಡೆಹಿಡಿಯಲಾಗಿದೆ. ಬಾಂಬ್ ತಯಾರಿಕೆಯ ಕೆಲ ವಸ್ತುಗಳು ಕಾರ್ಖಾನೆ ಉಪಯೋಗಕ್ಕೆ ಸಿಗುತ್ತೆ. ಅವುಗಳನ್ನ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಸಮಾಜಘಾತುಕ ಸಂಘಟನೆಗಳನ್ನ ಬ್ಯಾನ್ ಮಾಡುತ್ತೇವೆ. ಈಗಾಗಲೇ ನಾವು ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದೇವೆ. ಇಂತಹ ಸಂಘಟನೆಗಳನ್ನ ಬೆಳೆಯಲು ಬಿಟ್ಟರೆ ಅಪಾಯ ತಪ್ಪಿದ್ದಲ್ಲ ಎಂದರು.
ಇನ್ನು ಮಂಗಳೂರು ಬಾಂಬ್ ಪತ್ತೆ ಪ್ರಕರಣ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾಲಿಗೆ ಇದೆ ಎಂದು ಏನು ಬೇಕಾದ್ರು ಮಾತನಾಡಬಹುದು. ಆದರೆ, ಅವರ ಮಾತುಗಳಲ್ಲಿ ಅರ್ಥ ಇರಬೇಕು. ಬಾಂಬ್ ಇಟ್ಟಿರುವವ ಹಿಂದೆ ಹುಸಿ ಬಾಂಬ್ ಕರೆ ಮಾಡಿದ್ದ. ಈ ಬಾರಿ ತಾನೇ ಬಾಂಬ್ ಇಟ್ಟಿದ್ದೀನಿ ಅಂತ ಒಪ್ಪಿಕೊಂಡಿದ್ದಾನೆ.
ಆ ಬಗ್ಗೆ ತನಿಖೆ ನಡೆಯುತ್ತಿದೆ. ಮಾಹಿತಿ ತಿಳಿದುಕೊಂಡು ಮಾತನಾಡಲಿ. ಕುಮಾರಸ್ವಾಮಿಯವರು ಈಗಲಾದರೂ ಜವಬ್ದಾರಿಯಿಂದ ಹೇಳಿಕೆ ಕೊಡಲಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ