Latest

ಭಯಗೊಂಡು ಊರು ಖಾಲಿಮಾಡಬೇಡಿ ಎಂದು ಜನರಿಗೆ ಮನವಿ ಮಾಡಿದ ಡಿಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಭಯಭೀತರಾಗಿರುವ ಜನರು ಸಿಲಿಕಾನ್ ಸಿಟಿಯನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಲಾಕ್‍ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಹೀಗಾಗಿ ಯಾರೂ ಊರು ಖಾಲಿ ಮಾಡಬಾರದು ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಉಂಟಾಗಿದ್ದು, ರೋಗಿಗಳನ್ನು ಕರೆದುಕೊಂದು ಹೋಗಲು ಆಂಬುಲೆನ್ಸ್ ಗಳು ಕೂಡ ಸಿಗುತ್ತಿಲ್ಲ. ಹಲವು ಸೋಂಕಿತರು ಆಸ್ಪತ್ರೆಗಳಿಗೆ ಅಲೆದಾಡಿ ಮಾರ್ಗ ಮಧ್ಯೆ, ಮನೆಯಂಗಳದಲ್ಲೇ ಸಾವನ್ನಪ್ಪುತಿದ್ದಾರೆ. ರಾಜ್ಯ ರಾಜಧಾನಿಯ ಭೀಕರ ಸ್ಥಿತಿ ಬೆಂಗಳೂರಿಗರನ್ನು ತತ್ತರಗೊಳಿಸಿದ್ದು, ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದಿದ್ದ ಹಲವು ಜಿಲ್ಲೆ, ಹಳ್ಳಿಗಳ ಜನರು ಮನೆ ಖಾಲಿ ಮಾಡಿಕೊಂಡು ಮತ್ತೆ ಊರುಗಳತ್ತ ಹೊರಟಿದ್ದಾರೆ.

ಈ ನಿಟ್ಟಿನಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ, ಕೊರೊನಾ ಜಗತ್ತಿನೆಲ್ಲಡೆ ಹರಡಿದೆ. ಎಲ್ಲರೂ ಕೊರೊನಾ ಜೊತೆಯಲ್ಲೇ ಬದುಕುವ ಸ್ಥಿತಿ ಬಂದಿದೆ. ಹೀಗಾಗಿ ಇದಕ್ಕೆ ಯಾರೂ ಭಯ ಪಡಬೇಕಿಲ್ಲ. ಮತ್ತೆ ಲಾಕ್‍ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಯಾರೂ ಊರು ಖಾಲಿ ಮಾಡಬಾರದು. ಕೊರೊನಾಗೆ ಹೆದರಿ ಓಡಿ ಹೋಗಬಾರದು, ಜಗತ್ತಿಲ್ಲಿ ಎಲ್ಲಿಯೂ ಈ ರೋಗ ಬಿಟ್ಟಿಲ್ಲ. ಎಲ್ಲೆಡೆ ವೈರಸ್ ಹರಡುತ್ತಿದೆ. ಹೀಗಾಗಿ ಓಡಿ ಹೋಗಿ ಎಲ್ಲಾದರೂ ತಪ್ಪಿಸಿಕೊಳ್ಳುತ್ತೇನೆ ಎನ್ನುವಂಥ ರೋಗ ಇದಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು. ರೋಗದ ಲಕ್ಷಣ ಕಂಡುಬಂದಲ್ಲಿ ಎಲ್ಲರೂ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ಪಡೆಯಬೇಕು. ಈ ಮೂಲಕ ಗುಣಮುಖರಾಗಬೇಕು ಯಾರೂ ಬೆಂಗಳೂರು ಬಿಟ್ಟು ಊರುಗಳಿಗೆ ತೆರಳಬೇಡಿ ಎಂದರು.

Home add -Advt

Related Articles

Back to top button